ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಕೆರೆಯ ಸುತ್ತಮುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸದ ರಾಶಿ ಬಿದ್ದಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವರಾಜ ಯಲವಿಗಿ
ಕನ್ನಡಪ್ರಭ ವಾರ್ತೆ, ಸವಣೂರುತಾಲೂಕಿನ ಕಾರಡಗಿ ಗ್ರಾಮದ ಕೆರೆಯ ಸುತ್ತಮುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸದ ರಾಶಿ ಬಿದ್ದಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮಕ್ಕೆ ಇರುವುದು ಒಂದೇ ಕೆರೆ. ಇಲ್ಲಿ ರೈತರು ದನಕರುಗಳನ್ನು ಮೈ ತೊಳೆಯಲು ಹಾಗೂ ನೀರು ಕುಡಿಸಲು ನಿತ್ಯ ಕರೆತರುತ್ತಾರೆ. ಆದರೆ ಕೆರೆಯ ದಡದಲ್ಲಿ ಗೂಡಂಗಡಿಗಳನ್ನು ಇಟ್ಟುಕೊಂಡಿರುವ ವ್ಯಾಪಾರಸ್ಥರು ಅಂಗಡಿಯ ತ್ಯಾಜ್ಯ, ಪ್ಲಾಸ್ಟಿಕ್ ಕವರ್ ಹಾಗೂ ಬಾಟಲಿಗಳನ್ನು ಕೆರೆಯಲ್ಲಿ ಮತ್ತು ದಡದಲ್ಲಿ ಎಸೆಯುತ್ತಿದ್ದಾರೆ. ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ದುರ್ವಾಸನೆ ಹರಡುತ್ತಿದ್ದು, ನೊಣ ಹಾಗೂ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.ಗ್ರಾಮದಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂತೆ ಕರ ವಸೂಲಿ ಮಾಡುತ್ತಿದ್ದಾರೆ. ಆದರೂ ಗ್ರಾಮದ ಸ್ವಚ್ಛತೆಗೆ ಮುಂದಾಗದಿರುವುದು ಖೇದಕರ ಎಂದು ಸ್ಥಳೀಯ ನಿವಾಸಿ ಮೌಲಾಸಾಬ ಅವರು ಅಳಲು ತೋಡಿಕೊಂಡಿದ್ದಾರೆ.ಸವಣೂರದಿಂದ ಚಿಲ್ಲೂರ, ಕಾರಡಗಿ, ಹುಲಗೂರ, ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಉರ್ದು ಶಾಲೆ ಇದೆ. ಇಲ್ಲಿಗೆ ಬರುವ ರೋಗಿಗಳು, ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ದುರ್ನಾತಕ್ಕೆ ಮೂಗು ಮುಚ್ಚಿಕೊಂಡೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಲಿನ ನಿವಾಸಿಗಳು ರಸ್ತೆಯ ಮೇಲೆಯೇ ಕಸ ಸುರಿಯುವುದು ನಿರಂತರವಾಗಿ ನಡೆಯುತ್ತಿದೆ. "ರೋಗ ವಾಸಿ ಮಾಡುವ ಸ್ಥಳದ ಎದುರೇ ರೋಗ ಹರಡುವ ವಾತಾವರಣ ಇರುವುದು ವಿಪರ್ಯಾಸ " ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸತ್ತ ಗ್ರಾಮಸ್ಥರು ಹೇಳಿದ್ದಾರೆ.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ಬೇಕಾದವರ ಕರೆಗಳನ್ನು ಮಾತ್ರ ಸ್ವೀಕರಿಸುತ್ತಿದ್ದು, ಸಾರ್ವಜನಿಕರು ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಕರೆ ಸ್ವೀಕರಿಸದೆ ಉದಾಸೀನ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮದ ಅಭಿವೃದ್ಧಿ ಹಾಗೂ ಸ್ವಚ್ಛತೆ ಕಾಪಾಡುವುದು ಅಭಿವೃದ್ಧಿ ಅಧಿಕಾರಿಗಳ ಹೊಣೆ. ಆದರೆ ಈ ಹೊಣೆಯನ್ನು ಮರೆತು ತಮಗೆ ಬೇಕಾದಂತೆ ಅಧಿಕಾರ ನಡೆಸುವುದು ಸರಿಯಲ್ಲ. ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಪತ್ರ ಬರೆದರೂ ಸ್ಪಂದನೆ ಇಲ್ಲ: ಟಿಎಚ್ಒಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಕಲಾ ಜೆ., "ನಾವು ಈಗಾಗಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಅನೇಕರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಆದರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ " ಎಂದು ಹೇಳಿದ್ದಾರೆ.ಮಕ್ಕಳಿಗೆ ತೊಂದರೆ: ಬಿಇಒಕಾರಡಗಿ ಉರ್ದು ಶಾಲೆಯ ಮುಂದೆ ದುರ್ನಾತ ಬೀರುವ ಕಸವನ್ನು ತಂದು ರಸ್ತೆಗೆ ಸುರಿಯುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ ತಿಳಿಸಿದ್ದಾರೆ. "ಶಾಲೆಯ ಪಕ್ಕದಲ್ಲೇ ಮಕ್ಕಳು ಕಲಿಯುತ್ತಿದ್ದು, ನಿತ್ಯ ಮಧ್ಯಾಹ್ನದ ಬಿಸಿಯೂಟವನ್ನೂ ಇಲ್ಲೇ ಮಾಡುತ್ತಾರೆ. ಈ ಬಗ್ಗೆ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸುಧಾರಣಾ ಸಮಿತಿಯವರು ಪ್ರತಿ ಮನೆಗೆ ತೆರಳಿ ತಿಳುವಳಿಕೆ ನೀಡಿದರೂ ಅಲ್ಲಿಯೇ ಕಸ ಹಾಕುವುದು ನಿಂತಿಲ್ಲ. ನಾನು ಈಗಾಗಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಹಾಗೂ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇನೆ " ಎಂದು ಅವರು ಹೇಳಿದರು.
ಪಿಡಿಒ ಸ್ಪಂದನೆ ಇಲ್ಲ: ಕಸದ ರಾಶಿ ಹಾಗೂ ತ್ಯಾಜ್ಯ ವಿಷಯವಾಗಿ ಪ್ರತಿಕ್ರಿಯೆ ಪಡೆಯಲು ವರದಿಗಾರರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ, ಅವರು ಕರೆ ಸ್ವೀಕರಿಸದೆ ಉದಾಸೀನ ತೋರಿದ್ದಾರೆ.ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕೆರೆಯ ಸುತ್ತಲಿನ ಹಾಗೂ ಆಸ್ಪತ್ರೆ ಎದುರಿನ ರಸ್ತೆಯ ಕಸವನ್ನು ತೆರವುಗೊಳಿಸಬೇಕು. ಕಸ ಎಸೆಯುವವರ ವಿರುದ್ಧ ದಂಡ ವಿಧಿಸುವುದು, ಅಂಗಡಿಗಳಿಗೆ ಕಸದ ಡಬ್ಬಿ ಇಡುವಂತೆ ಸೂಚಿಸುವುದು ಹಾಗೂ ನಿಯಮಿತವಾಗಿ ಕಸ ಸಂಗ್ರಹಣೆ ಮಾಡುವ ವ್ಯವಸ್ಥೆ ಕಲ್ಪಿಸುವುದು ಅಗತ್ಯ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಳ್ಳುವರೇ ಎಂದು ಜನರು ಕಾದು ನೋಡುತ್ತಿದ್ದಾರೆ.