. ಹಾವೇರಿ ನಗರದ ಹೊರವಲಯದ ದೇವಗಿರಿ ಯಲ್ಲಾಪುರ ಬಳಿ ಭಾನುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಗೆ ಜನಸಾಗರವೇ ಹರಿದುಬಂದಿತ್ತು. ಹೋರಿ ಹಿಡಿಯುವ ವೇಳೆ 24 ಜನರಿಗೆ ಸಣ್ಣಪುಟ್ಟ ಗಾಯಗಳಾದರೆ, ನಾಲ್ವರು ಗಂಭೀರ ಗಾಯಗೊಂಡು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ಗೆ ಕಳುಹಿಸಲಾಗಿದೆ.
ಹಾವೇರಿ: ನಗರದ ಹೊರವಲಯದ ದೇವಗಿರಿ ಯಲ್ಲಾಪುರ ಬಳಿ ಭಾನುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಗೆ ಜನಸಾಗರವೇ ಹರಿದುಬಂದಿತ್ತು. ಹೋರಿ ಹಿಡಿಯುವ ವೇಳೆ 24 ಜನರಿಗೆ ಸಣ್ಣಪುಟ್ಟ ಗಾಯಗಳಾದರೆ, ನಾಲ್ವರು ಗಂಭೀರ ಗಾಯಗೊಂಡು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ಗೆ ಕಳುಹಿಸಲಾಗಿದೆ.
ಅಖಿಲ ಕರ್ನಾಟಕ ಜನಪದ ಕಲೆ ಹೋರಿ ಹಬ್ಬ ಹೋರಾಟ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ಗ್ರಾಮೀಣ ಸೊಗಡಿನಲ್ಲಿ ಸಂಭ್ರಮದಿಂದ ಜರುಗಿತು. ಬೆಳಗ್ಗೆ 9 ಗಂಟೆಗೆ ಆರಂಭವಾದ ಸ್ಪರ್ಧೆ ಸಂಜೆ 4 ಗಂಟೆಯವರೆಗೂ ನಡೆಯಿತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ 240ಕ್ಕೂ ಅಧಿಕ ಹೋರಿಗಳು ಅಖಾಡದಲ್ಲಿ ತಮ್ಮ ಓಟದ ಸಾಮರ್ಥ್ಯ ಪ್ರದರ್ಶಿಸಿದವು. ಸಾವಿರಾರು ಜನರು ಹೋರಿ ಹಬ್ಬವನ್ನು ಕಣ್ತುಂಬಿಕೊಂಡರು. ಹಲವು ರೋಚಕ ಕ್ಷಣಗಳಿಗೆ ನಗರದ ಹೊರವಲಯದ ದೇವಗಿರಿ ಯಲ್ಲಾಪುರ ಬಳಿಯಲ್ಲಿ ನಡೆದ ಹೋರಿ ಹಬ್ಬ ಸಾಕ್ಷಿಯಾಯಿತು. ವಾಹನ, ಹೋರಿಗಳನ್ನು ಒಯ್ಯುವವರಿಂದ ಹಾವೇರಿ ಬೈಪಾಸ್ ಬಳಿಯಿಂದ ಇಜಾರಿಲಕ್ಮಾಪುರವರೆಗೂ, ಅತ್ತ ದೇವಗಿರಿಗೆ ಹೋಗುವ ರಸ್ತೆ ಇಡಿ ದಿನ ಟ್ರಾಫಿಕ್ ಸಮಸ್ಯೆಯಾಯಿತು.ಸ್ಪರ್ಧೆಗೆ ಆಗಮಿಸಿದ್ದ ಹೋರಿಗಳು ವಿಶೇಷ ಅಲಂಕಾರದಿಂದ ನೋಡುಗರ ಗಮನ ಸೆಳೆದವು. ರೈತರು ತಮ್ಮ ಹೋರಿಗಳಿಗೆ ಝೂಲಾ, ಕೊಬ್ಬರಿ, ಗೆಜ್ಜೆ, ಕೊಂಬಣಸು, ರಿಬ್ಬನ್, ಬಣ್ಣಬಣ್ಣದ ಬಟ್ಟೆ ಹಾಗೂ ಬಲೂನುಗಳನ್ನು ಕಟ್ಟಿ ಸಿಂಗರಿಸಿದ್ದರು. ಒಂದೊಂದು ಹೋರಿಯ ಅಲಂಕಾರವೂ ವಿಭಿನ್ನವಾಗಿದ್ದು, ಗ್ರಾಮೀಣ ಜನಪದ ಸಂಸ್ಕೃತಿಯ ಸೊಬಗನ್ನು ಅನಾವರಣಗೊಳಿಸಿತು.ಹೋರಿ ಓಟಕ್ಕಾಗಿ ವಿಶೇಷ ಟ್ರ್ಯಾಕ್ ಹಾಗೂ ಗೇಟ್ ನಿರ್ಮಿಸಲಾಗಿತ್ತು. ಸಂಘಟಕರು ಮೈಕ್ ಮೂಲಕ ಸೂಚನೆ ನೀಡುತ್ತಿದ್ದಂತೆ ಒಂದೊಂದೇ ಹೋರಿಯನ್ನು ಅಖಾಡಕ್ಕೆ ಬಿಡಲಾಗುತ್ತಿತ್ತು. ಗೇಟ್ನಿಂದ ಹೊರಬರುತ್ತಿದ್ದಂತೆಯೇ ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ಹೋರಿಗಳನ್ನು ಹಿಡಿಯಲು ಯುವಕರು ಮುಗಿಬೀಳುತ್ತಿದ್ದರು. ಕೊಂಬಿಗೆ ಕಟ್ಟಿದ್ದ ಕೊಬ್ಬರಿ ಕಿತ್ತುಕೊಳ್ಳಲು ಯುವಕರ ನಡುವೆ ಪೈಪೋಟಿ ಏರ್ಪಡುತ್ತಿತ್ತು.ಹೋರಿಗಳ ಓಟದ ವೇಳೆ ಸಂಘಟಕರ ಎಚ್ಚರಿಕೆಯ ಮಾತುಗಳು ಮೈಕ್ನಲ್ಲಿ ನಿರಂತರವಾಗಿ ಮೊಳಗುತ್ತಿದ್ದವು. ''''''''ಹೋರಿ ಬಿಟ್ಟಾರಾ, ದೂರ ಸರೀರಿ... ಹಾಯೋ ಹೋರಿ ಬಂದೈತಿ, ಹಿಂದ ಸರಕೊಳ್ರಿ...'''''''' ಎಂಬ ಸೂಚನೆಗಳ ನಡುವೆಯೂ ಯುವಕರು ಹೋರಿಗಳ ಬೆನ್ನಟ್ಟಿ ಸಾಹಸ ಪ್ರದರ್ಶಿಸಿದರು. ಕೆಲವರು ಸಣ್ಣಪುಟ್ಟ ಗಾಯಗಳನ್ನೂ ಲೆಕ್ಕಿಸದೆ ಹೋರಿ ಹಿಡಿಯುವ ಪ್ರಯತ್ನ ಮಾಡಿದರು.ಹೋರಿ ಹಬ್ಬ ಕೇವಲ ಸ್ಪರ್ಧೆಯಾಗಿರದೆ ರೈತರ ಬದುಕಿನ ಭಾಗವಾಗಿರುವ ಜಾನಪದ ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿ ಮೂಡಿಬಂತು. ಹೋರಿಗಳ ಮೇಲಿನ ರೈತರ ಪ್ರೀತಿ, ಅವುಗಳ ಅಲಂಕಾರ, ಯುವಕರ ಸಾಹಸ ಮತ್ತು ಜನರ ಸಂಭ್ರಮ ಇಡೀ ಕಾರ್ಯಕ್ರಮಕ್ಕೆ ಹಬ್ಬದ ಕಳೆ ತಂದಿತ್ತು. ಗ್ರಾಮೀಣ ಕ್ರೀಡೆ ಹಾಗೂ ಜನಪದ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ವಿಶಿಷ್ಟ ಹೆಸರುಗಳಿಂದ ಗಮನ ಸೆಳೆದ ಹೋರಿಗಳು..ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಗಳಿಗೆ ಇಡಲಾಗಿದ್ದ ವಿಭಿನ್ನ ಹೆಸರುಗಳು ಮತ್ತೊಂದು ವಿಶೇಷವಾಗಿದ್ದವು. ಎನ್ಟಿಸಿ ಅಧಿಪತಿ, ಹಾವೇರಿ ಪವರ್, ರಾಣಿಬೆನ್ನೂರು ಕಾ ರಾಜಾ, ಬೆಳ್ಳಿ ತೇರು, ಹಿರೂರು ಬಸವ, ಬನಶಂಕರಿ ಎಕ್ಸಪ್ರೆಸ್, ಎನ್ಟಿಸಿ ಸರ್ಕಾರ, ಕೌರವ, ದೇವಗಿರಿ ಹುಲಿ, ರಾಜಾಹುಲಿ, ಹೆಬ್ಬುಲಿ, ಮಯೂರ, ಶರವೇಗದ ಸರದಾರ, ಪ್ರಳಯಾಂತಕ, ವೀರ ಮದಕರಿ, ಏಕಾಂಗಿ, ಅಂಜದ ಗಂಡು, ಸಂಗೊಳ್ಳಿ ರಾಯಣ್ಣ, ಬಹದ್ದೂರ ಗಂಡು, ಭಲೇ ಬಸವ, ರುದ್ರ, ಹಠವಾದಿ, ಕನಕದಾಸ ಸೇರಿದಂತೆ ಹಲವು ಹೆಸರುಗಳ ಹೋರಿಗಳು ಅಖಾಡದಲ್ಲಿ ಗಮನ ಸೆಳೆದವು.