ಕನ್ನಡಪ್ರಭ ವಾರ್ತೆ ಹೊಸದುರ್ಗ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ತಾಲೂಕಿನಲ್ಲಿ ನಾನು ಶಾಸಕನಾಗಿದ್ದಾಗ ಸರ್ಕಾರಿ ಯೋಜನೆಗಳಿಗೆ ಸರ್ಕಾರಿ ಭೂಮಿ ಬಳಸಿಕೊಂಡರೆ ಗಲಾಟೆ ಮಾಡಿಸುತ್ತಿದ್ದ ತಾಲೂಕಿನ ಮುಖಂಡರು ಈಗ ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗಿರುವುದನ್ನು ನೋಡಿದರೆ ಇಲ್ಲಿ ಭಾರಿ ಪ್ರಮಾಣದಲ್ಲಿ ಹಣದ ವ್ಯವಹಾರ ನಡೆದಿರುವ ಬಗ್ಗೆ ಅನುಮಾನ ಮೂಡುತ್ತಿದೆ. ಸರ್ಕಾರಿ ಜಾಗವನ್ನು ಹಣವಂತರ ಪಾಲಾಗಲು ನಾನು ಬಿಡುವುದಿಲ್ಲ ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿರುವ ಯಾವುದೇ ರೈತರು ಜಮೀನನ್ನು ಬಿಟ್ಟುಕೊಡಬೇಡಿ ನಿಮ್ಮ ಜತೆ ನಾನಿರುತ್ತೇನೆ ಒಂದು ವೇಳೆ ಅಲ್ಲಿಯ ಜನರನ್ನು ಒಕ್ಕಲೆಬ್ಬಿಸಲು ಮುಂದಾದರೆ ತಾಲೂಕು ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕಂಚೀಪುರ ಬಳಿ ಖಾಸಗಿ ಸೋಲಾರ್ ಕಂಪನಿಗೆ ಸರ್ಕಾರಿ ಜಾಗವನ್ನು ನೀಡಿದ್ದಾರೆ ಇಲ್ಲಿಯೂ ಹಣದ ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಹಣವಂತರಿಗೆ ಮಣೆ ಹಾಕುವ ಕೆಲಸ ತಾಲೂಕಿನಲ್ಲಿ ನಡೆಯುತ್ತಿದೆ. ವಿವಿ ಸಾಗರ ಜಲಾಶಯದ ಹಿನ್ನಿರಿನಲ್ಲಿ ಮುಳುಗಡೆಯಾಗಿರುವ ರೈತರಿಗೆ ಜಮೀನು ನೀಡಲು ಜಾಗವಿಲ್ಲ ಆದರೆ ಹಣವಂತರಿಗೆ ನೀಡಲು ಜಾಗವಿದೆಯಾ ಎಂದು ಪ್ರಶ್ನಿಸಿದ್ದಾರೆ.ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಲವು ಅಧಿಕಾರಿಗಳು ಗುಡ್ಡದ ನೇರಲಕೆರೆ ಇಟ್ಟಿಗೆ ಹಳ್ಳಿ ಭಾಗದಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿದ್ದು ಈಗ ಅಂತಹ ಜಾಗವನ್ನು ಖರೀದಿ ಮಾಡಿದಂತೆ ಮಾಡಿಕೊಂಡು ಈಗಿನ ಅಧಿಕಾರಿಗಳಿಂದ ನಕಲಿ ದಾಖಲೆಗಳನ್ನು ಅಸಲಿ ದಾಖಲೆಗಳನ್ನಾಗಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ.