ಗಲಭೆ ತಡೆಗಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲ; ಜೋಶಿ

KannadaprabhaNewsNetwork |  
Published : Sep 09, 2025, 01:01 AM IST
ಪ್ರಹ್ಲಾದ ಜೋಶಿ. | Kannada Prabha

ಸಾರಾಂಶ

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿಲ್ಲ. ಹಾಗಾಗಿಯೇ ಕಲ್ಲು ತೂರಾಟ ನಡೆದಿದೆ. ಇನ್ನು, ಸೋಮವಾರ ಬೆಳಗ್ಗೆ ಗಣೇಶ ವಿಸರ್ಜನೆಗೆ ಮುಂದಾದ ಅಮಾಯಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೆಲ್ಲ ಸರ್ಕಾರದ ಹಿಂದೂ ವಿರೋಧಿ ಮಾನಸಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಹುಬ್ಬಳ್ಳಿ: ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆಗೆ ಮಸೀದಿ ಮೇಲ್ಗಡೆಯಿಂದ ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಗಲಭೆ ತಡೆಗಟ್ಟುವ ಯೋಗ್ಯತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಿಂದಿನ ಗಲಭೆ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಕೊಡುವ ರೀತಿ ನಡೆದುಕೊಂಡಿದ್ದರಿಂದಲೇ ಇಂಥ ಕೃತ್ಯಗಳು ಮರುಕಳಿಸಲು ಕಾರಣ ಎಂದು ಆರೋಪಿಸಿದರು.

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿಲ್ಲ. ಹಾಗಾಗಿಯೇ ಕಲ್ಲು ತೂರಾಟ ನಡೆದಿದೆ. ಇನ್ನು, ಸೋಮವಾರ ಬೆಳಗ್ಗೆ ಗಣೇಶ ವಿಸರ್ಜನೆಗೆ ಮುಂದಾದ ಅಮಾಯಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೆಲ್ಲ ಸರ್ಕಾರದ ಹಿಂದೂ ವಿರೋಧಿ ಮಾನಸಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಖಂಡಿಸಿದರು.

ಪ್ರಕರಣ ಹಿಂಪಡೆದದ್ದೇ ಕಾರಣ: ಈ ಹಿಂದೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಸುಟ್ಟು, ಪೊಲೀಸರನ್ನೇ ಕೊಲ್ಲಲು ಪ್ರಯತ್ನಿಸಿದಂತಹ ಪ್ರಕರಣಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಹೀಗಾಗಿ ಮತಾಂಧ ಕಿಡಿಗೇಡಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಓಲೈಕೆಗಿಳಿದ ಪ್ರತಿಫಲವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಹರಿಹಾಯ್ದಿದ್ದಾರೆ.

ಹೋರಾಟದ ಎಚ್ಚರಿಕೆ: ಮದ್ದೂರಿನಲ್ಲಿ ಪೊಲೀಸರು ಅನಗತ್ಯವಾಗಿ ಗಣೇಶ ಭಕ್ತರಿಗೆ ತೊಂದರೆ ಕೊಡುವ ಕೆಲಸ ಮಾಡಿದರೆ ಅಲ್ಲಿಯೇ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಸರ್ಕಾರ ಹಿಂದೂಪರ ಹೋರಾಟಗಾರರು ಹಾಗೂ ಅಮಾಯಕ ಅಧಿಕಾರಿಗಳ ಮೇಲೆ ದರ್ಪ ತೋರುತ್ತದೆ. ಆದರೆ, ಗಣೇಶ ಹಬ್ಬ ಹಾಗೂ ಹಿಂದೂಗಳ ಹಬ್ಬದಾಚರಣೆ ವೇಳೆ ಕಾಲು ಕೆದರಿಕೊಂಡು ಬರುವವರ ಮೇಲೇಕೆ ದರ್ಪ ತೋರುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಗಣಪತಿ ಹಬ್ಬದ ಮೇಲೆ ನಿಯಂತ್ರಣ ಸಾಧಿಸುವಷ್ಟು ಹಠ ನಿಮಗೆ ಯಾಕೆ ಸಿದ್ದರಾಮಯ್ಯನವರೇ? ಅಶಾಂತಿ ಸೃಷ್ಟಿಸಿ, ಲಾಠಿ ಚಾರ್ಜ್ ಮಾಡುವ ಸ್ಥಿತಿ ನಿರ್ಮಾಣದ ಉದ್ದೇಶವೇನು? ಕಲ್ಲು ತೂರಿದವರು ಅಮಾಯಕರೇ? ಗಣಪತಿ ವಿಸರ್ಜನೆಗೆ ಸೇರಿದವರ ಮೇಲೆ ಲಾಠಿ ಚಾರ್ಜ್ ಯಾಕೆ? ನಾನೇ ಖುದ್ದು ಬರ್ತೀನಿ, ನೋಡೋಣ ಏನಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ನರೇಂದ್ರ ಗ್ರಾಮದ ಘಟನೆಗೆ ಖಂಡನೆ: ಧಾರವಾಡದ ನರೇಂದ್ರ ಗ್ರಾಮದಲ್ಲಿ ಅತ್ಯಂತ ಶಾಂತವಾಗಿ ನಡೆಯುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್‌ ಒಬ್ಬರು ಹೀಗೆ ಲಾಠಿ ಬೀಸಿದ್ದಾರೆ. ಕೇಳಿದರೆ ಎರಡು ಗಣೇಶ ಮೆರವಣಿಗೆ ಬರುತ್ತಿದ್ದವು ಎಂದಿದ್ದಾರೆ. ಇದ್ಯಾವ ನೀತಿ? ಎರಡು ಮೆರವಣಿಗೆ ಬರಬಾರದೇ ಎಂದು ಪ್ರಶ್ನಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು