ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಬಿ.ಇಡಿ ಪದವಿ ರಹಿತ ಉಪನ್ಯಾಸಕರಿಗೆ ವೇತನ ಸಹಿತ ಬಿ.ಇಡಿ ವ್ಯಾಸಂಗಕ್ಕೆ ಸರ್ಕಾರ ಅವಕಾಶ ನೀಡಿದೆ. ಇದರಿಂದ ಆತಂಕದಲ್ಲಿದ್ದ 364 ಉಪನ್ಯಾಸಕರಿಗೆ ನೆಮ್ಮದಿ ದೊರೆತಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ.ಎನ್.ಹರೀಶ್ ತಿಳಿಸಿದರು.ಅವರು ಇಲ್ಲಿಗೆ ಸಮೀಪದ ಮಾರಸಂದ್ರ ಪಿಕೆಬಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ 4 ಫೆಬ್ರವರಿ 2008ರ ನಂತರ ನೇಮಕವಾಗಿ ಅನುದಾನಕ್ಕೆ ಒಳಪಟ್ಟ ಬಿ.ಇಡಿ ರಹಿತ ಉಪನ್ಯಾಸಕರಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ವೃತ್ತಿ ಶಿಕ್ಷಣ ವಿಭಾಗದಿಂದ ಪದವಿ ಪೂರ್ವ ಕಾಲೇಜುಗಳಿಗೆ ವಿಲೀನವಾದ ಉಪನ್ಯಾಸಕರಿಗೆ ವೇತನ ಸಹಿತ ಬಿ.ಇಡಿ ವ್ಯಾಸಂಗಕ್ಕೆ ಅವಕಾಶ ಮಾಡಿಕೊಟ್ಟಂತೆ ನಮಗೂ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಖಾಸಗಿ ಅನುದಾನಿತ ಕಾಲೇಜುಗಳ ಉಪನ್ಯಾಸಕರು ಕಳೆದ ಹಲವು ವರ್ಷಗಳಿಂದ ನಿರತ ಹೋರಾಟ ಮಾಡಲಾಗುತ್ತಿದ್ದರು. ಪ್ರಸ್ತುತ ಸರ್ಕಾರ ಬಿ.ಇಡಿ ರಹಿತ ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸಿ ಉಪನ್ಯಾಸಕರ ಆತಂಕವನ್ನು ದೂರ ಮಾಡಿದೆ ಎಂದು ಹೇಳಿದರು.
ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಬಿ.ಇಡಿ ರಹಿತ ಉಪನ್ಯಾಸಕರಿಗೆ ವೇತನ ಸಹಿತ ಬಿ.ಇಡಿ ವ್ಯಾಸಂಗ ಮಾಡಲು ಶಿಕ್ಷಣ ಇಲಾಖೆಯಿಂದ ಆದೇಶವಾಗಲು ಮುಖ್ಯ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧುಬಂಗಾರಪ್ಪ, ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಪರಿಷತ್ತಿನ ಸದಸ್ಯರ ಸಹಕಾರ ಗಣನೀಯ ಎಂದು ತಿಳಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಆನಂದ ಮಾತನಾಡಿ, ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕನಿಷ್ಠ ದಾಖಲಾತಿಯನ್ನು 40ರಿಂದ 20ಕ್ಕೆ ಇಳಿಸಬೇಕಾಗಿದೆ. ಕಾರ್ಯಭಾರದ ಕೊರತೆಯಿರುವ ಉಪನ್ಯಾಸಕರಿಗೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜನೆ ಮಾಡಬೇಕು. ಶೂನ್ಯ ದಾಖಲಾತಿ ಇರುವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಅನುದಾನಿತ ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆ ಮಾಡಬೇಕೆಂದು ಸಂಘ ಹಲವು ಬಾರಿ ಶಿಕ್ಷಣ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ. ಬಿ.ಇಡಿ ರಹಿತ ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದಂತೆ ಈ ಸಮಸ್ಯೆಗಳಿಗೂ ಸರ್ಕಾರ ಆದೇಶ ಮಾಡಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಉಪಾಧ್ಯಕ್ಷ. ಎಸ್.ಬೋರಪ್ಪ ಮತ್ತು ಪದಾಧಿಕಾರಿಗಳು ಹಾಜರಿದ್ದರು.