ರಾಜ್ಯದಲ್ಲಿ ಬೃಹತ್ ಬಂಡವಾಳ ಹೂಡಿಕೆ ಮಾಡುವ ವಿವಿಧ ಕಂಪನಿಗಳ 13 ಹೂಡಿಕೆ ಪ್ರಸ್ತಾವನೆಗಳಿಗೆ ವಿಶೇಷ ರಿಯಾಯತಿ ಮತ್ತು ಉತ್ತೇಜನಗಳನ್ನು (ಇನ್ಸೆಂಟಿವ್ಸ್) ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಬೃಹತ್ ಬಂಡವಾಳ ಹೂಡಿಕೆ ಮಾಡುವ ವಿವಿಧ ಕಂಪನಿಗಳ 13 ಹೂಡಿಕೆ ಪ್ರಸ್ತಾವನೆಗಳಿಗೆ ವಿಶೇಷ ರಿಯಾಯತಿ ಮತ್ತು ಉತ್ತೇಜನಗಳನ್ನು (ಇನ್ಸೆಂಟಿವ್ಸ್) ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ನಿರ್ಧರಿಸಲಾಗಿದೆ.
ಈ ಬಗ್ಗೆ ಅಂತಿಮ ತೀರ್ಮಾನ ಮಾಡಲು ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ವಿವಿಧ ರಾಜ್ಯಗಳು ಕಂಪನಿಗಳಿಗೆ ವಿಶೇಷ ರಿಯಾಯಿತಿ ಹಾಗೂ ಉತ್ತೇಜನಗಳನ್ನು ನೀಡಿ ಹೂಡಿಕೆ ಸೆಳೆಯುತ್ತಿವೆ. ಹೀಗಾಗಿ ರಾಜ್ಯವೂ ಹೂಡಿಕೆ ಆಕರ್ಷಣೆಯಲ್ಲಿ ಮೇಲ್ಪಂಕ್ತಿ ಕಾಯ್ದುಕೊಳ್ಳಲು ಬೃಹತ್ ಬಂಡವಾಳ ಹೂಡಿಕೆ ಮಾಡುವ ಕಂಪನಿಗಳಿಗೆ ಕೈಗಾರಿಕಾ ನೀತಿಯಲ್ಲಿರುವ ರಿಯಾಯಿತಿ, ಉತ್ತೇಜನ ಜತೆಗೆ ವಿಶೇಷ ರಿಯಾಯಿತಿ ಕಲ್ಪಿಸಲು ಚರ್ಚಿಸಲಾಯಿತು.
ಈ ವೇಳೆ ₹150 ಕೋಟಿ ಮೊತ್ತದ ಹೂಡಿಕೆಯಿಂದ ಹಿಡಿದು ₹12,000 ಕೋಟಿ ಮೊತ್ತದ ಹೂಡಿಕೆವರೆಗೆ ವಿವಿಧ 13 ಹೂಡಿಕೆ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಸೋಲಾರ್ ಪ್ಯಾನೆಲ್ ಉತ್ಪಾದನೆ ಮಾಡುವ ಘಟಕ ಸೇರಿ ವಿಶೇಷ ಹೂಡಿಕೆಗಳಿಗೆ ಹೆಚ್ಚುವರಿ ಆದ್ಯತೆ ನೀಡಲು ತೀರ್ಮಾನಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಮಂಡಿಸಿ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಲಾಯಿತು.
ಯಾವ್ಯಾವ ರೀತಿ ಉತ್ತೇಜನ?:
ರಾಜ್ಯದಲ್ಲಿರುವ ಉದ್ಯಮ ಸ್ನೇಹಿ ವಾತಾವರಣದಿಂದಾಗಿ ನಾವು ಹೆಚ್ಚು ರಿಯಾಯಿತಿಗಳನ್ನು ನೀಡದಿದ್ದರೂ ಅತ್ಯುತ್ತಮ ಹೂಡಿಕೆಗಳು ಬರುತ್ತಿವೆ. ಹೀಗಾಗಿಯೇ ವಿದೇಶಿ ನೇರ ಹೂಡಿಕೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಆದರೆ, ಬೃಹತ್ ಹೂಡಿಕೆಗಳಿಗೆ ಕೈಗಾರಿಕೆ ನೀತಿಯಲ್ಲಿ ಅವಕಾಶವಿರುವ ರಿಯಾಯಿತಿ, ಉತ್ತೇಜನಗಳಿಗಿಂತ ಸ್ವಲ್ಪ ಹೆಚ್ಚು ಸೌಲಭ್ಯ ಕಲ್ಪಿಸಬೇಕು. ಇದಕ್ಕಾಗಿ ಬಂಡವಾಳ ಹೂಡಿಕೆ ಸಹಾಯಧನ, ಉತ್ಪಾದನೆ ಆಧಾರಿತ ಪ್ರೋತ್ಸಾಹಕ, ಸ್ಟಾಂಪ್ ಡ್ಯೂಟಿ ವಿನಾಯಿತಿ, ವಿದ್ಯುತ್ ತೆರಿಗೆ ರಿಯಾಯಿತಿ ನೀಡಬಹುದು ಎಂದು ಚರ್ಚಿಸಲಾಗಿದೆ.
ಆಂಧ್ರದಿಂದ ₹22,000 ಕೋಟಿ ಇನ್ಸೆಂಟಿವ್ಸ್:
ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಆಂಧ್ರಪ್ರದೇಶ ಸರ್ಕಾರವು ಅದಾನಿ ಹಾಗೂ ರೈಡೆನ್ ಇನ್ಫೋಟೆಕ್ ನಿರ್ಮಿಸಲಿರುವ ಗೂಗಲ್‌ನ ಎಐ ಡಾಟಾ ಸೆಂಟರ್ ಒಂದಕ್ಕೇ ₹22,002 ಕೋಟಿ ಇನ್ಸೆಂಟಿವ್ ಪ್ಯಾಕೇಜ್ ನೀಡಿದೆ. ಅದರಿಂದ 2,000 ಉದ್ಯೋಗ ಸೃಷ್ಟಿ ಆಗಬಹುದು. ಆದರೆ, 480 ಎಕರೆ ಭೂಮಿ ನೀಡಿ ಶೇ.25ರಷ್ಟು ರಿಯಾಯಿತಿ ನೀಡಿದ್ದಾರೆ. ಘಟಕದ ಬಂಡವಾಳ ಹೂಡಿಕೆ ಸಬ್ಸಿಡಿ ಶೇ.10ರಷ್ಟು ಎಂದರೆ ₹2,129 ಕೋಟಿ ಹಾಗೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ರಿಯಾಯಿತಿ ₹3,990 ಕೋಟಿ, ಮುಂದಿನ 15 ವರ್ಷಗಳವರೆಗೆ ವಿದ್ಯುತ್ ದರದ ಮೇಲೆ ಪ್ರತಿ ಯುನಿಟ್‌ಗೆ ₹1 ರಿಯಾಯಿತಿ ಸೇರಿ ₹22,002 ಕೋಟಿ ಇನ್ಸೆಂಟಿವ್ ಪ್ಯಾಕೇಜ್ ನೀಡಿದ್ದಾರೆ. ₹87,000 ಕೋಟಿ ಹೂಡಿಕೆಗೆ ಇಷ್ಟೊಂದು ಇನ್ಸೆಂಟಿವ್ಸ್ ನೀಡಲಾಗಿದೆ.
ಆದರೆ, ನಮ್ಮ ರಾಜ್ಯದಲ್ಲಿ ಇಂಥ ದುಬಾರಿ ಪ್ರೋತ್ಸಾಹಕಗಳನ್ನು ನೀಡುತ್ತಿಲ್ಲ. ಆದರೆ ಉತ್ತಮ ಹೂಡಿಕೆ ಪ್ರಸ್ತಾವನೆ ಹಿಡಿದಿಟ್ಟುಕೊಳ್ಳಲು ಅಲ್ಪಸ್ವಲ್ಪ ಹೆಚ್ಚುವರಿ ಉತ್ತೇಜನ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಈ ವೇಳೆ ಸಿದ್ದರಾಮಯ್ಯ ಅವರು ಪೂರಕವಾಗಿ ಸ್ಪಂದಿಸಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ ಜಾರ್ಜ್, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಎನ್.ಎಸ್.ಬೋಸುರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.