ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವ ಗುರುವಾರ ನಡೆಯಲಿದ್ದು ಸಮಾಜ ಸೇವಕ ಜಿತೇಂದ್ರ ಮಜೇಥಿಯಾ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುತ್ತಿದೆ.

ಶಿಕ್ಷಣ, ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರೊ. ಅಚ್ಯುತ್‌ ಸಾಮಂತ, ಸಾರ್ವಜನಿಕ ಆಡಳಿತ, ನ್ಯಾಯಾಂಗ ಸೇವೆಯಲ್ಲಿ ಜಿ.ಎಸ್‌. ಸಂಗ್ರೇಶಿ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಜಿತೇಂದ್ರ ಮಜೇಥಿಯಾ ಅವರಿಗೆ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ. ಎ.ಎಂ. ಖಾನ್‌ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್‌ ಸಂಸ್ಥಾಪಕರು ಹಾಗೂ ಅಧ್ಯಕ್ಷರೂ ಆಗಿರುವ ಜಿತೇಂದ್ರ ಡಿ. ಮಜೇಥಿಯಾ ತಮ್ಮ ಇಳಿವಯಸ್ಸಿನಲ್ಲೂ (75) ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಮುಂಬೈನಲ್ಲಿ ಜನಿಸಿರುವ ಅವರು 1975ರಲ್ಲಿ ಹುಬ್ಬಳ್ಳಿಗೆ ಬಂದು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ. ಪತ್ನಿ ರಮೀಲಾ ಮಜೇಥಿಯಾ ಅವರೊಂದಿಗೆ 5 ದಶಕಗಳಿಗೂ ಹೆಚ್ಚು ಕಾಲದ ಉದ್ಯಮ ಯಾತ್ರೆ ಆರಂಭಿಸಿ ಅಡಿಕೆ ವ್ಯಾಪಾರ, ರಿಯಲ್ ಎಸ್ಟೇಟ್, ಗಾಳಿಶಕ್ತಿ ಮತ್ತು ಸೌರಶಕ್ತಿ ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮ ಸ್ಥಾಪಿಸಿದರು. ಅವರ ದಾನ-ಧರ್ಮ ಚಟುವಟಿಕೆಗಳು ಉತ್ತರ ಕರ್ನಾಟಕದ ಸಾವಿರಾರು ಜನರ ಜೀವನಕ್ಕೆ ದಾರಿದೀಪವಾಗಿವೆ.

ಡಾ. ಅಚ್ಯುತ್‌:


ಪ್ರೊ. ಅಚ್ಯುತ ಸಾಮಂತ ಖ್ಯಾತ ಶಿಕ್ಷಣ ತಜ್ಞರು. ಸಮಾಜ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿರುವ ಅವರು 22ನೇ ವಯಸ್ಸಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ವಿಶ್ವವಿದ್ಯಾಲಯದ ಅತಿ ಕಿರಿಯ ಕುಲಪತಿಯಾಗಿ ಸೇವೆ ಸಲ್ಲಿಸಿದ ದಾಖಲೆ ಸಹ ಇವರ ಹೆಸರಿನಲ್ಲಿದೆ. ವಿಶ್ವದ ಮೊದಲ ಆದಿವಾಸಿ ವಿವಿ ಸ್ಥಾಪಕ ಕುಲಪತಿಗಳು ಹೌದು. ಆದಿವಾಸಿ ಮಕ್ಕಳಿಗೆ ಶಿಕ್ಷಣ ಎಂಬ ಬೆಳಕು ಹರಿಸುವಂತೆ ಮಾಡಿದ್ದು ಅಚ್ಯುತ್ ಸಾಮಂತಾ. ಆದಿವಾಸಿ ಅಷ್ಟೇ ಅಲ್ಲದೇ ಬಡ, ನಿರ್ಗತಿಕ ಮಕ್ಕಳನ್ನೂ ಗುರುತಿಸಿ ಅವರಿಗೆ ಶೈಕ್ಷಣಿಕ ಉಡುಗೊರೆ ಧಾರೆ ಎರೆಯುತ್ತಿದ್ದಾರೆ. ಯುಜಿಸಿ, ಎಐಸಿಟಿಇ ಹಾಗೂ ಎನ್‌ಸಿಟಿಇ ಸೇರಿದಂತೆ ಹಲವು ಶೈಕ್ಷಣಿಕ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ದೇಶ-ವಿದೇಶಗಳ ವಿಶ್ವವಿದ್ಯಾಲಯಗಳಿಂದ 60ಕ್ಕೂ ಹೆಚ್ಚು ಗೌರವ ಡಾಕ್ಟರೇಟ್‌ ಪಡೆದ ಇತಿಹಾಸವನ್ನು ಇವರು ಹೊಂದಿದ್ದಾರೆ.

ಸಂಗ್ರೇಶಿ..

ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜಿ.ಎಸ್. ಸಂಗ್ರೇಶಿ ಅವರಿಗೂ ಕವಿವಿ ಗೌಡಾ ಘೋಷಿಸಿದೆ. ನ್ಯಾಯಾಂಗ ಮತ್ತು ಸಾರ್ವಜನಿಕ ಆಡಳಿತ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಅವರು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೂನ್ 2024ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗಿ ಮತದಾರರ ಪಟ್ಟಿ ತಯಾರಿ, ನಗರ ಮತ್ತು ಗ್ರಾಮೀಣ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಆಯೋಜನೆ ಹಾಗೂ ಸಂವಿಧಾನಾತ್ಮಕ ನಿಯಮಗಳ ಅನುಸರಣೆ ಖಚಿತಪಡಿಸುವಲ್ಲಿ ಮಹತ್ವದ ಕ್ರಮಕೈಗೊಂಡಿದ್ದಾರೆ. ದೊಡ್ಡ ಮಟ್ಟದ ನಾಗರಿಕ ಚುನಾವಣೆಯ ನಿರ್ವಹಣೆ ಹಾಗೂ ಕಾರ್ಯಕ್ಷಮತೆ, ಜವಾಬ್ದಾರಿ ಮತ್ತು ಸಾರ್ವಜನಿಕ ವಿಶ್ವಾಸ ಹೆಚ್ಚಿಸುವ ವ್ಯವಸ್ಥೆಗಳ ಅನುಷ್ಠಾನದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.