ನೋಂದಣಿಯಾಗದ ಮೈಕ್ರೋ ಫೈನಾನ್ಸ್‌ಗಳು 30 ದಿನದೊಳಗೆ ನೋಂದಣಿ ಮಾಡಿಕೊಳ್ಳಿ: ಡಿಸಿ ಟಿ.ವೆಂಕಟೇಶ್
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ನೀಡುತ್ತಿದ್ದ ಕಿರುಕುಳ ತಡೆಗಟ್ಟಲು ಸರ್ಕಾರ ಸುಗ್ರೀವಾಜ್ಞೆ ಮೂಲಕ ಆದೇಶ ಜಾರಿಗೊಳಿಸಿದ್ದು, ಇದರ ಅನ್ವಯ ಎಲ್ಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿ ಸಂಸ್ಥೆಗಳು 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ಸರ್ಕಾರದ ಸುಗ್ರೀವಾಜ್ಞೆ ಆದೇಶ ಕುರಿತಂತೆ ಮಾಹಿತಿ ಹಾಗೂ ಸೂಚನೆ ನೀಡುವ ಸಲುವಾಗಿ ಜಿಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಗಿರವಿ, ಲೇವಾದೇವಿ ಸಂಸ್ಥೆಗಳು ಈ ಹಿಂದಿನ ಕಾಯ್ದೆಯಂತೆ ಸಹಕಾರ ಸಂಘಗಳ ಉಪ ನಿಬಂಧಕರಲ್ಲಿ ನೊಂದಣಿ ಮಾಡಿಕೊಂಡಿದ್ದರೂ ಕೂಡ, ಸರ್ಕಾರದ ಆದೇಶದ ಪ್ರಕಾರ ಎಲ್ಲರೂ ಜಿಲ್ಲಾಧಿಕಾರಿ ಕಚೇರಿಯಲ್ಲಿ 30ದಿನಗಳ ಒಳಗಾಗಿ ನೊಂದಣಿ ಮಾಡಿಕೊಳ್ಳಬೇಕು.
ಸಾಲಗಾರರು ಹಾಗೂ ಸಾಲ ನೀಡುವ ಸಂಸ್ಥೆಯ ನಡುವೆ ನಡೆಯುವ ಒಪ್ಪಂದವು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿ ಇರಬೇಕು. ಸಾಲ ನೀಡಿಕೆ, ವಸೂಲಾತಿ ವಿವರ, ಸಾಲಕ್ಕೆ ವಿಧಿಸಲಾಗುವ ಬಡ್ಡಿದರ, ಕಂತುಗಳ ವಿವರ, ಮರುಪಾವತಿ ತೀರುವಳಿ ಸೇರಿದಂತೆ ಯಾವುದೇ ಷರತ್ತು, ನಿಬಂಧನೆಗಳನ್ನು ಮುಚ್ಚಿಡದೆ, ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರಬೇಕು. ಬಲವಂತದ ವಸೂಲಾತಿ ಹಾಗೂ ನಿಯಮ ಉಲ್ಲಂಘನೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಜಾಮೀನು ರಹಿತ ಬಂಧನ ಆಗಲಿದೆ ಎಂದರು.
ಸಾಲ ನೀಡಿದ ಸಂಸ್ಥೆಗಳು, ಸಾಲ ಪಡೆದವರಿಂದ ಬಲವಂತದ ಸಾಲ ವಸೂಲಾತಿ ಮಾಡುವುದು, ಮನೆಯ ಕುಟುಂಬ ಸದಸ್ಯರಿಗೆ ಕಿರುಕುಳ ಕೊಡುವುದು, ಅವಹೇಳನಕಾರಿ ಹಾಗೂ ನಿಂದನೆಯ ಮಾತುಗಳನ್ನಾಡುವುದು, ದೈಹಿಕ ಹಲ್ಲೆ, ಹಿಂಸೆ, ದಾಖಲೆ ವಶದಲ್ಲಿಟ್ಟುಕೊಂಡು ಬೆದರಿಕೆ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಇಂತಹ ಯಾವುದೇ ದೂರುಗಳನ್ನು ಪೊಲೀಸ್ ಇಲಾಖೆ ನಿರಾಕರಿಸುವಂತಿಲ್ಲ, ಜೊತೆಗೆ ಇದು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಂತಹ ದೂರುಗಳ ಬಗ್ಗೆ ಡಿವೈಎಸ್‍ಪಿ ವೃಂದ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಡಿವೈಎಸ್‍ಪಿ ದಿನಕರ್, ಸಹಕಾರ ಸಂಘಗಳ ಉಪ ನಿಬಂಧಕ ದಿಲೀಪ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕುಮಾರ್ ಹಾಗೂ ಜಿಲ್ಲೆಯ ಹಲವು ಮೈಕ್ರೋ ಫೈನಾನ್ಸ್, ಗಿರವಿ ಲೇವಾದೇವಿ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.