ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆ

KannadaprabhaNewsNetwork |  
Published : May 04, 2026, 04:15 AM IST
30ಬಿಎಸ್ವಿ01- ಬಸವನಬಾಗೇವಾಡಿ ತಾಲೂಕಿನ ಟಕ್ಕಳಕಿ ಸಮೀಪವಿರುವ ಸರ್ಕಾರಿ ಪಾಲಿಟೆಕ್ನಿಕ್ ಬಸವನಬಾಗೇವಾಡಿ. | Kannada Prabha

ಸಾರಾಂಶ

ಬಸವರಾಜ ನಂದಿಹಾಳ ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದಿಂದ 8 ಕಿ.ಮೀ. ಅಂತರದಲ್ಲಿರುವ ಟಕ್ಕಳಕಿ ಗ್ರಾಮ ಹತ್ತಿರದ ಸರ್ಕಾರಿ ಪಾಲಿಟೆಕ್ನಿಕ್ 2021ರಲ್ಲಿ ಆರಂಭವಾದರೂ ವಿದ್ಯಾರ್ಥಿಗಳು ಬೆರಳಣಿಕೆಯಷ್ಟು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಪಾಲಿಟೆಕ್ನಿಕ್ ಎಲ್ಲ ಸೌಲಭ್ಯ ಹೊಂದಿದ್ದರೂ ನಿರರ್ಥಕವಾಗುತ್ತಿದೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದಿಂದ 8 ಕಿ.ಮೀ. ಅಂತರದಲ್ಲಿರುವ ಟಕ್ಕಳಕಿ ಗ್ರಾಮ ಹತ್ತಿರದ ಸರ್ಕಾರಿ ಪಾಲಿಟೆಕ್ನಿಕ್ 2021ರಲ್ಲಿ ಆರಂಭವಾದರೂ ವಿದ್ಯಾರ್ಥಿಗಳು ಬೆರಳಣಿಕೆಯಷ್ಟು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಪಾಲಿಟೆಕ್ನಿಕ್ ಎಲ್ಲ ಸೌಲಭ್ಯ ಹೊಂದಿದ್ದರೂ ನಿರರ್ಥಕವಾಗುತ್ತಿದೆ. ಪ್ರಸ್ತುತ 2 ವಿಭಾಗ ಸೇರಿದಂತೆ 55 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಾಲಿಟೆಕ್ನಿಕ್ ಪಟ್ಟಣದಿಂದ ತುಂಬಾ ದೂರ ಎಂಬ ಕಾರಣಕ್ಕೆ ಪ್ರವೇಶಗಳು ಕಡಿಮೆಯಾಗುತ್ತವೆ ಎಂಬ ಮಾತು ಕೇಳಿಬರುತ್ತಿವೆ. ವಿವಿಧೆಡೆಗಳಿಂದ ಬರುವ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗುವ ಕಾರಣದಿಂದ ಪ್ರವೇಶ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊಲ್ಹಾರಕ್ಕೆ ತೆರಳುವ ಬಸ್ ಬೆಳಗ್ಗೆ 9ಕ್ಕೆ ಮತ್ತು ಸಂಜೆ 4ಕ್ಕೆ ಪಾಲಿಟೆಕ್ನಿಕ್ ಬಂದು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಬಸ್ ಸೌಲಭ್ಯ ಮಾಡುವ ಅಗತ್ಯವಿದೆ. ಪಾಲಿಟೆಕ್ನಿಕ್ ಹೋಗಲು ಅಂದಾಜು ₹ 5 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಆದರೂ ನಿಷ್ಪ್ರಯೋಜಕವಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಸೌಲಭ್ಯ ಸಿಗಬೇಕೆಂಬ ಸದುದ್ದೇಶದಿಂದ ಪಟ್ಟಣದಿಂದ 8 ಕಿ.ಮೀ. ದೂರವಿರುವ ಮೊರಾರ್ಜಿ ವಸತಿ ಶಾಲೆ ಕ್ರಾಸ್‌ದಿಂದ 800 ಮೀಟರ್ ಒಳಗಡೆ ವಿಶಾಲವಾದ ಸರ್ಕಾರಿ ಜಾಗದಲ್ಲಿ ಈ ಪಾಲಿಟೆಕ್ನಿಕ್ ಕಟ್ಟಡ ನಿರ್ಮಿಸಿ ಅಗತ್ಯ ಸೌಲಭ್ಯವನ್ನು ಸರ್ಕಾರ ಒದಗಿಸಿದೆ. ಈ ಪಾಲಿಟೆಕ್ನಿಕ್ ಆರಂಭವಾದಾಗ ಆಟೋಮೊಬೈಲ್ ಇಂಜಿನಿಯರಿಂಗ್, ಫುಡ್ ಪ್ರೊಸೆಸಿಂಗ್ ಆ್ಯಂಡ್ ಪ್ರಿಜರ್ವೇಶನ್ ಇಂಜಿನಿಯರಿಂಗ್ 2 ವಿಭಾಗಗಳಿಗೆ ತಲಾ 60 ವಿದ್ಯಾರ್ಥಿಗಳನ್ನು ದಾಖಲಿಸಲು ಅವಕಾಶವಿತ್ತು. ಆರಂಭದಲ್ಲಿ 2 ವಿಭಾಗ ಸೇರಿ 70 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಈಗಾಗಲೇ 2 ಬ್ಯಾಚ್ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಇದುವರೆಗೂ ಶೇ.100ರಷ್ಟು ಫಲಿತಾಂಶವಾಗಿದೆ. ಇದುವರೆಗೂ ಒಟ್ಟು 45 ವಿದ್ಯಾರ್ಥಿಗಳು ಈ ಪಾಲಿಟೆಕ್ನಿಕ್‌ದಿಂದ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಕೆಲವರು ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. 3ನೇ ಬ್ಯಾಚ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಶನ್ ಇಂಜನಿಯರಿಂಗ್ ಮತ್ತೆ 2 ವಿಭಾಗಗಳು ಆರಂಭವಾಗಲಿವೆ. ಇದಕ್ಕೂ ತಲಾ 60 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಬಹುದು. ಈ ಪಾಲಿಟೆಕ್ನಿಕನಲ್ಲಿ 1 ಪ್ರಾಚಾರ್ಯ ಹುದ್ದೆಯಲ್ಲಿ ಪ್ರಭಾರಿ ಪ್ರಾಚಾರ್ಯ, 13 ಉಪನ್ಯಾಸಕರಲ್ಲಿ 3 ಉಪನ್ಯಾಸಕರು ಕಾಯಂ, 10 ಅತಿಥಿ ಉಪನ್ಯಾಸಕರು, 3 ಜನ ಕಾಯಂ ಸೊಪರಿಟೆಂಡೆಂಟ್, 4 ಎಫ್‌ಡಿಎ ಹುದ್ದೆಯಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದರೆ 2 ಹುದ್ದೆ ಖಾಲಿ ಇವೆ. ಎಸ್.ಡಿ.ಎ 5 ಹುದ್ದೆಗಳೂ ಖಾಲಿ ಇವೆ. 1 ರಜಿಸ್ಟಾರ್ ಹುದ್ದೆಯು ಖಾಲಿಯಿದೆ. ಈ ಶೈಕ್ಷಣಿಕ ವರ್ಷದಲ್ಲಿ ಮತ್ತೆ 2 ವಿಭಾಗಗಳು ಆರಂಭವಾದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಉಪನ್ಯಾಸಕರು, ವಿವಿಧ ಹುದ್ದೆಗಳು ಅಗತ್ಯವಿದೆ.

ಪಾಲಿಟೆಕ್ನಿಕ್ ಆವರಣದಲ್ಲಿ 85 ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಕಟ್ಟಡ ಸಜ್ಜುಗೊಂಡು, ಕಾಲೇಜಿಗೆ ಹಸ್ತಾಂತರವಾಗಿ 6 ತಿಂಗಳಾಗಿದೆ. ವಸತಿ ನಿಲಯ ಇನ್ನೂ ಆರಂಭವಾಗಿಲ್ಲ. ವಸತಿ ನಿಲಯ ಆರಂಭವಾದರೆ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಳ್ಳಬಹುದು. ಈಚೆಗೆ ವರ್ಕ್ ಶಾಪ್ ಕಟ್ಟಡವು ನಿರ್ಮಾಣವಾಗಿದೆ. ಕೆಲ ಉಪಕರಣಗಳು ಮಾತ್ರ ಬಂದಿವೆ. ಇನ್ನೂ ಹೆಚ್ಚಿನ ಅತ್ಯಾಧುನಿಕ ಉಪಕರಣಗಳು ಸೇರಿದಂತೆ ಅಗತ್ಯ ಉಪಕರಣಗಳು, ಪರ್ನಿಚರ್ ಬರಬೇಕಿದೆ. ಪಾಲಿಟೆಕ್ನಿಕ್ ಸುತ್ತಲೂ ಆವರಣಗೋಡೆ, ಸಮುದಾಯ ಭವನ, ಉದ್ಯಾನವನ, ಸೂಕ್ತ ಉಪಕರಣಗಳ ಅಗತ್ಯವಿದೆ.

ನಮ್ಮ ಕಾಲೇಜಿನಲ್ಲಿರುವ 4 ವೃತ್ತಿ ವಿಭಾಗಗಳಿಂದ ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸರ್ಕಾರಿ, ಖಾಸಗಿ, ಕಂಪನಿಗಳಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅವಕಾಶವಿದೆ. ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸಿದೆ. ನಮ್ಮ ಕಾಲೇಜಿನ ಬಗ್ಗೆ ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿರುವ ಎಲ್ಲ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಾಲಾ ಆರಂಭ, ಕೊನೆಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಪೂಡ್ ಪ್ರೊಸಸಿಂಗ್ ಆ್ಯಂಡ್ ಪ್ರಿಜರವೇಶನ್ (ಆಹಾರ ಸಂರಕ್ಷಣೆ ಮತ್ತು ಸಂಸ್ಕರಣಾ ವಿಭಾಗ) ರಾಜ್ಯದಲ್ಲಿ ಶಿರಾ, ಕೊಪ್ಪ ಬಿಟ್ಟರೆ ನಮ್ಮ ಕಾಲೇಜಿನಲ್ಲಿ ಮಾತ್ರ ಇದೆ. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವುದನ್ನು ಸಚಿವ ಶಿವಾನಂದ ಪಾಟೀಲರು ಪೂರೈಸಿದ್ದಾರೆ. ಈಗಾಗಲೇ ಪ್ರವೇಶ ಆರಂಭವಾಗಿವೆ. ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಪ್ರಯೋಜನ ಪಡೆದುಕೊಳ್ಳಬೇಕು.

-ಡಾ.ನಟರಾಜ ಕುಂಟೋಜಿ, ಪ್ರಭಾರಿ ಪಿನ್ಸಿಪಾಲರು, ಸರ್ಕಾರಿ ಪಾಲಿಟೆಕ್ನಿಕ್ ಬಸವನಬಾಗೇವಾಡಿ.(ಟಕ್ಕಳಕಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾರ್‌ಧಾಮ್‌ ಯಾತ್ರೆ ಹೆಸರಲ್ಲಿ26 ಮಂದಿಗೆ ₹15 ಲಕ್ಷ ಟೋಪಿ
ವಿದ್ಯುತ್‌, ವಾಣಿಜ್ಯ ಸಿಲಿಂಡರ್‌ಬೆನ್ನಲ್ಲೇ ತರಕಾರಿಯೂ ದುಬಾರಿ