ಬಿಜೆಪಿ ವಿರುದ್ಧ ಮಾನನಷ್ಟ ಕೇಸ್‌ಗೆ ಸರ್ಕಾರ ತಯಾರಿ

KannadaprabhaNewsNetwork |  
Published : May 26, 2025, 11:51 PM ISTUpdated : May 27, 2025, 10:13 AM IST
Karnataka Chief Minister Siddaramaiah (File Photo/ANI)

ಸಾರಾಂಶ

‘ರಾಜ್ಯ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷಗಳ ವೈಫಲ್ಯದ ಬಗ್ಗೆ ಚಾರ್ಜ್‌ಶೀಟ್‌’ ಎಂಬ ಹೆಸರಿನಲ್ಲಿ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

 ಬೆಂಗಳೂರು : ‘ರಾಜ್ಯ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷಗಳ ವೈಫಲ್ಯದ ಬಗ್ಗೆ ಚಾರ್ಜ್‌ಶೀಟ್‌’ ಎಂಬ ಹೆಸರಿನಲ್ಲಿ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಬಿಜೆಪಿಯು ಸುಳ್ಳು ಪ್ರಚಾರ ನಡೆಸಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಿದೆ.

ಈ ಸಂಬಂಧ ಮೊಕದ್ದಮೆಯ ಕರಡು ಸಿದ್ಧತೆ ನಡೆಸುತ್ತಿದ್ದು, ಸರ್ಕಾರಿ ವಕೀಲರು ಮಂಗಳವಾರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. 2-3 ದಿನಗಳಲ್ಲಿ ಕರಡು ಅಂತಿಮಗೊಳ್ಳಲಿದ್ದು, ಬಳಿಕ ಸರ್ಕಾರದ ಅನುಮತಿ ಪಡೆದು ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆ ಎಂದು ‘ಕನ್ನಡಪ್ರಭ’ಕ್ಕೆ ಸರ್ಕಾರದ ಮೂಲಗಳು ತಿಳಿಸಿವೆ.

ಮೇ 20 ರಂದು ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ನಾಯಕರು, ‘ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯ ಬಗ್ಗೆ ಆರೋಪ ಪಟ್ಟಿ’ ಎಂಬ ಹೆಸರಿನಲ್ಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಚಾರ ಮಾಡಿದ್ದರು. ಈ ವೇಳೆ ಮಾಡಿದ್ದ ಎಲ್ಲಾ ಆರೋಪಗಳು ಆಧಾರರಹಿತ ಹಾಗೂ ಸುಳ್ಳು ಪ್ರಚಾರಗಳು. ಹೀಗಾಗಿ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಗೃಹ ಇಲಾಖೆಯು ಭಾನುವಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಸರ್ಕಾರಿ ಅಭಿಯೋಜಕರಿಗೆ ಅಗತ್ಯವಿರುವ ಮಾಹಿತಿ ಒದಗಿಸಲು ಗೃಹ ಇಲಾಖೆಯ (ಕಾನೂನು ಮತ್ತು ಸುವ್ಯವಸ್ಥೆ) ಉಪ ಕಾರ್ಯದರ್ಶಿ ಕುಮಟಾ ಪ್ರಕಾಶ್ ಅವರನ್ನು ನೇಮಿಸಿದೆ.

ಅಲ್ಲದೆ, ಈ ಪ್ರಕರಣವನ್ನು ನಿರ್ವಹಿಸಲು 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಿ.ಎಸ್. ಪಾಟೀಲ್ ಮತ್ತು ಬೆಂಗಳೂರಿನ 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶೈಲಜಾ ನಾಯಕ್ ಅವರನ್ನು ನಿಯೋಜಿಸಿದೆ. ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕಾರ್ಯದರ್ಶಿಗೆ ದೂರು ಸಲ್ಲಿಸಲು ಅಧಿಕಾರ ನೀಡಿದೆ.

PREV
Read more Articles on

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ