ಧಾರವಾಡ: ಕನ್ನಡದ ಗುಡಿ ಎಂದೇ ಖ್ಯಾತಿ ಪಡೆದಿರುವ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಶಂಕರ ಹಲಗತ್ತಿ ನೇತೃತ್ವದ ಸಮಾನ ಮನಸ್ಕರ ಬಳಗವು ಎಲ್ಲ 15 ಹುದ್ದೆಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಸಂಘದಲ್ಲಿ 9104 ಮತದಾರರಿದ್ದು ಈ ಪೈಕಿ ಕಳೆದ ಭಾನುವಾರ ನಡೆದ ಚುನಾವಣೆಯಲ್ಲಿ ಶೇ. 50ರಷ್ಟು ಮತದಾರರು ಮತದಾನ ಮಾಡಿದ್ದರು. ಎರಡೂ ಬಣಗಳ ಮಧ್ಯೆ ತೀವ್ರ ಪೈಪೋಟಿ ನಡೆದು, ಚುನಾವಣೆಯಲ್ಲಿ ಹಾಲಿ ಆಡಳಿತದ ಮಂಡಳಿಯ ಎಲ್ಲ ಅಭ್ಯರ್ಥಿಗಳು ಗೆಲವು ಸಾಧಿಸಿ ಇತಿಹಾಸ ಬರೆದರು.
ಸೋಮವಾರ ನಡೆದ ಮತ ಎಣಿಕೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಚಂದ್ರಕಾಂತ ಬೆಲ್ಲದಗೆ 2328, ಪ್ರತಿಸ್ಪರ್ಧಿಗಳಾದ ಹನುಮಾಕ್ಷಿ ಗೋಗಿಗೆ 204, ಮೋಹನ ಲಿಂಬಿಕಾಯಿಗೆ 1816 ಹಾಗೂ ಚಂದ್ರಕಾಂತ ರಾಯರಗೆ 39 ಮತಗಳು ಬಂದಿವೆ. ಬೆಲ್ಲದ ಅವರು 512 ಮತಗಳ ಅಂತರದಿಂದ ಸಂಘದ ಅಧ್ಯಕ್ಷ ಸ್ಥಾನಕ್ಕೆ 2ನೇ ಬಾರಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಸಂಜೀವ ಕುಲಕರ್ಣಿಗೆ 2089, ಪ್ರತಿಸ್ಪರ್ಧಿಗಳಾದ ಶರಣಪ್ಪ ಕೊಟಗಿ 1349 ಹಾಗೂ ಡಾ. ಡಿ.ಎಂ. ಹಿರೇಮಠಗೆ 952 ಮತಗಳು ಬಿದ್ದು, ಡಾ. ಸಂಜೀವ ಕುಲಕರ್ಣಿ 740 ಮತಗಳ ಅಂತರದಿಂದ ಪುನರ್ ಆಯ್ಕೆಯಾದರು.
ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನ ಕಾರ್ಯದರ್ಶಿ ಪೈಪೋಟಿಯಲ್ಲಿ ಶಂಕರ ಹಲಗತ್ತಿ 2488 ಮತ ಪಡೆದು ಪ್ರತಿಸ್ಪರ್ಧಿ ಪ್ರಕಾಶ ಉಡಿಕೇರಿ ಅವರ ವಿರುದ್ಧ 559 ಮತಗಳ ಅಂತರದಿಂದ ಪುನಃರಾಯ್ಕೆಯಾದರು. ಸಹ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ ಕುಂಬಿ ಹಾಗೂ ಮಾರ್ತಾಂಡಪ್ಪ ಕತ್ತಿ ಮಧ್ಯೆ ನಡೆದ ಪೈಪೋಟಿಯಲ್ಲಿ ಕುಂಬಿ ಅವರು 2573 ಮತ ಪಡೆದು ಕತ್ತಿ ಅವರಿಗಿಂತ 796 ಮತಗಳ ಅಂತರದಿಂದ ಗೆಲವು ದಾಖಲಿಸಿದರು.
ಕಾರ್ಯಕಾರಿ ಸಮಿತಿ ಮಹಿಳಾ ಮೀಸಲಾತಿಯಲ್ಲಿ ವಿಶ್ವೇಶ್ವರಿ ಹಿರೇಮಠ ಅವರು ಪ್ರತಿಸ್ಪರ್ಧಿ ರತ್ನಾ ಐರಸಂಗ ಅವರಿಗಿಂತ 1265 ಹೆಚ್ಚು ಮತ ಪಡೆದು ಜಯಿಸಿದರೆ, ಕಾರ್ಯಾಕಾರಿ ಎಸ್ಸಿ-ಎಸ್ಟಿ ಮೀಸಲಾತಿಯಲ್ಲಿ ಧನವಂತ ಹಾಜವಗೋಳ ಅವರು ಡಾ. ವಿಶ್ವನಾಥ ಚಿಂತಾಮಣಿ ಅವರನ್ನು ಬರೀ 145 ಮತಗಳ ಅಂತರದಿಂದ ಸೋಲಿಸಿದರು.
ಕುಲಗೆಟ್ಟ ಮತಗಳು 624: ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 9104 ಮತದಾರರ ಪೈಕಿ ಶೇ. 50ರಷ್ಟು ಅಂದರೆ 4552 ಮತದಾರರು ಮತದಾನ ಮಾಡಿದ್ದಾರೆ. ಈ ಪೈಕಿ ವಿವಿಧ ಹುದ್ದೆಗಳಿಗೆ ಸೇರಿ ಒಟ್ಟು 624 ಮತಗಳು ಕುಲಗೆಟ್ಟಿವೆ. ಅಭ್ಯರ್ಥಿ ಎದುರು ಶೀಲು ಹಾಕುವ ಬದಲು ಕೆಲವರು ಸಹಿ ಮಾಡಿದ್ದಾರೆ. ಪಾಸ್, ಕಟಾಸ್ ಹೊಡೆದಿದ್ದಾರೆ. ಇನ್ನೂ ಕೆಲವರು ಮತಗಳನ್ನೇ ಹಾಕಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ 77, ಉಪಾಧ್ಯಕ್ಷ ಸ್ಥಾನಕ್ಕೆ 78, ಕಾರ್ಯಾಧ್ಯಕ್ಷ ಸ್ಥಾನಕ್ಕೆ 54, ಕೋಶಾಧ್ಯಕ್ಷ ಸ್ಥಾನಕ್ಕೆ 65, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 39, ಸಹ ಕಾರ್ಯದರ್ಶಿ ಸ್ಥಾನಕ್ಕೆ 53, ಕಾರ್ಯಕಾರಿ ಸಮಾನ್ಯ ಸ್ಥಾನಕ್ಕೆ 89, ಕಾರ್ಯಕಾರಿ ಮಹಿಳಾ ಸ್ಥಾನಕ್ಕೆ 60 ಹಾಗೂ ಕಾರ್ಯಕಾರಿ ಎಸ್ಸಿ-ಎಸ್ಟಿ ಸ್ಥಾನಕ್ಕೆ 109 ಮತಗಳು ಕುಲಗೆಟ್ಟಿವೆ. ಒಬ್ಬರಂತೂ ಮತ ಪೆಟ್ಟಿಗೆಯಲ್ಲಿ ಸಂಘಕ್ಕೆ ಸಾಹಿತಿಗಳ ಬದಲು ರಾಜಕಾರಣಿಗಳು ಬರಬೇಡಿ ಎಂದು ಮನವಿ ಮಾಡಿರುವ ಚೀಟಿ ಹಾಕಿದ್ದು ವಿಶೇಷ.
ಪಟಾಕಿ ಹಚ್ಚಿ ವಿಜಯೋತ್ಸವ: ಮತ ಎಣಿಕೆಯ ಆರಂಭದಿಂದಲೂ ಬೆಲ್ಲದ ಬಣದ ಅಭ್ಯರ್ಥಿಗಳು 100ಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡು ಬಂದರು. ಮಧ್ಯಾಹ್ನ ಊಟದ ನಂತರ ಬೆಲ್ಲದ ಬಣದ ತಂಡಕ್ಕೆ ಜಯ ನಿಶ್ಚಿತ ಎನ್ನಿಸಿತು. ಇನ್ನೇನು ಜಯ ತಮ್ಮದೇ ಎಂದ ತಕ್ಷಣ ಅವರ ಬೆಂಬಲಿಗರು ವಿಜೇತರಿಗೆ ಬಣ್ಣ ಎರಚಿ, ಸಿಹಿ ತನ್ನಿಸಿ ವಿಜಯೋತ್ಸವ ಆಚರಿಸಿದರು. ಆವರಣದ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಘದ ಮತದಾರರು, ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸಹ ಈ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.