ಚಳ್ಳಕೆರೆ ಮಾರುಕಟ್ಟೆ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ: ಶಾಸಕ ರಘುಮೂರ್ತಿ

KannadaprabhaNewsNetwork | Published : Mar 5, 2024 1:34 AM

ಸಾರಾಂಶ

ಚಳ್ಳಕೆರೆ ನಗರದ ಮಾರುಕಟ್ಟೆ ಆವರಣದಲ್ಲಿ ಕೃಷಿ ಉತ್ಪನ್ನ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು ೨.೫೦ ಕೋಟಿ ರು. ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ ಶಾಸಕ ಟಿ.ರಘುಮೂರ್ತಿ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ನೆರೆಯ ಆಂಧ್ರಪ್ರದೇಶದಿಂದಲೂ ಸಹ ವ್ಯವಹಾರ ಹೊಂದಿದ್ದು, ರಾಜ್ಯದಲ್ಲೇ ಉತ್ತಮ ಮಾರುಕಟ್ಟೆಯಾಗಿ ಪರಿವರ್ತನೆ ಯಾಗಿದೆ ಎಂದು ರಾಜ್ಯ ಸಣ್ಣಕೈಗಾರಿಕೆಗಳ ಮಂಡಳಿ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ಹೇಳಿದರು.

ರಾಜ್ಯದಲ್ಲಿ ಅತಿ ಹೆಚ್ಚು ವ್ಯವಹಾರ ಹೊಂದಿರುವ ಉತ್ತಮ ಲಾಭದತ್ತ ಮುನ್ನಡೆದಿರುವ, ರಾಜ್ಯದ ಎರಡನೇ ಮಾರುಕಟ್ಟೆ ಎಂಬ ಹೆಸರು ಗಳಿಸಿರುವ ಈ ಮಾರುಕಟ್ಟೆ ಹೊರಹೊಮ್ಮಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಇಲ್ಲಿಗೆ ಬರುವ ಖರೀದಿದಾರರು, ಮಾರುಕಟ್ಟೆದಾರರು, ರೈತರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸುಮಾರು ೨.೫೦ ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದವರು ತಿಳಿಸಿದರು.

ಅವರು, ಸೋಮವಾರ ಮಾರುಕಟ್ಟೆ ಆವರಣದಲ್ಲಿ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರಾಟ ಸಮಿತಿ ೨೦೨೨-೨೩ನೇ ಸಾಲಿನ ಕ್ರಿಯಾ ಯೋಜನೆಯಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು ೨.೫೦ ಕೋಟಿ ರು.ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ ಕೆಲವು ದಿನಗಳ ಹಿಂದೆ ಹುಣಸೆಹಣ್ಣು ಮಾರಾಟದ ವಿಚಾರದಲ್ಲಿ ರೈತರು ಮತ್ತು ವರ್ತಕರ ನಡುವೆ ಅಸಮದಾನ ಹೆಚ್ಚಾಗಿ ಮಾರುಕಟ್ಟೆ ವ್ಯವಹಾರಕ್ಕೆ ಅಡಿಯಾಗಿತ್ತು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸ ಬೇಕೆಂದು ಸೂಚನೆ ನೀಡಿದ್ದು, ಈಗ ಎಲ್ಲವೂ ಮಾಮೂಲಿಯಂತೆ ನಡೆಯುತ್ತಿದೆ ಎಂದರು.

ಆಡಳಿತಾಧಿಕಾರಿ ಶ್ಯಾಮ್, ಕಾರ್ಯದರ್ಶಿ ಸುರೇಶ್, ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ.ಅರವಿಂದ್, ಉಪಾಧ್ಯಕ್ಷ ಡಿ.ಎಂ.ತಿಪ್ಪೇಸ್ವಾಮಿ, ಕಾರ್ಯದರ್ಶಿ ವೆಂಕಟ ನಾಗರಾಜು, ಮಾಜಿ ಕಾರ್ಯದರ್ಶಿ ಸುರೇಶ್, ರೆಡ್ಡಿಹಳ್ಳಿ ಶಿವಣ್ಣ, ಸತೀಶ್, ಈಶ್ವರಪ್ಪ, ಪ್ರಕಾಶ್, ವೃಷಬೇಂದ್ರಪ್ಪ, ಮಾರುಕಟ್ಟೆ ಅಧಿಕಾರಿಗಳು ಗೌಸ್‌ಪೀರ್, ಭಾಷ, ಗಂಗಪ್ಪ, ನಗರಸಭಾ ಸದಸ್ಯೆ ಎಂ.ಸಾವಿತ್ರಮ್ಮ, ತಾಲ್ಲೂಕು ಮಾಜಿಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಪಾತಲಿಂಗಪ್ಪ, ಟಿಎಟಿ ಪ್ರಭುದೇವ್, ಸಿ.ಟಿ.ಶ್ರೀನಿವಾಸ್, ಕೋದಂಡರಾಮ ಮುಂತಾದವರು ಉಪಸ್ಥಿತರಿದ್ದರು.

Share this article