ಸರ್ಕಾರದ ಬರ ಪರಿಹಾರ ಭಿಕ್ಷೆಗಿಂತಲೂ ಕನಿಷ್ಠ: ಶಾಸಕ ಯತ್ನಾಳ

KannadaprabhaNewsNetwork |  
Published : Sep 30, 2026, 03:00 AM IST
ರಾಜ್ಯ ಸರ್ಕಾರದ ಬರ ಪರಿಹಾರ ಭಿಕ್ಷೆಗಿಂತ ಕನಿಷ್ಠ: ಶಾಸಕ ಯತ್ನಾಳ | Kannada Prabha

ಸಾರಾಂಶ

ರೈತರಿಗೆ ₹2,500 ನೀಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಇದು ಭಿಕ್ಷೆಗಿಂತ ಕನಿಷ್ಠವಾಗಿದೆ. ಭಿಕ್ಷೆ ಬೇಡುವವರು ಸಹ 100ಕ್ಕಿಂತ ಕಡಿಮೆ ಕೊಟ್ಟರೆ ವಾಪಸ್‌ ಕೊಡುತ್ತಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ

ರೈತರಿಗೆ ₹2,500 ನೀಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಇದು ಭಿಕ್ಷೆಗಿಂತ ಕನಿಷ್ಠವಾಗಿದೆ. ಭಿಕ್ಷೆ ಬೇಡುವವರು ಸಹ 100ಕ್ಕಿಂತ ಕಡಿಮೆ ಕೊಟ್ಟರೆ ವಾಪಸ್‌ ಕೊಡುತ್ತಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರಿಗೇ ಅನುದಾನ ತರಲು ಆಗುತ್ತಿಲ್ಲ. ತಮ್ಮ ಕ್ಷೇತ್ರಗಳನ್ನು ಬರಗಾಲ ಘೋಷಿಸಬೇಕೆಂದು ಅವರೇ ಹೋರಾಟ ಮಾಡುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್‌ ಸರ್ಕಾರದಲ್ಲಿ ಅವರದ್ದೇ ಶಾಸಕರಿಗೆ ಕಿಮ್ಮತ್ತಿಲ್ಲವೇ ಎಂದು ಪ್ರಶ್ನಿಸಿದರು.

ದಲಿತ ಅಧಿಕಾರಿ ಜ್ಞಾನೇಶಕುಮಾರ್‌ಗೆ ಅವಮಾನ:ಭಾರತೀಯ ಚುನಾವಣೆ ಆಯೋಗ ಕಳೆದ ಮೂರು ತಿಂಗಳಿನಿಂದ ಮ್ಯಾಪಿಂಗ್ ಹಾಗೂ ಎಸ್ಐಆರ್‌ ಮಾಡುವ ಮೂಲಕ ನಕಲಿ ಮತದಾರರನ್ನು ತೆಗೆದುಹಾಕಲಾಗುತ್ತಿದೆ. ಮುಖ್ಯ ಚುನಾವಣಾಧಿಕಾರಿ ಜ್ಞಾನೇಶಕುಮಾರ್‌ ಅವರು ದಲಿತ ಅಧಿಕಾರಿಯಾಗಿದ್ದು, ಪಶ್ಚಿಮ ಬಂಗಾಳ ಸೇರಿ ಅನೇಕ ಕಡೆ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಆದರೆ ಅವರ ಬಗ್ಗೆ ಕಾಂಗ್ರೆಸ್ ನಾಯಕರು ಅಪಮಾನಕರವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ವಿಜಯಪುರ ನಗರದಲ್ಲಿಯೂ ಕೆಲ ಮತಾಂಧ ಶಕ್ತಿಗಳು ಎಸ್‌ಐಆರ್‌ ಪ್ರಕ್ರಿಯೆ ಮಾಡುವ ವೇಳೆ ಬಿಲ್‌ಒಗಳಿಗೆ ತೊಂದರೆ ಕೊಟ್ಟಿವೆ. ನಗರದಲ್ಲಿ ರೆಹಮಾನ ಫೌಂಡೇಷನ್ ಹಾಗೂ ಸನಾ ಫೌಂಡೇಷನ್ ಬಳಸಿಕೊಂಡು ಮನೆಯಲ್ಲಿಯೇ ಕುಳಿತು ಎಸ್‌ಐಆರ್ ಮಾಡಿದ್ದಾರೆ. ಈ ವೇಳೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಕೆಲಸವನ್ನೂ ಮಾಡಿದ್ದಾರೆ. ಚುನಾವಣೆ ಅಧಿಕಾರಿಗಳ ಮೇಲೆ (ಬಿಎಲ್‌ಓ) ಗೂಂಡಾವರ್ತನೆ ತೋರುವ ಕೆಲಸ ಮಾಡಿದ್ದಾರೆ. ವೋಟು ಚೋರಿ ಮಾಡಲಾಗುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್‌ನವರೇ ವೋಟು ಚೋರಿ ಮಾಡಿದ್ದಾರೆ. ಜವಾಹರಲಾಲ್ ನೆಹರೂ ಅವರಿಗೆ 1 ವೋಟು, ಸರ್ದಾರ ವಲ್ಲಭಭಾಯಿ ಪಟೇಲರಿಗೆ 22 ವೋಟು ಬಿದ್ದರೂ ಜವಾಹರಲಾಲ್ ನೆಹರೂ ಅವರು ಹೇಗೆ ಪ್ರಧಾನಿಯಾದರು ಎಂದು ಪ್ರಶ್ನಿಸಿದರು.---ಬಾಕ್ಸ್----1

ಸಂಶಯ ಬಂದವರ ಬಗ್ಗೆ ಆಕ್ಷೇಪಣೆ:ಯಾರಿಗಾದರೂ ಎಸ್‌ಐಆರ್ ಬಗ್ಗೆ ಸಂಶಯವಿದ್ದಲ್ಲಿ ದೂರು ಕೊಡುವಂತೆ ಚುನಾವಣೆ ಆಯೋಗವೇ ತಿಳಿಸಿದೆ. ನಗರದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದ ಕೆಲ ಅಕ್ರಮ ವಲಸಿಗರು ಇದ್ದಾರೆ ಎಂಬ ಆತಂಕವಿದೆ. ನಗರ ಕ್ಷೇತ್ರದಲ್ಲಿ ಸತ್ತವರು, ವಲಸೆ ಹೋದವರು, ಎರಡೆರಡು ಕಡೆ ವೋಟರ್‌ ಐಡಿ ಹೊಂದಿರುವವರು, ನಕಲಿ ಮತದಾರರು ಇರಬಹುದು ಎಂದು ಕಂಡುಬಂದಿದೆ. ನಮಗೆ ಸಂಶಯವಿರುವ 16 ಸಾವಿರ ಮತದಾರರ ಮೇಲೆ ಫಾರಂ 7ರಲ್ಲಿ ಆಕ್ಷೇಪಣೆ ಕೊಡಲಾಗಿದ್ದು, ಚುನಾವಣಾಧಿಕಾರಿಗಳು ದಾಖಲೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್‌ ಪ್ರಕ್ರಿಯೆಗೂ ಮೊದಲು ಕ್ಷೇತ್ರದಲ್ಲಿ 2 ಲಕ್ಷ 96 ಸಾವಿರ ಮತದಾರರಿದ್ದು, ಪ್ರಕ್ರಿಯೆ ಬಳಿಕ 2 ಲಕ್ಷ 10 ಸಾವಿರಕ್ಕೆ ಇಳಿದಿದೆ. ಸರಿಯಾದ ದಾಖಲೆ ಇಲ್ಲದವರ ಮತಗಳು ಡಿಲೀಟ್ ಆಗಿವೆ. ಸರಿಯಾದ ದಾಖಲೆ ಕೊಟ್ಟರೆ ಮತ್ತೆ ಸೇರ್ಪಡೆ ಮಾಡಿಕೊಳ್ತಾರೆ. ಸರಿಯಾದ ಮತಗಳ ಪರಿಶೀಲನೆಗೆ ಯಾಕೆ ಹೆದರುತ್ತಿದ್ದೀರಿ ಎಂದು ಎದುರಾಳಿಗಳಿಗೆ ಪ್ರಶ್ನಿಸಿದರು.

ಎಂ.ಬಿ.ಪಾಟೀಲ್‌ ಟೆನ್ಷನ್‌ ಶೂರ:ಸಚಿವ ಎಂ.ಬಿ.ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳರು, ನನಗೆ ಬಕಾಸುರ ಎನ್ನುವ ಎಂ.ಬಿ.ಪಾಟೀಲರೇ ಟೆನ್ಷನ್ ಸೂರರಾಗಿದ್ದು, ಯಾವಾಗಲೂ ಟೆನ್ಷನಲ್ಲಿಯೇ ಇರುತ್ತಾರೆ ಎಂದು ಲೇವಡಿ ಮಾಡಿದ ಅವರು, ಮುಸ್ಲಿಮರಿಗೆ ಖುಷಿಪಡಿಸಲು ಯತ್ನಾಳ‌ನ್ನು ನೋಡುತ್ತೇನೆ. ಮುಂದಿನ ಬಾರಿ ಹೇಗೆ ಶಾಸಕರಾಗುತ್ತಾರೆ ಎಂಬುದನ್ನು ಬಿಡಿ. ಮೊದಲು ಬಬಲೇಶ್ವರ ನೋಡಿಕೊಳ್ಳಿ, ಗಬ್ಬು ನಾರುತ್ತಿದೆ. ಅದನ್ನು ಬಿಟ್ಟು ನನ್ನ ಬಗ್ಗೆ ಹುಚ್ಚರ ತರಹ ಮಾತನಾಡಿದರೆ ನಾನು ಎಲ್ಲದಕ್ಕೂ ತಯಾರಿದ್ದೇನೆ. ನಿಮ್ಮ ಸವಾಲು ಸ್ವೀಕರಿಸುತ್ತೇನೆ. ನಾನು ಹೇಗೆ ಶಾಸಕನಾಗುತ್ತೇನೆ ಎಂಬುದನ್ನು ನೀವು ನೋಡಿದರೆ, ನೀವು ಹೇಗೆ ಶಾಸಕರಾಗುತ್ತೀರಿ ಎಂಬುದನ್ನು ನಾನೂ ನೋಡುತ್ತೇನೆ. ನಾನು ಎಂ.ಬಿ.ಪಾಟೀಲರ ಹಂಗಿನಲ್ಲಿ ಶಾಸಕನಾಗಿಲ್ಲ. ನಿಮಗೆ ಕಷ್ಟ ಬಂದಾಗೆಲ್ಲ ನಿಂತವನು ನಾನೊಬ್ಬನೇ ಎಂದು ಶಾಸಕ ಯತ್ನಾಳ ಕಾಲೆಳೆದರು.

ಸುದ್ದಿಗೋಷ್ಠಿಯಲ್ಲಿ ಮೇಯರ್‌ ಎಂ.ಎಸ್.ಕರಡಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಮಲ್ಲಿಕಾರ್ಜುನ ಗಡಗಿ, ಶಿವರುದ್ರ ಬಾಗಲಕೋಟ, ಗಿರೀಶ ಪಾಟೀಲ, ಮುಖಂಡರಾದ ಚಂದ್ರು ಚೌಧರಿ, ಶಂಕರ ಹೂಗಾರ, ಗುರು ಗಚ್ಚಿನಮಠ ಇತರರಿದ್ದರು.

ಅ.6ರಂದು ಪ್ರತಿಭಟನಾ ಮೆರವಣಿಗೆ: ರಾಜ್ಯ ಸರ್ಕಾರದ ಭ್ರಷ್ಟಾಚಾರ‌ ಖಂಡಿಸಿ ಹಾಗೂ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹2,500 ಬರ ಪರಿಹಾರ ಕೊಡಬೇಕು ಮತ್ತು ಮುಖ್ಯ ಚುನಾವಣಾಧಿಕಾರಿ ಜ್ಞಾನೇಶಕುಮಾರ್‌ ಮೇಲಿನ ಆರೋಪ ಖಂಡಿಸಿ ಅಕ್ಟೋಬರ್‌ 6ರಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ