ಪಿಂಚಣಿ ಪಡೆಯಲು ಆದಾಯ ಮಿತಿ 32 ಸಾವಿರ ರು. ನಿಗದಿ । 1 ಲಕ್ಷ ಮಂದಿ ಸೌಲಭ್ಯದಿಂದ ವಂಚಿತ
ನಾನಾ ಯೋಜನೆಗಳ ಮೂಲಕ ಪಿಂಚಣಿ ಪಡೆಯಲು ಆದಾಯ ಮಿತಿಯನ್ನು 32 ಸಾವಿರ ರುಪಾಯಿಗೆ ಸರ್ಕಾರ ನಿಗದಿ ಮಾಡಿದ್ದು, ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಪಿಂಚಣಿದಾರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಆರ್ಥಿಕ ಭದ್ರತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅಂಗವಿಕಲರ ವೇತನ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ ಮೈತ್ರಿ ಮತ್ತು ಮನಸ್ವಿನಿ ಸೇರಿದಂತೆ ಯೋಜನೆಗಳ ಮೂಲಕ ಪಿಂಚಣಿಯನ್ನು ವಿತರಣೆ ಮಾಡುತ್ತಿದೆ. ಅದರಂತೆ ಅಂಗವಿಕಲರಿಗೆ 800 ರಿಂದ 1400, ವಿಧವಾ ವೇತನರಿಗೆ 800, ಮಾನಸಿಕ ಅಸ್ವಸ್ಥರಿಗೆ 2000, ವೃದ್ದಾಪ್ಯರಿಗೆ 600 ರಿಂದ 1200 ಹಾಗೂ ಮನಸ್ವಿನಿ ಯೋಜನೆಯ ಮೂಲಕ 800 ರು.ಗಳನ್ನು ನೀಡಲಾಗುತ್ತಿದೆ.ನಾನಾ ಯೋಜನೆಗಳಿಂದ ಪಿಂಚಣಿ ಪಡೆಯುವ ಫಲಾನುಭವಿಗಳು ಆರ್ಥಿಕ ಭದ್ರತೆಯನ್ನು ಕಂಡಿದ್ದರು. ಆದರೆ ಈಗ ಪಿಂಚಣಿಯನ್ನು ಪಡೆಯಲು ಸರ್ಕಾರ 32 ಸಾವಿರ ಆದಾಯದ ಮಿತಿಯನ್ನು ನಿಗದಿ ಮಾಡಲಾಗಿದೆ. ಪ್ರಸ್ತುತ ತಂತ್ರಾಂಶದ ಮೂಲಕ ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ಫಲಾನುಭವಿಗಳು ಪಿಂಚಣಿಯಿಂದ ದೂರ ಉಳಿದಿದ್ದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಸರ್ಕಾರ 23.13 ಲಕ್ಷ ಅನುಮಾನಾಸ್ಪದ ಪಿಂಚಣಿದಾರರು ಎಂದು ಗುರುತಿಸಲಾಗಿದ್ದು, ಈಗಾಗಲೇ 17.72 ಲಕ್ಷ ಪಿಂಚಣಿದಾರರನ್ನು ಕೈ ಬಿಡಲಾಗಿದೆ. ಕೋಲಾರ ಜಿಲ್ಲೆಯಲ್ಲಿಯೂ ಒಟ್ಟು 94,694 ಮಂದಿ ನಾನಾ ಯೋಜನೆಗಳ ಪಿಂಚಣಿಯಿಂದ ವಂಚಿತರಾಗುತ್ತಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ 10,339, ಕೆಜಿಎಫ್ 14,125, ಕೋಲಾರ 24,715, ಮಾಲೂರು 13,568, ಮುಳಬಾಗಲು 16,964, ಶ್ರೀನಿವಾಸಪುರ 14,947 ಪಿಂಚಣಿದಾರರು ಸೇರಿ ಒಟ್ಟು 94,694 ವಿವಿಧ ಯೋಜನೆಗಳ ಪಿಂಚಣಿಯಿಂದ ವಂಚಿತರಾಗುತ್ತಿದ್ದಾರೆ.
ಸರ್ಕಾರ ನಿಗದಿಪಡಿಸಿರುವ ದಿನದ ಕನಿಷ್ಠ ವೇತನವೇ 370 ರು. ಇದೆ. ಹೀಗಾಗಿ ತೀರ ಅವೈಜ್ಞಾನಿಕವಾಗಿರುವ 32 ಸಾವಿರ ಆದಾಯದ ಮಿತಿಯನ್ನು 1 ಲಕ್ಷದವರೆಗೂ ಏರಿಕೆ ಮಾಡಿದರೆ ಪಿಂಚಣಿಯಿಂದ ವಂಚಿತರಾದವರು ಮತ್ತೆ ಪಿಂಚಿಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಬಿಪಿಎಲ್ ಕಾರ್ಡು ಹೊಂದಿರುವ ಎಲ್ಲಾ ಪಿಂಚಣಿ ದಾರರಿಗೂ ಆದಾಯದ ಮಿತಿಯಲ್ಲಿ ವಿನಾಯಿತಿ ನೀಡಬೇಕು ಎಂಬುದು ಪಿಂಚಣಿ ವಂಚಿತರ ಅಭಿಪ್ರಾಯವಾಗಿದೆ.
ಸೂಲಿಕುಂಟೆ ಆನಂದ್, ದಲಿತ ಸಮಾಜ ಸೇವೆ ರಾಜ್ಯಾಧ್ಯಕ್ಷ.