ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ₹300 ಕೋಟಿ ಮಂಜೂರು । ಕುದುರೆಗುಂಡಿಯಲ್ಲಿ ಕಾಂಗ್ರೆಸ್ದಿಂ ನಿಂದ ಮೋದಿ ಇಳಿಸಿ- ದೇಶ ಇಳಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಯಾರಿಗೂ ನೆಮ್ಮದಿ ಇಲ್ಲವಾಗಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಟೀಕಿಸಿದರು.
ಶನಿವಾರ ರಾತ್ರಿ ತಾಲೂಕಿನ ಗಡಿ ಭಾಗದ ಕುದುರೆಗುಂಡಿ ಸರ್ಕಲ್ ನಲ್ಲಿ ಎನ್.ಆರ್.ಪುರ- ಕೊಪ್ಪ ತಾಲೂಕಿನ ಕಾಂಗ್ರೆಸ್ ನೇತೃತ್ವದಲ್ಲಿ ಸೀತೂರು, ಕಾನೂರು, ನುಗ್ಗಿ, ಬಿಂತ್ರವಳ್ಳಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದಿಂದ ಮೋದಿ ಇಳಿಸಿ- ದೇಶ ಇಳಿಸಿ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಶೃಂಗೇರಿ ಕ್ಷೇತ್ರದ ಅಭಿವೃದ್ದಿಗೆ ನಾನು ₹300 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕುದುರೆಗುಂಡಿ- ಮುಡುಬ ರಸ್ತೆಗೆ ಹಿಂದೆ ₹8 ಕೋಟಿ ಮಂಜೂರು ಮಾಡಿಸಿದ್ದೆ. ಮತ್ತೆ ₹5 ಕೋಟಿ ಮಂಜೂರಾಗಿದೆ. ಚಿಕ್ಕಮಗಳೂರು-ಬಾಳೆಹೊನ್ನೂರು-ಜಯಪುರ ರಸ್ತೆಗೆ ₹70 ಕೋಟಿ ಮಂಜೂರಾಗಿದೆ. ಸಿ.ಆರ್.ಎಫ್. ಪಂಡ್ ನಿಂದ ₹50 ಕೋಟಿ ತಂದಿದ್ದೇನೆ. ಕೊಪ್ಪ, ಜಯಪುರ ದಲ್ಲಿ ಸುಸಜ್ಜಿತ ಆಸ್ಪತ್ರೆ ಆಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರಿಗೆ ಉದ್ಯೋಗ ನೀಡಲು ಮಹಾತ್ತಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿತ್ತು. ಇದರಿಂದ ಬಡವರಿಗೆ ಉದ್ಯೋಗ ಸಿಕ್ಕಿತ್ತು. ಈಗ ಬಿಜೆಪಿ ಸರ್ಕಾರ ಅದನ್ನು ಬದಲಿಸಿದ್ದು 125 ದಿನ ಮಾತ್ರ ಉದ್ಯೋಗ ಸಿಗಲಿದೆ.ರಾಜ್ಯದ ತೆರಿಗೆಯನ್ನು ಕೇಂದ್ರ ವಸೂಲಿ ಮಾಡಿ ಬೆಲೆ ಏರಿಕೆ ಮಾಡುತ್ತಿದೆ. ನಮ್ಮ ತೆರಿಗೆ ಹಣ ನಮಗೆ ನೀಡಿದ್ದರೆ ರಾಜ್ಯಕ್ಕೆ ಬಲ ಬರುತ್ತಿತ್ತು ಎಂದರು.
ಬಿಜೆಪಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ₹2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಒಂದೂ ಉದ್ಯೋಗ ಸೃಷ್ಠಿಯಾಗಿಲ್ಲ. ಗ್ಯಾಸ್ , ರಸಗೊಬ್ಬರ, ಪೆಟ್ರೋಲ್, ಡೀಸೆಲ್ ಬೆಲೆ, ಬಂಗಾರದ ಬೆಲೆ ಗಗನಕ್ಕೇರಿದೆ. ಡಿಎಪಿ, ಯೂರಿಯಾ ಗೊಬ್ಬರದ ಕೊರತೆ ಇದೆ.ಮೋದಿ ಸರ್ಕಾರ ಯಾವುದೇ ದೊಡ್ಡ ಯೋಜನೆ ರೂಪಿಸಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿ ಗಳನ್ನು ಮತ ಪಟ್ಟಿಯಿಂದ ತೆಗೆಯುತ್ತಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಅಚ್ಚೇದಿನ್ ಬರುತ್ತಿದೆ ಎಂದು ಬಿಜೆಪಿ ಪ್ರಚಾರ ಮಾಡಿತ್ತು. ನಂತರ 60 ದಿನ ಕೊಡಿ ಎಂದರು. ಆಗಲೂ ಅಚ್ಚೇ ದಿನ್ ಬರಲಿಲ್ಲ. 60 ತಿಂಗಳು ಸಿಕ್ಕಿದರೆ ಸಾಕು ಎಂದರು. ಈಗ 12 ವರ್ಷ ಮುಗಿಸಿದರೂ ಅಚ್ಚೇ ದಿನ್ ಬರಲಿಲ್ಲ.ಈಗ ಹೊಸ ರಾಗ ತೆಗೆಯುತ್ತಿದ್ದು 2047 ಕ್ಕೆ ಅಚ್ಚೇ ದಿನ್ ಬರುತ್ತಿದೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ದೇಶದ ದೊಡ್ಡ ಉದ್ಯಮಿ ಅದಾನಿ, ಅಂಬಾನಿಗೆ ಅಚ್ಚೇದಿನ್ ಬರುತ್ತಿದೆ. ಮೋದಿ ಮಾತು ನಂಬಿ ಬಿಜೆಪಿಗೆ ಓಟು ಹಾಕಬೇಡಿ ಎಂದು ಮತದಾರರಿಗೆ ಕರೆ ನೀಡಿದರು.ಮೋದಿ ಸರ್ಕಾರದಲ್ಲಿ ಅಡಿಗೆ ಎಣ್ಣೆ ₹40 ರುಪಾಯಿಯಿಂದ ₹200 ಕ್ಕೆ ಏರಿಕೆ. ಮೈಲುತುತ್ತು ₹300 ರಿಂದ ₹500 ಕ್ಕೆ ಏರಿಕೆಯಾಗಿದೆ. ದೇಶದ ಮಾಜಿ ಪ್ರಧಾನಿಗಳಾದ ನೆಹರೂ, ಮನಮೋಹನ್ ಸಿಂಗ್, ದೇವೇಗೌಡ, ಗುಜ್ರಾಲ್ ಎಷ್ಟು ಶಿಕ್ಷಣ ಪಡೆದಿದ್ದರು ಎಂಬ ದಾಖಲೆ ಸಿಗುತ್ತಿದೆ. ಆದರೆ, ಮೋದಿ ಎಷ್ಟು ಶಿಕ್ಷಣ ಪಡೆದಿದ್ದಾರೆ ಎಂಬ ದಾಖಲೆ ಎಲ್ಲೂ ಸಿಗುತ್ತಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, 2014 ರಲ್ಲಿ ಯುಪಿಎ ಸರ್ಕಾರ ಇದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ₹62 ರುಪಾಯಿ ಇತ್ತು. ಆಗ ₹100 ರ ಗಡಿ ದಾಟಿದೆ. ಗ್ಯಾಸ್ ಬೆಲೆ ₹400 ರಿಂದ ₹1200ಕ್ಕೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ 4 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಏರಿಕೆ ಪರ್ವ ಪ್ರಾರಂಭ ವಾಯಿತು. ಸಾಮಾನ್ಯ ರೈತರು ಜೀವನ ಮೋಡುವುದೇ ಕಷ್ಟವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ ಗ್ರಾಮೀಣ ಭಾಗದ ಜನರಿಗೆ, ಬಡವರಿಗೆ ತೊಂದರೆಯಾಗುತ್ತಿದೆ. ಕೇಂದ್ರದ ಮೋದಿ ಸರ್ಕಾರಕ್ಕೆ ಜನ ಸಾಮಾನ್ಯರ ಬದುಕಿನ ಬಗ್ಗೆ ಖಾಳಜಿ ಇಲ್ಲ ಎಂದು ಟೀಕಿಸಿದರು.ಮುಖಂಡರಾದ ನುಗ್ಗಿ ಮಂಜುನಾಥ್, ಕುದುರೆಗುಂಡಿ ದೀಪಕ್, ಸುದೀಪ್ ಹೆಗ್ಡೆ, ಕೊಪ್ಪ ರಜತ್ ಗೌಡ, ದುರ್ಗಾ ಚರಣ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎನ್.ಪಿ.ರಮೇಶ, ಬಿ.ಕೆ.ನಾರಾಯಣಸ್ವಾಮಿ,ಕೆರೆಮನೆ ರತ್ನಾಕರ್, ಮನೋಹರ್, ಶ್ರೀಜಿತ್, ಎನ್.ರವಿ, ಬಿಂತ್ರವಳ್ಳಿ ಶಾಂತಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
-- ಬಾಕ್ಸ್ ==ಎನ್.ಆರ್.ಪುರ, ಕೊಪ್ಪ, ಶೃಂಗೇರಿಗೆ ಅನ್ಯಾಯ
ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ- ಎನ್.ಆರ್.ಪುರ- ಶೃಂಗೇರಿ ರೈಲು ಮಾರ್ಗವನ್ನು ಬದಲಾಯಿಸಿ ತೀರ್ಥಹಳ್ಳಿ ಮಾರ್ಗವಾಗಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಬಗ್ಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಗಮನ ನೀಡುತ್ತಿಲ್ಲ. ಇದರಿಂದ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಸುದೀರ್ ಕುಮಾರ್ ಮುರೊಳ್ಳಿ ಆರೋಪಿಸಿದರು.-- ಬಾಕ್ಸ್ --
ಸೀತೂರು ಗ್ರಾಮ ಪಂಚಾಯಿತಿಯ ನಾಗರಮಕ್ಕಿಯಲ್ಲಿ ₹14 ಕೋಟಿ ವೆಚ್ಚದಲ್ಲಿ ಪವರ್ ಸ್ಟೇಷನ್ ಮಾಡುವ ಪ್ರಸ್ತಾಪ ಇದೆ. ಜಾಗ ಹುಡುಕುತ್ತಿದ್ದೇವೆ. ಪವರ್ ಸ್ಟೇಷನ್ ಆದರೆ ಈ ಭಾಗದಲ್ಲಿ 24 ಗಂಟೆ ಉತ್ತಮ ಗುಣಮಟ್ಟದ ವಿದ್ಯುತ್ ಸಿಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.