ಸಿ ಅಂಡ್‌ ಡಿ, ಸೆಕ್ಷನ್-‌ 4 ಸಮಸ್ಯೆಗೆ ಸರ್ಕಾರದ ಸ್ಪಂದನೆ: ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ರೈತರು

KannadaprabhaNewsNetwork |  
Published : Dec 06, 2025, 03:15 AM IST
ಸಿ ಅಂಡ್‌ ಡಿ ಮತ್ತು ಸೆಕ್ಷನ್-‌೪ ಸಮಸ್ಯೆಗೆ ಸರ್ಕಾರದ ಸ್ಪಂದನೆ: ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ರೈತರು | Kannada Prabha

ಸಾರಾಂಶ

ನಿರಂತರ ಹೋರಾಟದಿಂದ ರಾಜ್ಯ ಸರ್ಕಾರ ಸಿ ಅಂಡ್ ಡಿ ಭೂಮಿಯ ಅನುಪಾಲನ ವರದಿಯನ್ನು ಸಲ್ಲಿಸಲು ವಿಶೇಷ ಸಮಿತಿ ರಚಿಸಿರುವುದರಿಂದ ರೈತರು ಉಸಿರಾಡುವಂತಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಿ ಆ್ಯಂಡ್ ಡಿ ಮತ್ತು ಸೆಕ್ಷನ್- 4 ಭೂತದಿಂದ ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಸಮಿತಿ ರಚನೆಯಿಂದ ಆಶಾಭಾವನೆ ಮೂಡಿದೆ. ಡಿಸೆಂಬರ್ 6 ರಂದು ಪ್ರತಿಭಟನೆಗೆ ತೀರ್ಮಾನಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ ಎಂದು ರೈತಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಹೇಳಿದರು.

ರೈತ ಹೋರಾಟ ಸಮಿತಿ ಮತ್ತು ರೈತ ಸಂಘದ ಪದಾಧಿಕಾರಿಗಳು ಜಂಟಿಯಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರೈತ ಹೋರಾಟ ಸಮಿತಿ, ರಾಜ್ಯ ರೈತಸಂಘ ಮತ್ತು ಗ್ರಾಮಾಭಿವೃದ್ಧಿ ಮಂಡಳಿಗಳ ನಿರಂತರ ಹೋರಾಟದಿಂದ ರಾಜ್ಯ ಸರ್ಕಾರ ಸಿ ಆ್ಯಂಡ್ ಡಿ ಭೂಮಿಯ ಅನುಪಾಲನ ವರದಿಯನ್ನು ಸಲ್ಲಿಸಲು ವಿಶೇಷ ಸಮಿತಿ ರಚಿಸಿರುವುದರಿಂದ ರೈತರು ಉಸಿರಾಡುವಂತಾಗಿದೆ ಎಂದರು.6 ತಿಂಗಳ ಒಳಗೆ ಅನುಪಾಲನ ವರದಿ ಸಲ್ಲಿಸುವಂತೆ ಸರ್ಕಾರ ಸಮಿತಿಗೆ ಗಡುವು ನೀಡಿದೆ. ಅಲ್ಲಿಯ ತನಕ ಅರಣ್ಯ ಇಲಾಖೆ ಸಿ ಆ್ಯಂಡ್ ಡಿ ವಿಚಾರದಲ್ಲಿ ರೈತರಿಗೆ ನೋಟೀಸ್ ಮಾಡಬಾರದು. ಸರ್ವೇ ಮಾಡಲು ಮುಂದಾಗಬಾರದು ಎಂದು ಹೇಳಿದರು. ಮುಕ್ಕೊಡ್ಲು ಗ್ರಾಮದ ರೈತ ಕಾಳಚಂಡ ನಾಣಿಯಪ್ಪ ಅವರ ಕಾಫಿ ತೋಟವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಡಿದು ನಾಶ ಮಾಡಿದ್ದಾರೆ. ಈ ಕ್ರಮದ ವಿರುದ್ಧ ಅರಣ್ಯಭವನದ ಎದುರು ರೈತರು ಪ್ರತಿಭಟನೆ ನಡೆಸಿ, ಕಾಫಿ ಗಿಡಗಳನ್ನು ಕಡಿದು ನಾಶ ಮಾಡಲು ಕಾರಣಕರ್ತರಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಹಿರಿಯ ಅಧಿಕಾರಿಗಳು ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಕ್ರಮಕೈಗೊಂಡಿಲ್ಲ. ಇನ್ನೊಮ್ಮೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವ ಮೊದಲು ಅಧಿಕಾರಿಗಳ ತಮ್ಮ ಮಾತು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಹೋರಾಟ ಸಮಿತಿ ಸಂಚಾಲಕ ವಕೀಲ ಬಿ.ಜೆ.ದೀಪಕ್ ಮಾತನಾಡಿ, 1950 ಮತ್ತು 70ರ ಇಸವಿಯಲ್ಲಿ ಅರಣ್ಯ ಇಲಾಖೆಯವರು ಬಹುತೇಕ ಗ್ರಾಮಗಳಲ್ಲಿ ಸೆಕ್ಷನ್-4 ನಲ್ಲಿ ಜಾಗವನ್ನು ಮೀಸಲಿಟ್ಟಿದ್ದಾರೆ. ಕೆಲವು ಗ್ರಾಮಗಳಲ್ಲಿ ಸಿ ಆ್ಯಂಡ್ ಡಿ ಭೂಮಿಯೊಳಗೆ ಸೆಕ್ಷನ್-4 ಜಾಗ ಗುರುತು ಮಾಡಲಾಗಿದೆ. ಸಿ ಮತ್ತು ಡಿ ಸಮಸ್ಯೆ ಬಗೆಹರಿದರೆ ಅರಣ್ಯ ಇಲಾಖೆಗೆ ಮೀಸಲಾಗಿರುವ ಸೆಕ್ಷನ್-4 ಜಾಗದ ಸಮಸ್ಯೆ ರೈತರಿಗೆ ಭೂತವಾಗಿ ಕಾಡುತ್ತದೆ. ಈ ಕಾರಣದಿಂದ ಸೆಕ್ಷನ್-4 ಜಾಗವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಶಾಸಕರು ಮತ್ತು ಸಂಸದರು ಈ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಸರ್ಕಾರ ಸಮಿತಿ ರಚಿಸುವುದಕ್ಕೆ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರ ಕೊಡುಗೆ ಅಪಾರವಾಗಿದೆ. ಮುಂದೆಯೂ ರೈತಪರವಾಗಿ ಅವರ ನಿಲುವನ್ನು ಆಶಿಸುತ್ತೇವೆ. ಸಮಿತಿಯಲ್ಲಿ ರೈತ ಮುಖಂಡರನ್ನು ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ರೈತ ಸಂಘದ ಮಚ್ಚಂಡ ಅಶೋಕ್, ಹಿರಿಕರ ರಮೇಶ್, ಸಮಿತಿಯ ಕಾರ್ಯದರ್ಶಿ ಕೂತಿ ದಿವಾಕರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟ್ಲ: 14ರಂದು ಸ್ವರ ಸಿಂಚನ ಸಂಗೀತ ಶಾಲೆ ದಶ ಸಂಭ್ರಮ
ರೈತರಿಗೆ ಅನ್ಯಾಯ ಮಾಡಿದರೆ ಕಂಪನಿ ವಾಪಾಸು ಕಳುಹಿಸಲು ಗೊತ್ತಿದೆ: ಮಿಥುನ್ ರೈ ಎಚ್ಚರಿಕೆ