ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್ಕಾರ ರೈತರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದೆ. ಕೆರೆಕಟ್ಟೆಗಳನ್ನು ತುಂಬಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದಾಗಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.ತಾಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ 3 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡು ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ. ವಿವಿಧ ಕಾಮಗಾರಿಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವುದಾಗಿ ಹೇಳಿದರು.
3 ಕೋಟಿ ರು. ವೆಚ್ಚದಲ್ಲಿ ಟಿ.ಎಂ ಹೊಸೂರು ಹಾಗೂ ಚಿನ್ನಾಯಕನಹಳ್ಳಿ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ರಸ್ತೆ ಅಭಿವೃದ್ಧಿಗೆ ಪ್ಯಾಕೇಜ್ ರೂಪದಲ್ಲಿ ಒಟ್ಟು 10 ಕೋಟಿ ರು. ಹಣ ಜಿಪಂ ಇಲಾಖೆ ಮೂಲಕ ಬಿಡುಗಡೆಯಾಗಿದೆ ಎಂದರು.ನೀರಾವರಿ ಇಲಾಖೆ ಮೂಲಕ ನಾಲಾ ಅಭಿವೃದ್ಧಿಗೆ ಸರ್ಕಾರ ಸುಮಾರು 180 ಕೋಟಿಯಷ್ಟು ಹಣವನ್ನು ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ನೀಡಿದೆ. ಈಗಾಗಲೇ ಕೆಲವು ನಾಲಾ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿವೆ. ನಾಲೆಗಳ ನೀರು ಸ್ಥಗಿತಗೊಂಡ ನಂತರ ಮತ್ತೆ ಕಾಮಗಾರಿಗಳು ನಡೆಯುತ್ತವೆ. ಕಳೆದ ಬಾರಿ ಸಹ 70 ಕೋಟಿಯಷ್ಟು ಹಣ ನೀಡಿತ್ತು. ಟೆಂಡರ್ ನಡೆದು ಆ ಕೆಲಸಗಳು ನಡೆದಿಲ್ಲ, ಅವುಗಳನ್ನು ಈ ಬಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.
ಅಲ್ಲದೆ ಶ್ರೀರಂಗಪಟ್ಟಣ ವ್ಯಾಪ್ತಿ ವಿವಿಧೆಡೆ ಕಾವೇರಿ ನದಿ ತೀರದಲ್ಲಿ ಅಸ್ತಿ ಬಿಡುವ ಮೂಲಕ ಅಶುಚಿತ್ವ ಎದ್ದು ಕಾಣುತ್ತಿತ್ತು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.ಈ ವೇಳೆ ಮುಂಡುಗದೊರೆ ಗ್ರಾಪಂ ಅಧ್ಯಕ್ಷೆ ಪದ್ಮ ಸೋಮೇಶ್, ಸದಸ್ಯ ಎಚ್.ಸಿದ್ದಪ್ಪ, ಗುತ್ತಿಗೆದಾರ ಗೋವಿಂದಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
----------ಪಾಲಹಳ್ಳಿ ಸೇಂಟ್ ಆನ್ಸ್ ಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ
ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಸೇಂಟ್ ಆನ್ಸ್ ಶಾಲೆಯಲ್ಲಿ 2004- 05ನೇ ಸಾಲಿನ ಎಸ್ಸೆಸ್ಸೆಲ್ಸಿ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕೆ.ಆರ್.ಎಸ್ ಹಿನ್ನೀರಿನ ಬಳಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕ್ಲೇರಾ, ಭಾರತಿ, ನಿರ್ಮಲಾ, ಸಿಸ್ಟರ್ ಲೂರ್ದ ಪಾಲ್, ಸಿಸ್ಟರ್ ಡೇಸಿ, ಜಯರಾಜ್ ಮತ್ತು ಸುರೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಹಿರಿಯ ವಿದ್ಯಾರ್ಥಿಗಳಾದ ರಂಜು, ರಮ್ಯಾ, ಶ್ರುತಿ ಪಿ.ಎಸ್, ಅವಿನಾಶ್ ಪಿ.ಕೆ, ಸುನೀತಾ, ಶೋಭಾ ಸೇರಿದಂತೆ ಇತರರು ಇದ್ದರು.