ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆಸರ್ಕಾರದ ಯೋಜನೆಗಳು ಮಧ್ಯವರ್ತಿಗಳ ಪಾಲಾಗದೇ ನೇರವಾಗಿ ಫಲಾನುಭವಿಗಳಿಗೆ ದೊರೆದಾಗ ಮಾತ್ರ ಯೋಜನೆಗಳ ಮೂಲ ಆಶಯ ಸಾರ್ಥಕವಾಗುತ್ತದೆ ಎಂದು ಶಾಸಕ ಹೆಚ್.ಟಿ ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ತೆರೆದಿರುವ ರಾಗಿ, ಭತ್ತ ಮತ್ತು ಉಂಡೆ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಖರೀದಿ ಕೇಂದ್ರದಲ್ಲಿನ ನೀತಿಯಲ್ಲಿ ಬದಲಾವಣೆಯಾಗಬೇಕು. ಬೆಳೆ ಕಟಾವು ಆರಂಭಕ್ಕೆ ಮುನ್ನವೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಇಲ್ಲದಿದ್ದರೆ ಕಟಾವು ಆಗುತ್ತಿದ್ದಂತೆ ದಲ್ಲಾಳಿಗಳು ರೈತರಿಂದ ಬೆಳೆ ಖರೀದಿಸಿ ಬೆಂಬಲ ಬೆಲೆ ಘೋಷಣೆಯಾದಾಗ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ ಎಂದರು.ಕೇಂದ್ರ ಸರ್ಕಾರದ ಆಮದು ಮತ್ತು ರಫ್ತು ನೀತಿಯಿಂದಾಗಿ ಕೊಬ್ಬರಿ ಬೆಲೆ ಕುಸಿತ ಕಂಡಿದೆ. ಇದರಿಂದ ರೈತರು ನಷ್ಟ ಅನುಭಸುತ್ತಾರೆ. ಬರಗಾಲ, ಸೂಕ್ತ ಮಾರುಕಟ್ಟೆ ಇಲ್ಲದಿರುವುದು, ಮಧ್ಯವರ್ತಿಗಳ ಹಾವಳಿ ಈ ಎಲ್ಲಾ ಸಮಸ್ಯೆಗಳಿಂದ ರೈತ ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಈ ವರ್ಷದಿಂದ ಜಾರಿಗೆ ತರಲಾಗಿದೆ. ಇದಕ್ಕೂ ಮೀರಿ ದಲ್ಲಾಳಿಗಳು ಭಾಗಿದಾರರಾದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರಿಕೆ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಂ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ಮಂಜುನಾಥ್, ಸಂತೆಬಾಚಹಳ್ಳಿ ರವಿಕುಮಾರ್, ಗಿರೀಶ್, ಶೆಟ್ಟನಾಯ್ಕನಹಳ್ಳಿ ಕೊಪ್ಪಲು ಸೋಮಶೇಖರ್, ಎಪಿಎಂಸಿ ಕಾರ್ಯದರ್ಶಿ ರಫೀಕ್ ಅಹಮದ್ ಸೇರಿದಂತೆ ಇತರರಿದ್ದರು.