ಅರಸು ಯೋಜನೆಗಳು ಇಂದಿಗೂ ಪ್ರಸ್ತುತ: ಶಾಸಕಿ ಲತಾ ಮಲ್ಲಿಕಾರ್ಜುನ

KannadaprabhaNewsNetwork | Published : Aug 21, 2024 12:37 AM

ಸಾರಾಂಶ

ಭೂ ಸುಧಾರಣೆ ಕಾಯ್ದೆಯನ್ನು ಪರಿಣಾಕಾರಿಯಾಗಿ ಜಾರಿಗೆ ತಂದ ದೇಶದ ಮೊದಲ ಮುಖ್ಯಮಂತ್ರಿ ಧೀಮಂತ ನಾಯಕ ಡಿ.ದೇವರಾಜ ಅರಸು.

ಹರಪನಹಳ್ಳಿ: ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಾರಿಗೆ ತಂದಂತಹ ಯೋಜನೆಗಳು ಇಂದಿಗೂ ಪ್ರಸ್ತುತ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.ಅವರು ಪಟ್ಟಣದ ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಮಂಗಳವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭೂ ಸುಧಾರಣೆ ಕಾಯ್ದೆಯನ್ನು ಪರಿಣಾಕಾರಿಯಾಗಿ ಜಾರಿಗೆ ತಂದ ದೇಶದ ಮೊದಲ ಮುಖ್ಯಮಂತ್ರಿ ಧೀಮಂತ ನಾಯಕ ಡಿ.ದೇವರಾಜ ಅರಸು ಎಂದ ಅವರು, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ದೇವರಾಜ ಅರಸು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಶೋಷಿತರನ್ನು ವಿಧಾನಸೌಧ ಪ್ರವೇಶಕ್ಕೆ ಮುಕ್ತ ಆವಕಾಶ ನೀಡಿದ್ದರು ಎಂದು ಸ್ಮರಿಸಿದರು.

ಅರಸು ತಮ್ಮ ರಾಜಕೀಯ ಜೀವನದಲ್ಲಿ ಹಾವು-ಏಣಿ ಆಟ ಕಂಡವರು. ಆದರೂ ಸದಾ ಜನಪರ ಚಿಂತನೆ ಹೊಂದಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಸಹ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ರಾಜ್ಯದಲ್ಲಿ ಉಳುವವನೇ ಭೂ ಒಡೆಯ ಎಂಬ ಯೋಜನೆ ಜಾರಿಗೆ ತಂದು ಬಡವರಿಗೆ ಆಸರೆಯಾದರು ಎಂದು ಹೇಳಿದರು.

ಪ್ರಗತಿಪರ ಚಿಂತಕ, ಸಾಹಿತಿ ಇಸ್ಮಾಯಿಲ್ ಎಲಿಗಾರ ದೇವರಾಜ ಅರಸು ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ತಂದು ಕೊಟ್ಟವರು ದೇವರಾಜ ಅರಸು ಎಂದು ಹೇಳಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್.ಆರ್. ಗಂಗಪ್ಪ ಬ್ರಹ್ಮಶ್ರೀ ನಾರಾಯಣ ಗುರು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಆರ್ಯ ಈಡಿಗ ಸಮಾಜದ ಮುಖಂಡ ವೆಂಕಟೇಶ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಮಸ್ತರು ಪರಶುರಾಮ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಹಶೀಲ್ದಾರ ಬಿ.ವಿ. ಗಿರೀಶಬಾಬು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ವಿ.ಹತ್ತಿಕಾಳ, ವಿಸ್ತಾರಣಾಧಿಕಾರಿ ಭೀಮಪ್ಪ, ನಿಲಯಪಾಲಕರಾದ ಬಿ.ಎಚ್. ಚಂದ್ರಪ್ಪ, ಜುಂಜಪ್ಪ, ವೀರೇಶ, ಸುನೀಲ, ಪ್ರೇಮಾವತಿ, ಶೃತಿ, ಅನ್ನಪೂರ್ಣಾ, ಆರ್ಯ ಈಡಿಗ ಸಮಾಜದ ಮುಖಂಡರಾದ ಜಗದೀಶಗೌಡ, ಶಿಕ್ಷಕ ಮೇಘರಾಜ, ಹೇಮಣ್ಣ ಮೋರಿಗೇರಿ, ತಾಪಂ ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ, ತೋಟಗಾರಿಕೆ ಇಲಾಖೆಯ ರವೀಂದ್ರ, ಸಿದ್ದೇಶ ಅಶೋಕ ಸೇರಿದಂತೆ ಇತರರು ಇದ್ದರು.

Share this article