ಹಳಿಯಾಳ: ಪರಿಶಿಷ್ಟ ಪಂಗಡದವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರಗಳು ಹಲವಾರು ಯೋಜನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಆದರೂ ಈ ಯೋಜನೆಗಳು ಅರ್ಹರಿಗೆ ಸಕಾಲದಲ್ಲಿ ತಲುಪುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ ಎಂದು ವಿಪ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಅಧಿಕಾರಿಗಳ ಮೇಲೆ ಗೂಬೆ ಕೂರಿಸಲು ಈ ಸಭೆಯನ್ನು ಕರೆದಿಲ್ಲ. ಅದರ ಬದಲು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳಿಸಲು ನಾವೇನು ಮಾಡಬೇಕು ಎಂದು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ. ಬುಡಕಟ್ಟು ಸಮುದಾಯದವರಲ್ಲಿ ಸಾಕಷ್ಟು ಜನರಿಗೆ ಇನ್ನು ಹಕ್ಕುಪತ್ರ ಸಿಗಲಿಲ್ಲ. ಅದಕ್ಕಾಗಿ ಗ್ರಾಮ ಅರಣ್ಯ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯ ನಡೆಸಬೇಕು ಎಂದರು.
ಪರಿಶಿಷ್ಟ ಪಂಗಡದವರ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರದ ಯೋಜನೆಗಳ ಲಾಭವು ಅವರಿಗೆ ದೊರೆಯುವಂತೆ ಸೇವೆ ಸಲ್ಲಿಸಿರಿ ಎಂದರು.ಪ್ರಮುಖ ಸಮಸ್ಯೆಗಳ ಪ್ರಸ್ತಾಪ:
ವಾಡಾ, ಗರಡೊಳ್ಳಿ, ಗಾಡಗೇರಾ, ರಾಯಪಟ್ಟಣ, ಪಾಂಡರವಾಳ, ಭಾಗವತಿ, ಕೇಗದಾಳ, ಅಡ್ಡಿಗೇರಾ, ತಟ್ಟಿಗೇರಾ, ಅಡಕೆ ಹೊಸುರ, ದೊಡ್ಡಕೊಪ್ಪ ಮೊದಲಾದ ಕಾಂಡಚಿನ ಗ್ರಾಮಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕೆಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು. ನೈಜಿರಿಯಾದಿಂದ ಆಗಮಿಸುವ ವಿದೇಶಿಯರಿಂದ ಬುಡಕಟ್ಟು ಸಿದ್ಧಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.
ವಸತಿ ಗ್ರಾಮ ರಚಿಸಿ:
ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ ಮಾತನಾಡಿ, ತಾಲೂಕಿನಲ್ಲಿ 1833 ಫಲಾನುಭವಿಗಳು ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಸಿದ್ದಿ ಸಮುದಾಯದ 135 ಜನರಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು. ಮಾಜಿ ರಾಷ್ಟ್ರೀಯ ಕ್ರೀಡಾಪಟು ಮೇರಿ ಗರಿಬಾಚೆಯವರು ಸಿದ್ದಿ ಸಮುದಾಯದವರು ನೆಲೆಸಿರುವ ಗ್ರಾಮಗಳಿಗೆ ಬೀದಿದೀಪ ಹಾಗೂ ಇತರ ಮೂಲಭೂತ ಸೌಲಭ್ಯಗಳ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸಹಾಯಕ ಉಪಸಂರಕ್ಷಣಾಧಿಕಾರಿ ಮಾಜಿ ಬೀರಪ್ಪ ಇಲಾಖೆಯ ಯೋಜನೆಗಳ ಮಾಹಿತಿ ನೀಡಿ ಬುಡಕಟ್ಟು ಸಿದ್ದಿ ಸಮುದಾಯದವರಿಗೆ 154 ಎಕರೆ ಜಮೀನನ್ನು ಅರಣ್ಯ ಹಕ್ಕು ಪತ್ರ ವಿತರಣಾ ಯೋಜನೆಯಲ್ಲಿ ವಿತರಿಸಲಾಗಿದೆ ಎಂದರು.
ಕಾಡನ್ನು ಸಂರಕ್ಷಿಸುತ್ತಾ ನೆಲೆಸಿರುವ ಸಿದ್ದಿಗಳ ಅಭಿವೃದ್ಧಿಯ ಬಗ್ಗೆ ಇಲಾಖೆಗಳು ಯೋಜಿಸಬೇಕೆಂದರು.
ಕುಸ್ತಿ ಕ್ರೀಡೆಯಲ್ಲಿ ಹಳಿಯಾಳದ ಕೀರ್ತಿಯನ್ನು ತಂದ ಕುಸ್ತಿಪಟು ದಿ.ಅಗ್ನೇಲ ಅವರ ಪುತ್ಥಳಿ ನಿರ್ಮಾಣ ಮಾಡಿ ಕುಸ್ತಿ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಪಿಎಸೈ ಕೃಷ್ಣ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಯಾಕೋಬ ನಾಯ್ಕ, ಜ್ಯೂಲಿಯಾನ್ ಇದ್ದರು.