ಲಿಂಗರಾಜು ಕೋರಾ
ಬೆಂಗಳೂರು : ಉಚಿತ ಪ್ರವೇಶ, ಪ್ರತೀ ವರ್ಷ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ರಾಜ್ಯ ಸರ್ಕಾರ ನೀಡುತ್ತಿರುವ ಹಲವು ಯೋಜನೆಗಳ ನಡುವೆಯೂ ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಳೆದ ಒಂದೂವರೆ ದಶಕದಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.30ರಷ್ಟು ಕುಸಿದಿದೆ.
2010-11ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಪ್ರವೇಶ ಪಡೆಯುತ್ತಿದ್ದ ಮಕ್ಕಳ ಸಂಖ್ಯೆ ಸುಮಾರು 55 ಲಕ್ಷದಷ್ಟಿತ್ತು. ಆದರೆ, ಇದು 2025-26ನೇ ಸಾಲಿನ ವೇಳೆಗೆ 38 ಲಕ್ಷಕ್ಕೆ ಇಳಿದಿದೆ. ಅರ್ಥಾತ್ ಹದಿನೈದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ 17 ಲಕ್ಷಕ್ಕೂ ಹೆಚ್ಚು ಕಡಿಮೆಯಾಗಿದೆ. ತನ್ಮೂಲಕ ರಾಜ್ಯದಲ್ಲಿ ಶಾಲಾ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಮಕ್ಕಳ ಒಟ್ಟು ದಾಖಲಾತಿಯಲ್ಲಿ ಶೇ.54ರಷ್ಟಿದ್ದ ಸರ್ಕಾರಿ ಶಾಲೆಗಳ ಪಾಲು ಈಗ ಶೇ.38ಕ್ಕೆ ಕುಸಿದಿದೆ.
ಶಿಕ್ಷಣ ಇಲಾಖೆಯ ಹತ್ತು ಹದಿನೈದು ವರ್ಷಗಳ ಶೈಕ್ಷಣಿಕ ಮಾಹಿತಿ ವಿಶ್ಲೇಷಣಾ ವರದಿ
ಇವು ಯಾವುದೋ ಸಂಘ-ಸಂಸ್ಥೆಯ ಸಮೀಕ್ಷೆಯಲ್ಲಿ ಬಹಿರಂಗವಾದ ಅಂಶಗಳಲ್ಲ. ಸ್ವತಃ ಶಿಕ್ಷಣ ಇಲಾಖೆಯ ಹತ್ತು ಹದಿನೈದು ವರ್ಷಗಳ ಶೈಕ್ಷಣಿಕ ಮಾಹಿತಿ ವಿಶ್ಲೇಷಣಾ ವರದಿಗಳನ್ನು ಅವಲೋಕಿಸಿದಾಗ ಕಂಡುಬರುವ ಸತ್ಯ. ಅಲ್ಲದೆ, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲೇ ಇನ್ನೂ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಅಧಿಕೃತ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆಯು ಸಂಬಂಧಿಸಿದ ನಡಾವಳಿಯಲ್ಲಿಯೂ ಇಲಾಖೆಯೇ ಈ ಸಂಬಂಧ ಒಂದಷ್ಟು ಮಾಹಿತಿ ಬಹಿರಂಗಪಡಿಸಿದೆ.
ಮತ್ತೊಂದೆಡೆ ಖಾಸಗಿ ಶಾಲೆಗಳಿಗೆ ಸೇರುತ್ತಿರುವ ಮಕ್ಕಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. 15 ವರ್ಷಗಳ ಹಿಂದೆ ಖಾಸಗಿ ಶಾಲೆಗಳಲ್ಲಿ ಸುಮಾರು 30 ಲಕ್ಷದ ಆಸು ಪಾಸಿನಲ್ಲಿರುತ್ತಿದ್ದ ಮಕ್ಕಳ ಸಂಖ್ಯೆ ಈಗ 47 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಶೇ.30ಕ್ಕಿಂತ ಹೆಚ್ಚಾಗಿದೆ.
ಪ್ರಾಥಮಿಕ ಸರ್ಕಾರಿ ಶಾಲೆಗಳು, ಶಿಕ್ಷಕರ ಸಂಖ್ಯೆಯೂ ಇಳಿಕೆ
ಇನ್ನು, ಮಕ್ಕಳ ಸಂಖ್ಯೆ ಕಡಿಮೆಯಾದಂತೆ ಹದಿನೈದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಮತ್ತು ಅವುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಯಂ ಶಿಕ್ಷಕರ ಸಂಖ್ಯೆಯೂ ಇಳಿಕೆಯಾಗುತ್ತಾ ಸಾಗಿದೆ.
2010-11ರಲ್ಲಿ ಇಲಾಖಾ ಶೈಕ್ಷಣಿಕ ವಿಶ್ಲೇಷಣಾ ವರದಿ ಪ್ರಕಾರವೇ 45000ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು, 4000ಕ್ಕೂ ಹೆಚ್ಚು ಪ್ರೌಢಶಾಲೆಗಳು ಸೇರಿ 49,855 ಶಾಲೆಗಳಿದ್ದವು. ಈಗ ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ ಇಳಿಕೆಯಾಗದಿದ್ದರೂ ಪ್ರಾಥಮಿಕ ಶಾಲೆಗಳ ಸಂಖ್ಯೆ ಸುಮಾರು 3500 ಸಾವಿರಷ್ಟು ಇಳಿಕೆಯಾಗಿದೆ.
ಮಕ್ಕಳ ಕೊರತೆ, ವಿಲೀನ ಮತ್ತಿತರ ಕಾರಣಗಳಿಂದ ಈ ಶಾಲೆಗಳು ಬಂದ್ ಆಗಿವೆ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 41,500 ಪ್ರಾಥಮಿಕ ಶಾಲೆಗಳಿವೆ, ಪ್ರೌಢ ಶಾಲೆಗಳ ಸಂಖ್ಯೆ 4800ಕ್ಕೂ ಹೆಚ್ಚಿದೆ ಎಂದು ಹೇಳಿದೆ.
ಇನ್ನು ಹದಿನೈದು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರ ಸಂಖ್ಯೆ 2.26 ಲಕ್ಷಕ್ಕೂ ಹೆಚ್ಚಿತ್ತು. ಅದು ಈಗ 1.80 ಲಕ್ಷಕ್ಕೆ ಇಳಿಕೆಯಾಗಿದೆ. 56 ಸಾವಿರಕ್ಕೂ ಹೆಚ್ಚು ಶಿಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಈ ಹುದ್ದೆಗಳೆಲ್ಲಾ ಖಾಲಿ ಇವೆ. ಪ್ರತೀ ವರ್ಷ ಕನಿಷ್ಠ 6 ಸಾವಿರ ಶಿಕ್ಷಕರು ನಿವೃತ್ತರಾಗುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ಸರ್ಕಾರಗಳು ಮಾತ್ರ ಆ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ
ಅಧಿಕಾರಿಗಳು ಏನಂತಾರೆ?
ಮಕ್ಕಳ ದಾಖಲಾತಿ ಕುಸಿತವನ್ನು ಮನಗಂಡು ಸರ್ಕಾರ ಈಗ ಸರ್ಕಾರಿ ಶಾಲೆಗಳಲ್ಲೂ ಹಂತ ಹಂತವಾಗಿ ದ್ವಿಭಾಷಾ ಮಾಧ್ಯಮ (ಕನ್ನಡ/ಮತ್ತು ಇಂಗ್ಲೀಷ್) ಬೋಧನೆ ಆರಂಭಿಸುತ್ತಿದೆ. ಈಗಾಗಲೇ 4100ಕ್ಕೂ ಹೆಚ್ಚು ಶಾಲೆಗಳಲ್ಲಿ ಎರಡೂ ಮಾಧ್ಯಮದ ಬೋಧನೆ ಆರಂಭಿಸಿದೆ. ಜೊತೆಗೆ ಪ್ರತೀ ಗ್ರಾಮ ಪಂಚಾಯಿತಿ ಹಂತದಲ್ಲಿ ಒಂದು ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ(ಕೆಪಿಎಸ್) ಉನ್ನತೀಕರಿಸುವ ಗುರಿ ಹೊಂದಿದೆ. ಪ್ರಸ್ತುತ ರಾಜ್ಯದಲ್ಲಿ 309 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲೇ 2.8 ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ದಾಖಲಾತಿ ಚೇತರಿಕೆಯ ಭರವಸೆಯನ್ನುಂಟು ಮಾಡಿದೆ. ಹಾಗಾಗಿ ಬರುವ ಶೈಕ್ಷಣಿಕ ವರ್ಷದಿಂದ ಇನ್ನೂ 800 ಕೆಪಿಎಸ್ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಶಾಲೆಗಳಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೂ ಒಂದೇ ಕಡೆ ಶಿಕ್ಷಣ ದೊರೆಯಲಿದೆ. ಇವುಗಳಲ್ಲಿಯೂ ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮದಲ್ಲಿ ಬೋಧನೆ ಇರಲಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದರು.
ಸರ್ಕಾರಗಳ ಪಾಲಿಗೆ ಸರ್ಕಾರಿ ಶಾಲೆಗಳು ಪ್ರಯೋಗಶಾಲೆಗಳಾಗಿವೆ. ನಲಿಕಲಿಯಂತಹ ಅವೈಜ್ಞಾನಿಕ ಕಲಿಕಾ ಕಾರ್ಯಕ್ರಮಗಳನ್ನು ತೆಗೆದು ಆಧುನಿಕ ಕಾಲಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ತಾಂತ್ರಿಕ ಮೂಲಸೌಲಭ್ಯಗಳು, ಕಾಲ ಕಾಲಕ್ಕೆ ಪಠ್ಯಪರಿಷ್ಕರಣೆಯೊಂದಿಗೆ ಬಲಗೊಳಿಸಬೇಕು. ಪ್ರತೀ ವರ್ಷ ಖಾಲಿಯಾಗುವ ಶಿಕ್ಷಕರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕು. ಕನಿಷ್ಠ ವಿಷಯಕ್ಕಬ್ಬರಲ್ಲದಿದ್ದರೂ ತರಗತಿಗೆ ಒಬ್ಬ ಶಿಕ್ಷಕರನ್ನಾದರೂ ನೀಡಬೇಕು. ಜೊತೆಗೆ ಪ್ರತೀ ವರ್ಷ ಹೊಸ ಖಾಸಗಿ ಶಾಲೆಗಳ ಆರಂಭಕ್ಕೆ ಅವಕಾಶ ನೀಡುವುದು ನಿಲ್ಲಬೇಕು.
-ಚಂದ್ರಶೇಖರ ನುಗ್ಗಲಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ