ಅರುಣ್ ಕುಮಾರ್ ಎಸ್ ವಿ
ಕನ್ನಡಪ್ರಭ ವಾರ್ತೆ ಗೌರಿಬಿದನೂರುನಗರಕ್ಕೆ ಸಮೀಪದಲ್ಲಿರುವ ಮೇಲಿನದಿನಮಘಟ್ಟನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಕುಸಿದು ಬೀಳುವ ಹಂತದಲ್ಲಿದೆ. ಸದ್ಯ ಮೇಲ್ಚಾವಣಿ ಕಿತ್ತುಬೀಳುತ್ತಿದೆ. ಅದರಲ್ಲಿಯೇ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಟ್ಟಡದಲ್ಲಿಯೇ ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ನೀಡಲಾಗುತ್ತದೆ. ಹೀಗಾಗಿ ಯಾವ ಸಮಯದಲ್ಲಿ ಶಾಲಾ ಕಟ್ಟಡ ಬೀಳುತ್ತದೆ ಎಂಬ ಆತಂಕದಲ್ಲಿ ಶಿಕ್ಷಕರು ಮತ್ತು ಮಕ್ಕಳಿದ್ದಾರೆ.1ರಿಂದ 5ನೇ ತರಗತಿವರೆಗೆ ಈ ಶಾಲೆಯಲ್ಲಿ ಸುಮಾರು 12 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಇಬ್ಬರು ಶಿಕ್ಷಕಿಯರಿದ್ದಾರೆ. ಶಾಲೆಗೆ 2 ಕಟ್ಟಡಗಳಿದ್ದು 1 ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಉಪಯೋಗಕ್ಕೆ ಬಾರದಂತಾಗಿದ್ದು, 2ನೇ ಕಟ್ಟಡ ಮೇಲ್ಛಾವಣಿ ಪೂರ ಬಿರುಕು ಬಿಟ್ಟಿದೆ. ಮಳೆ ಬಂದರೆ ಶಾಲೆಯೊಳಗೆ ಮಳೆನೀರು ಹರಿದುಬರುತ್ತದೆ, ಕಟ್ಟಡಗಳು ಸೋರುತ್ತದೆ.ಈ ಸಂಪೂರ್ಣ ಹಾಳಾದ ಕೋಣೆಯಲ್ಲೆ ಅಡುಗೆ ಮಾಡುವುದು ಮತ್ತು ಇದೇ ಕೋಣೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಮೇಲ್ಛಾವಣಿಯ ಸಿಮೆಂಟ್ ಸತ್ವಕಳೆದುಕೊಂಡು ಕಬ್ಬಿಣದರಾಡುಗಳು ಕಾಣುವಂತಾಗಿದೆ. ಕಟ್ಟಡ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜೀವಹಾನಿಗೆ ಕಾದುಕುಳಿತಿದೆ. ಶಾಲೆಯ ಈ ಕಟ್ಟಡದಿಂದಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕವಿದೆ.ಇದೀಗ ಮಳೆಗಾಲ ಪ್ರಾರಂಭವಾಗಿದ್ದು ಮಳೆಗೆ ಕಟ್ಟಡ ಇನ್ನಷ್ಟು ಹಾಳಾಗುವ ಸಂಭವವಿದೆ. ಕಟ್ಟಡ ಪುನಃ ನಿರ್ಮಾಣ ಮಾಡುವ ಬಗ್ಗೆ ಈ ಹಿಂದೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಗಾಡನಿದ್ರೆಯಲ್ಲಿದ್ದಾರೆ. ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಬದಲು ಕೂಡಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಈ ಭಾಗದ ಜನಪ್ರತಿನಿಧಿಗಳು ಮುಂದೆ ಬರಬೇಕೆನ್ನುವುದು ಶಿಕ್ಷಣ ಪ್ರೇಮಿಗಳ ಆಶಯ.ಶಾಲೆಯ ಕೊಠಡಿ ಶಿಥಿಲಿಗೊಂಡಿದ್ದು, ಚಾವಣಿ ಸಂಪೂರ್ಣ ಕುಸಿದಿದೆ. ಕಿಟಕಿಗಳು ಮುರಿದಿದ್ದು, ಬಾಗಿಲುಗಳು ಕಿತ್ತು ಹೋಗಿವೆ. ಶಿಕ್ಷಕರು ಭಯದ ನೇರಳಲ್ಲಿ ಪಾಠ ಮಾಡಬೇಕಾಗಿದೆ. ಕೆಲವೊಮ್ಮೆ ಚಾವಣಿ ಕುಸಿದು ಬಿದ್ದು, ಗಾಯಗೊಂಡಿದ್ದಾರೆ. ಇಂತಹ ಭಯದ ವಾತಾವರಣದಲ್ಲಿ ಪಾಠಮಾಡಲು ಶಿಕ್ಷಕರಿಗೂ ತೊಂದರೆಯಾಗುತ್ತಿದೆ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದೇಶ್ ಈ ಮಾತನಾಡಿ, ನಮ್ಮ ಗ್ರಾಮದ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿಹೋಗಿದ್ದು, ಅದು ದುರಸ್ತಿ ಮಾಡಲಾರದಷ್ಟು ಹಾಳಾಗಿದೆ. ಅತಿಶೀಘ್ರವಾಗಿ ಶಾಲೆಯ ಕಟ್ಟಡ ದುರಸ್ತಿ ಕ್ರಮ ಕೈಗೊಳ್ಳಬೇಕು ಅಥವಾ ಗ್ರಾಮದ ಪ್ರಾರಂಭದಲ್ಲಿ ಸುಮಾರು 5 ಗುಂಟೆಯಷ್ಟು ಸರ್ಕಾರಿ ಸ್ಥಳವಿದ್ದು ಹೊಸಕಟ್ಟಡದ ರ್ನಿರ್ಮಾಣಕ್ಕೆಮುಂದಾಗಬೇಕು. ತಕ್ಷಣವೇ ಈ ಶಾಲೆಯ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ, ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.ಸೋರುವ ಕಟ್ಟಡದಲ್ಲಿ ಪೇಚಾಟ:
ಶಾಲಾ ಪ್ರಗತಿ, ನಿರ್ವಹಣೆಗೆ ಗ್ರಾ.ಪಂ. ಆಡಳಿತದ ಹೊಂದಾಣಿಕೆಯೊಂದಿಗೆ ಮಕ್ಕಳ ಪೋಷಕರ ಎಸ್.ಡಿ.ಎಂ.ಸಿ. ಸಮಿತಿ ರಚಿಸಿದ್ದರೂ ಶಾಲೆಗಳು ಸಮಸ್ಯೆಯಿಂದ ಬಿಡುಗಡೆಗೊಂಡಿಲ್ಲ. ಶಾಲಾಕಟ್ಟಡ ಸೋರುತ್ತಿದೆ, ಗೋಡೆಯಿಂದ ಮಳೆನೀರು ಇಳಿದು ಅಪಾಯದ ಸ್ಥಿತಿ ಇದೆ. ಶಿಕ್ಷಕರಿಗೆ ಏಕಾಗ್ರತೆಯಿಂದ ಪಾಠ ಮಾಡುವುದು, ಮಕ್ಕಳಿಗೆ ಪಾಠ ಆಲಿಸುವುದು ಸಾಧ್ಯವಾಗುತ್ತಿಲ್ಲ. ಕಟ್ಟಡಕ್ಕೆ ಅಳವಡಿಸಲಾದ ವಿದ್ಯುತ್ ಸಂಪರ್ಕದಲ್ಲಿ ಅನೇಕನ್ಯೂನತೆಗಳಿದ್ದು ಶಾರ್ಟ್ ಸಕ್ರ್ಯೂಟ್ ಅಪಾಯ ಉದ್ಭವಿಸಬಹುದು. ಮಕ್ಕಳ ಸೇರ್ಪಡೆಗೆ ಆಸಕ್ತಿ ಇದ್ದರೂ ಶಾಲೆಯಲ್ಲಿನ ಅಸೌಕರ್ಯದ ಕಾರಣಕ್ಕೆ ಪೋಷಕರು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಗ್ರಾಮದ ನಿವಾಸಿ ಗೋಪಾಲ್.ಶಾಲೆಯ ಮುಖ್ಯಶಿಕ್ಷಕಿ ಪದ್ಮಾವತಮ್ಮ ಮಾತನಾಡಿ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ ಶೀಘ್ರ ಸಮಸ್ಯೆ ಪರಿಹರಿಸಿದರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.2024-25ನೇ ಸಾಲಿನ ವರ್ಷಪೂರ್ತಿ ಶಾಲೆಯ ಪಕ್ಕದಲ್ಲಿರುವ ಗೋಪಾಲ್‌ರವರ ಮನೆಯಲ್ಲಿ ಶಾಲೆಯನ್ನು ನಡೆಸಲಾಯಿತೆಂದು ಗ್ರಾಮಸ್ಥರು ತಿಳಿಸಿದರು. ಇದೇ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚಮಂದಿ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮೊರೆಹೋಗಿದ್ದಾರೆ.ಚಿತ್ರಗಳು:-
೧. ಅಡುಗೆ ಮಾಡುವ ಸ್ಥಳದಲ್ಲಿ ಚಾವಣಿ ಕುಸಿದು ಕಬ್ಬಣದ ಕಂಬಿಗಳು ಹೊರಬಿದ್ದಿರುವುದು.೨. ಮಳೆಬಂದಾಗ ಮಳೆನೀರು ಶಾಲೆಯೊಳಗೆ ಹರಿದಿರುವುದು.
3. ಶಾಲೆಯ ಕಟ್ಟಡದಲ್ಲಿ ಮೇಲ್ಚಾವಣಿ ಕುಸಿದಿರುವುದು.೪. ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಳದಲ್ಲಿ ಚಾವಣಿ ಕುಸಿದು ಕಬ್ಬಿಣದ ಕಂಬಿಗಳು ಕಾಣಿಸುತ್ತಿರುವುದು.
5. ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಳದಲ್ಲಿ ಬೀಳಲು ಸಂಪೂರ್ಣ ಸಿದ್ದವಿರುವ ಚಾವಣಿ.6. ಸಂಪೂರ್ಣ ಶಿತಿಲಾವಸ್ಥೆಗೆ ತಲುಪಿರುವ ಒಂದೇ ಕೋಣೆಯ ಶಾಲಾ ಕಟ್ಟಡ.