ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಆತ್ಮವಿಶ್ವಾಸದಿಂದ ಮಾತನಾಡುವಂತೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಒಟ್ಟು 1,919 ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ಕಾರ್ಯಕ್ರಮ ಜಾರಿಗೊಳಿಸಲು ಅನುಮತಿ ನೀಡಿದೆ.
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿ
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಆತ್ಮವಿಶ್ವಾಸದಿಂದ ಮಾತನಾಡುವಂತೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಒಟ್ಟು 1,919 ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ಕಾರ್ಯಕ್ರಮ ಜಾರಿಗೊಳಿಸಲು ಅನುಮತಿ ನೀಡಿದೆ.
2026-27ನೇ ಸಾಲಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್), ಪಿಎಂ ಶ್ರೀ ಕೆಪಿಎಸ್ ಹಾಗೂ ಅವುಗಳ ಸಂಯೋಜಿತ ಘಟಕ ಶಾಲೆಗಳಲ್ಲಿ ಇದೇ ಸೆಪ್ಟೆಂಬರ್‌ನಿಂದ ಫೆಬ್ರವರಿವರೆಗೆ ಆರು ತಿಂಗಳ ಕಾಲ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಮೂರು ಹಂತಗಳಲ್ಲಿ ತರಬೇತಿ:
1ರಿಂದ 10ನೇ ತರಗತಿಯ ವಿದ್ಯಾರ್ಥಿಗಳನ್ನು ಮೂರು ಹಂತಗಳಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತದೆ. 1ರಿಂದ 3ನೇ ತರಗತಿ, 4ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತಿದೆ. ಇಂಗ್ಲಿಷ್ ಮಾತನಾಡುವ ಕೌಶಲ್ಯ ನೀಡುವುದು, ಸರಿಯಾದ ಉಚ್ಚಾರಣೆ, ಪದಸಂಪತ್ತು ಹಾಗೂ ವಾಕ್ಯರಚನೆಯ ಸಾಮರ್ಥ್ಯ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಶಾಲೆಯಲ್ಲಷ್ಟೇ ಅಲ್ಲದೆ ಶಾಲೆಯ ಹೊರಗೂ ಸರಳ ಇಂಗ್ಲಿಷ್ ವಾಕ್ಯಗಳಲ್ಲಿ ಮಾತನಾಡುವಂತೆ ಮಕ್ಕಳನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ.
ಪ್ರತ್ಯೇಕ ಅತಿಥಿ ಶಿಕ್ಷಕರು:
ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮಕ್ಕಾಗಿ ಶಾಲಾ ಹಂತದಲ್ಲೇ ಎಸ್‌ಡಿಎಂಸಿ ಮೂಲಕ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇಂಗ್ಲಿಷ್ ವಿಷಯದೊಂದಿಗೆ ಕಲಾ ಪದವಿ, ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ 25ರಿಂದ 55 ವರ್ಷದೊಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ. ಆಯ್ಕೆಯಾಗುವ ಪ್ರತಿ ಅತಿಥಿ ಶಿಕ್ಷಕರಿಗೆ ತಿಂಗಳಿಗೆ ₹12 ಸಾವಿರ ಗೌರವಧನ ನೀಡಲಾಗುತ್ತದೆ. ಯೋಜನೆಗಾಗಿ ಸರ್ಕಾರ ₹19.67 ಕೋಟಿ ಅನುದಾನ ನಿಗದಿಪಡಿಸಿದೆ.
ವಿದ್ಯಾರ್ಥಿಗಳ ದಾಖಲಾತಿ ಆಧರಿಸಿ ತಂಡಗಳನ್ನು ರಚಿಸಲಾಗುತ್ತದೆ. ಸಾಮಾನ್ಯ ದಾಖಲಾತಿ ಹೊಂದಿರುವ ಶಾಲೆಗಳಲ್ಲಿ ವಿವಿಧ ತರಗತಿಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ, ದಿನಕ್ಕೆ ಮೂರು ಅವಧಿಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಪ್ರತಿ ತಂಡಕ್ಕೆ ವಾರಕ್ಕೆ ನಾಲ್ಕು ಅವಧಿಗಳ ಸ್ಪೋಕನ್ ಇಂಗ್ಲಿಷ್ ತರಬೇತಿ ದೊರೆಯಲಿದೆ.
ತರಬೇತಿ ಬಳಿಕ ಮೌಲ್ಯಮಾಪನ:
ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕಾ ಮಟ್ಟದಲ್ಲಿ ಆಗುವ ಬದಲಾವಣೆಯನ್ನು ಅಳೆಯಲು ಎರಡು ಹಂತದ ಮೌಲ್ಯಮಾಪನ ನಡೆಯಲಿದೆ. ನವೆಂಬರ್ ಅಂತ್ಯದಲ್ಲಿ ಹಾಗೂ ಮಾರ್ಚ್ ಆರಂಭದಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ.
ವಿದ್ಯಾರ್ಥಿಗಳು ಸರಳ ಪದಗಳು ಮತ್ತು ವಾಕ್ಯಗಳನ್ನು ಅರ್ಥಮಾಡಿಕೊಂಡು ಓದುವ ಹಾಗೂ ಅರ್ಥಪೂರ್ಣವಾಗಿ ಮಾತನಾಡುವ ಕೌಶಲ್ಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ ಕಾರ್ಯಕ್ರಮದ ಪರಿಣಾಮಕಾರಿತ್ವದ ಕುರಿತು ವರದಿ ಸಿದ್ಧಪಡಿಸಬೇಕಿದೆ.
ಈಗಾಗಲೇ ಬೇರೆ ಯೋಜನೆಗಳ ಅನುದಾನದಡಿ ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮ ನಡೆಯುತ್ತಿರುವ ಶಾಲೆಗಳಲ್ಲಿ ಇದೇ ಉದ್ದೇಶಕ್ಕೆ ಮತ್ತೆ ವೆಚ್ಚ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೂ ಖಾಸಗಿ ಶಾಲೆಗಳ ಮಕ್ಕಳಂತೆ ಇಂಗ್ಲಿಷ್ ಮಾತನಾಡುವ ಆತ್ಮವಿಶ್ವಾಸ ಬೆಳೆಸುವ ಪ್ರಯತ್ನ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದು ಕಾರ್ಯಕ್ರಮದ ಅನುಷ್ಠಾನ ಮತ್ತು ಅತಿಥಿ ಶಿಕ್ಷಕರ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿಯಲ್ಲಿದ್ದು, ಇಂಗ್ಲಿಷ್ ಭಾಷೆ ಕಲಿಕೆಗೆ ಇದು ಮತ್ತಷ್ಟು ಅನುಕೂಲವಾಗುವ ನಿರೀಕ್ಷೆಯಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.