ಉಡುಪಿ: ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಬೌದ್ಧಿಕವಾಗಿಯೂ, ಮಾನಸಿಕವಾಗಿಯೂ ಸಮರ್ಥರಿದ್ದಾರೆ. ಅವರಿಗೆ ಅನುಕೂಲತೆಗಳನ್ನು ಮತ್ತು ಅವಕಾಶಗಳನ್ನು ಒದಗಿಸಿಕೊಟ್ಟರೆ ಅವರು ಉನ್ನತವಾದ ಸಾಧನೆಯನ್ನು ಮಾಡಬಲ್ಲರು. ಈ ದಿಸೆಯಲ್ಲಿ ಸಂಘ ಸಂಸ್ಥೆಗಳು ಕೂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಅಭಿಪ್ರಾಯಪಟ್ಟರು. ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಮಣಿಪಾಲ್ ಪೇಮೆಂಟ್ ಅಂಡ್ ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ಅವರಿಂದ ಸುನಿಧಿ ಫೌಂಡೇಶನ್ ಟ್ರಸ್ಟ್ ಮೂಲಕ ಕೊಡಮಾಡಲಾದ ಸುಮಾರು 2 ಲಕ್ಷ ರು. ಮೌಲ್ಯದ ವಿಜ್ಞಾನ ಪ್ರಯೋಗೋಪಕರಣಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.