ಕೊಟ್ಟೂರು: ವೃತ್ತಿ ರಂಗಭೂಮಿ ಇಲ್ಲವೇ ಹವ್ಯಾಸಿ ರಂಗಭೂಮಿಗಳು ಉಳಿಯಲು ಮತ್ತು ಬೆಳೆಯಲು ಕಲಾ ಪೋಷಕರ ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು ನಟ ಚಿಂದೋಡಿ ಶ್ರೀಕಂಠೇಶ್ ಹೇಳಿದರು.ಬುಧವಾರ ಸಂಜೆ ಪಟ್ಟಣದಲ್ಲಿನ ಖಾಸ್ಗತೇಶ್ವರ ನಾಟಕ ಮಂಡಳಿಯವರ ರಂಗಮಂದಿರದಲ್ಲಿ ಶ್ರೀಗುರು ಕೊಟ್ಟೂರೇಶ್ವರ ಕಲಾರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಕಲಾವಿದರ ಸಂಘ ಸಂಯಕ್ತವಾಗಿ ಆಯೋಜಿಸಿದ್ದ ರಂಗ ಸಂಭ್ರಮ ಕಾರ್ಯಕ್ರಮವನ್ನು ಬುಧುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕಗಳು ಮನಸ್ಸಿನ ಕೈಗನ್ನಡಿಯಾಗಿವೆ. ರಾಜ್ಯದಲ್ಲಿ ವೃತ್ತಿ ರಂಗಭೂಮಿ 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿದೆ ಎಂದು ಅವರು ಹೇಳಿದರು.
ಹವ್ಯಾಸಿ ಬರಹಗಾರ ಅಂಚೆ ಕೊಟ್ರೇಶ್ ಮಾತನಾಡಿ, ಗುಬ್ಬಿ ವೀರಣ್ಣ ನಾಟಕ ಕಂಪನಿ ವೃತ್ತಿ ರಂಗಭೂಮಿಗೆ ಮೆರಗು ತಂದುಕೊಟ್ಟ ಮಹಾನ್ ನಟರು. ಇಂತಹ ಕಲಾವಿದರನ್ನು ಮತ್ತು ಕಲಾ ಸಂತತಿಯನ್ನು ಗೌರವಿಸಿ ಮುಂದುವರಿಸಿಕೊಂಡು ಹೋಗಬೇಕು ಎಂದರು.ಎಂ.ಎಸ್. ಶಿವನಗುತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ನಮ್ಮ ಕಲಾತಂಡದಿಂದ ನಾಟಕಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.