ಸರ್ಕಾರಿ ಶಾಲೆ ಶಿಕ್ಷಕರಿಗೆ ಬಡ್ತಿ ಭಾಗ್ಯ: ಮಧು

KannadaprabhaNewsNetwork |  
Published : Jan 25, 2026, 02:00 AM IST
ಮಧು ಬಂಗಾರಪ್ಪ | Kannada Prabha

ಸಾರಾಂಶ

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು(ಪಿಎಸ್‌ಟಿ), ಪದವೀಧರ ಶಿಕ್ಷಕರಿಗೆ(ಜಿಪಿಟಿ) ಹಾಗೂ ಪಿಯು ಉಪನ್ಯಾಸಕರಿಗೆ ನ್ಯಾಯಾಲಯದ ನಿರ್ದೇಶನದಂತೆ ಬಡ್ತಿ ನೀಡಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು(ಪಿಎಸ್‌ಟಿ), ಪದವೀಧರ ಶಿಕ್ಷಕರಿಗೆ(ಜಿಪಿಟಿ) ಹಾಗೂ ಪಿಯು ಉಪನ್ಯಾಸಕರಿಗೆ ನ್ಯಾಯಾಲಯದ ನಿರ್ದೇಶನದಂತೆ ಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸುಮಾರು ಮೂರು-ನಾಲ್ಕು ಸಾವಿರ ಬೋಧಕರಿಗೆ ಬಡ್ತಿ ಸಿಗಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5ನೇ ತರಗತಿಗೆ ಮಾತ್ರ ಪಾಠ ಮಾಡಬೇಕು, ಪದವೀಧರ ಶಿಕ್ಷಕರು 7ನೇ ತರಗತಿವರೆಗೆ ಪಾಠ ಮಾಡಬೇಕು ಎಂದು ನಿಯಮ ತಂದಿದ್ದರಿಂದ ಸಮಸ್ಯೆಯಾಗಿ ಬಡ್ತಿ ವಿಚಾರಗಳಿಗೆ ತಡೆಯಾಗಿತ್ತು. ಜೊತೆಗೆ ಆ ಶಿಕ್ಷಕರು ನ್ಯಾಯಾಲಯಕ್ಕೂ ಹೋಗಿದ್ದರು. 2017ರ ಹಿಂದೆ ನೇಮಕವಾಗಿರುವ ಪಿಎಸ್‌ಟಿಗಳೂ 7ನೇ ತರಗತಿವರೆಗೆ ಪಾಠ ಮಾಡಬಹುದೆಂದು ಈಗ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ ನ್ಯಾಯಾಲಯದ ನಿರ್ದೇಶನದಂತೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಸೇವಾ ಜ್ಯೇಷ್ಠತೆ ಅನುಸಾರ ಒಂದು ಅನುಪಾತ ನಿರ್ದಿಷ್ಟ ಪಡಿಸಿ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆವರೆಗೆ, ಅದೇ ರೀತಿ ಪಿಯು ಉಪನ್ಯಾಸಕರಿಗೆ ಪ್ರಾಂಶುಪಾಲ ಹುದ್ದೆಗೆ ಬಡ್ತಿ ನೀಡಲು ತೀರ್ಮಾನಿಸಿದ್ದೇವೆ ಎಂದರು.

ಇನ್ನು, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ ಸರಳೀಕರಣಗೊಳಿಸಲು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ವರದಿ ಆಧರಿಸಿ ಸುಧಾರಣೆ ಕ್ರಮಗಳನ್ನು ತರಲಾಗುವುದು. ಶಿಕ್ಷಣ ಸಂಸ್ಥೆಯಲ್ಲಿ ಅನಗತ್ಯ ವಿಚಾರದಿಂದ ತೊಂದರೆ ಮಾಡಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.

5000 ವಿಶೇಷ ಶಿಕ್ಷಕರು ಹಾಗೂ ಇತರೆ ವಿಷಯಗಳ ಒಂದಷ್ಟು ಶಿಕ್ಷಕರ ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ನೇಮಕಾತಿ, ಬಡ್ತಿ ಪ್ರಕ್ರಿಯೆ, ಮಾನ್ಯತೆ ನವೀಕರಣ ಸೇರಿದಂತೆ ಇನ್ಯಾವುದೇ ಗೊಂದಲ ಇದ್ದರೂ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದರು.---ಎಲ್‌ಕೆಜಿ, ಯುಕೆಜಿ, ಪಿಯುಸಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ:

ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಎಲ್‌ಕೆಜಿ- ಯುಕೆಇ ಮಕ್ಕಳಿಗೂ ಸರ್ಕಾರದಿಂದ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈಗಾಗಲೇ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ನೀಡಲಾಗುತ್ತಿದೆ. ಜೊತೆಗೆ ಬರುವ ಶೈಕ್ಷಣಿಕ ಸಾಲಿನಿಂದ ಉಚಿತವಾಗಿ ನೋಟ್‌ ಪುಸ್ತಕಗಳನ್ನೂ ನೀಡಲು ತೀರ್ಮಾನಿಸಿದ್ದು, ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.ಕನ್ನಡ ಶಾಲೆಗೆ ಅನುದಾನ:

ಅನುದಾನರಹಿತ ಖಾಸಗಿ ಕನ್ನಡ ಶಾಲೆಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸುವ ಬಗ್ಗೆ ಚರ್ಚೆ ನಡೆದಿದೆ. ಎಷ್ಟು ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬಹುದು, ಇದರಿಂದ ಎಷ್ಟು ಆರ್ಥಿಕ ಹೊರೆಯಾಗಲಿದೆ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಲಾಗಿದೆ. ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಮತ್ತೆ ಚರ್ಚಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಇದೇ ವೇಳೆ ಹೇಳಿದರು.ಕೋಟ್‌

ಎಸ್ಸೆಸ್ಸೆಲ್ಸಿ, 2ನೇ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ:

ನಿಗದಿತ ವೇಳಾಪಟ್ಟಿಯಂತೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆದಿದೆ. ಫಲಿತಾಂಶ ಹೆಚ್ಚಳಕ್ಕೆ ಈ ಬಾರಿ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಎಸ್ಸೆಸ್ಸೆಲ್ಸಿಯಲ್ಲಿ 8000 ಪ್ರಶ್ನೆಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ನೀಡಲಾಗಿದೆ. ಅವುಗಳಿಗೆ ಉತ್ತರ ಕಲಿತುಕೊಂಡರೆ ಪರೀಕ್ಷೆಗೆ ಬಹುತೇಕ ಪ್ರಶ್ನೆಗಳು ಅವುಗಳಿಂದಲೇ ಬರಬಹುದು. ಸಂಪನ್ಮೂಲ ವ್ಯಕ್ತಿಗಳ ಮೂಲಕವೂ ಮಕ್ಕಳಿಗೆ ಪರೀಕ್ಷಾ ಮಾರ್ಗದರ್ಶನ ನೀಡಲಾಗಿದೆ. ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ.

-- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!