ಸಮೀಕ್ಷೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಕೆ ಮಾಡುವುದಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Jun 22, 2025, 01:18 AM IST
ಪೊಟೋ: 21ಎಸ್‌ಎಂಜಿಕೆಪಿ04: ಮಧು ಬಂಗಾರಪ್ಪ  | Kannada Prabha

ಸಾರಾಂಶ

ರಾಜ್ಯ ಸರ್ಕಾರ ಮತ್ತೊಮ್ಮೆ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಕೆ ಮಾಡುವುದಿಲ್ಲ, ಬದಲಿಗೆ ಹೊರಗುತ್ತಿಗೆ ನೀಡಲು ಯೋಚಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರ ಮತ್ತೊಮ್ಮೆ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಕೆ ಮಾಡುವುದಿಲ್ಲ, ಬದಲಿಗೆ ಹೊರಗುತ್ತಿಗೆ ನೀಡಲು ಯೋಚಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದರೆ ವಾರಗಟ್ಟಲೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠಪ್ರವಚನಕ್ಕೆ ತೊಂದರೆಯಾಗಲಿದೆ ಎಂಬುದನ್ನು ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದೇನೆ. ಹೀಗಾಗಿ ಶಿಕ್ಷಕರ ಬಳಕೆ ಮಾಡುತ್ತಿಲ್ಲ ಎಂದರು.

ಎಐಸಿಸಿ ನಾಯಕ ರಾಹುಲ್ ಗಾಂದಿ ಹಾಗೂ ಜನಾಭಿಪ್ರಾಯದ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಗೆ ಮುಂದಾಗಿದೆ. ಬಿಜೆಪಿ ರಾಜಕೀಯ ಲಾಭದ ಆಶಯದೊಂದಿಗೆ ಈ ಸಮೀಕ್ಷೆ ನಡೆಸಲಿದೆ. ಆದರೆ ರಾಜ್ಯದ ಜಾತಿಗಣತಿಯೇ ಹೆಚ್ಚು ನಿಖರ, ಸ್ಪಷ್ಟ ಹಾಗೂ ವಿಶ್ವಾಸಾರ್ಹ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆದಿವೆ. ಈಗಾಗಲೇ ಶೇ. 75 ರಷ್ಟು ಕೆಲಸ ಆಗಿದೆ. ಈಗ ಕೋರ್ಟ್ ನಲ್ಲಿ ಎಲ್ಲವೂ ಇತ್ಯರ್ಥವಾಗಬೇಕಿದೆ. ಬ್ಲಾಕ್ ಸಮಸ್ಯೆ ಸೇರಿದಂತೆ ಯಾವುದೇ ಅಹವಾಲು ಇದ್ದರೆ ಸಂತ್ರಸ್ಥರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು, ಅವು ಸರ್ಕಾರಕ್ಕೆ ಸಲ್ಲಿಕೆಯಾಗಿ ಅಲ್ಲಿಂದ ಕೋರ್ಟ್ ತಲುಪಲಿವೆ ಎಂದು ಹೇಳಿದರು. ಇದು ತುಂಬಾ ಹಿಂದಿನ ಸಮಸ್ಯೆ. ಕಾಗೋಡು ತಿಮ್ಮಪ್ಪ ಅವರು ಒಂದು ಹಂತದಲ್ಲಿ ಹೋರಾಟ ನಡೆಸಿ, ಸಂತ್ರಸ್ತರಿಗೆ ಭೂಮಿಹಕ್ಕು ನೀಡುವ ವಿಚಾರಕ್ಕೆ ಕಾನೂನು ರೂಪ ನೀಡುವ ಹಂತದಲ್ಲಿ ಅದಕ್ಕೆ ಅಡ್ಡವಾಗಿದ್ದೆ ಬಿಜೆಪಿಯವರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಹಾಳುಮಾಡಿದರು.ಶರಾವತಿ ಸಂತ್ರಸ್ತರ ಸಮಸ್ಯೆ ಬಿಜೆಪಿಯ ಪಾಪದ ಕೂಸು. ಅದನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಿಗೆ ಬೇಡಿಕೆ ಹೆಚ್ವಾಗಿದೆ. ಹಾಗಾಗಿ ಇಲ್ಲಿನ ಮಕ್ಕಳ ಪ್ರವೇಶಾತಿ ಸಂಖ್ಯೆಯನ್ನು ೩೦ ರಿಂದ ೫೦ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಪ್ರತಿವಿಧಾನ ಸಭಾ ಕ್ಷೇತ್ರದಲ್ಲೂ ಕನಿಷ್ಟ ೨ ರಿಂದ ೩ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮುಂದೆ ಈ ಸಂಖ್ಯೆ ಹೆಚ್ವಾಗಬಹುದು. ಆದರೂ ಸರ್ಕಾರಿ ಶಾಲೆಗಳಿಗೆ ದಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಕೆ.ಪಿ.ಶ್ರೀಪಾಲ್, ಜಿ.ಡಿ. ಮಂಜುನಾಥ್, ಶ್ವೇತಾ ಬಂಡಿ, ಆದರ್ಶ್ ಹುಂಚದಕಟ್ಟೆ, ತೇಜಪ್ಪ, ರವಿ ಎಂ.ಡಿ ಇದ್ದರು.

ಸಂಸದ ಬಿ.ವೈ.ರಾಘವೇಂದ್ರಗೆ ತಿರುಗೇಟು

ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತವರ ಸಹೋದರ ನಿಪುಣರು. ತಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ಇಬ್ಬರು ಏನು ಮಾಡಿದ್ದರು ಎನ್ನುವುದು ಜಿಲ್ಲೆಯ ಜನತೆಗೆ ಗೊತ್ತಿದೆ. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರ ಮತ್ತು ಜಿಲ್ಲೆಯ ನಾಯಕರು ವರ್ಗಾವಣೆ ದಂಧೆಯಲ್ಲಿದ್ದಾರೆ ಎಂಬ ಸಂಸದ ರಾಘವೇಂದ್ರ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ ಕಾಂಗೆಸ್ ಸರ್ಕಾರ ಇದೆ. ರಾಘವೇಂದ್ರ ಅವರು ಬಾಯಿಗೆ ಬಂದಂತೆ ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡಿದರೆ, ನಾವು ಅವರ ಕಾಲದಲ್ಲಿ ಏನೇನಾಗಿದೆ ಎಂಬ ಎಲ್ಲವನ್ನು ಬಿಚ್ಚಿಡಬೇಕಾಗುತ್ತದೆ. ಈ ಬಗ್ಗೆ ಅವರಿಗೆ ಎಚ್ಚರವಿರಲಿ ಎಂದು ಕುಟುಕಿದರು.

ಜಿಲ್ಲೆಯ ಅಭಿವೃಧ್ಧಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಪ್ರತಿನಿಧಿಗಳಾಗಿ ನಾವು ನಮ್ಮ ಕೆಲಸ ಮಾಡಬೇಕಾಗುತ್ತದೆ. ಇದನ್ನು ಪಶ್ನೆ ಮಾಡುತ್ತಾ ಬೇಕಾಬಿಟ್ಟಿ ಆರೋಪ ಮಾಡುವುದಲ್ಲ. ಸಂಸದ ರಾಘವೇಂದ ಅವರು ಬಿಜೆಪಿ ಸರ್ಕಾರವೇ ಇದೆ ಎನ್ನುವ ಗುಂಗಿನಲ್ಲಿದ್ದಾರೆ. ಮೊದಲು ಅವರು ಈ ಭ್ರಮೆಯಿಂದ ಹೊರ ಬರಲಿ. ಜನರು ಕಟ್ಟಿದ ತೆರಿಗೆ ಹಣದಲ್ಲಿ ಯೋಜನೆ ಬರುತ್ತವೆ. ಜೋಗದಲ್ಲಿ ಹೋಗಿ ಕನ್ನಡಕದ ಬಗ್ಗೆ ಮಾತನಾಡುವುದು, ಸಿಗಂದೂರು ಸೇತುವೆ ಮೇಲೆ ಹೋಗಿ ಪರಿಶೀಲನೆ ಮಾಡುವ ನಾಟಕ ಬೇಡ. ಸೇತುವೆಗೆ ಕೇಂದ್ರ ಸರ್ಕಾರದ ಅನುದಾನ ಬಂದಿದೆ ನಿಜ. ಆದರೆ ಕೇಂದ ಸರ್ಕಾರಕ್ಕೆ ರಾಜ್ಯದಿಂದ ಎಷ್ಟು ತೆರಿಗೆ ಹೋಗುತ್ತಿದೆ ಎಂದು ಅವರು ಯಾರಿಗಾದರೂ ಹೇಳಿದ್ದಾರಾ ಎಂದು ಮಧು ಬಂಗಾರಪ್ಪ ಪಶ್ನಿಸಿದರು

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ