ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಈ ವರ್ಷ ಒಂದರಿಂದ ಐದು ಮಕ್ಕಳು ಮಾತ್ರ ದಾಖಲಾಗಿರುವ ೭ಶಾಲೆಗಳಿವೆ. ಆದರೆ ಸರ್ಕಾರದ ಸೂಚನೆಯಂತೆ ಒಬ್ಬರಿದ್ದರೂ ಶಾಲೆಯನ್ನು ಮುಚ್ಚದೆ ತರಗತಿ ನಡೆಸಬೇಕಾಗಿರುವುದರಿಂದ ಮೊದಲೇ ಶಿಕ್ಷಕರ ಕೊರತೆ ಇದೆ, ಈಗ ಒಬ್ಬ ವಿದ್ಯಾರ್ಥಿಗೂ ಒಬ್ಬ ಶಿಕ್ಷಕರನ್ನು ನೇಮಕ ಮಾಡುವುದರಿಂದ ಮತ್ತಷ್ಟು ಸಮಸ್ಯೆ ಉಂಟಾಗಿದೆ.ಸರ್ಕಾರಿ ಶಾಳೆಗಳಲ್ಲಿ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ,ಆದರೆ ಫಲಿತಾಂಶ ಮಾತ್ರ ನಿರೀಕ್ಷೆ ಮಟ್ಟದಲ್ಲಿ ಇಲ್ಲದಿರುವುದು ಸರ್ಕಾರಕ್ಕೆ ತಲೆಬಿಸಿ ಉಂಟಾಗಿ ಆಯಾ ಬಿಇಒ ಗಳಿಗೆ ನೋಟಿಸ್ ನೀಡಿ ಕಾರಣ ಕೇಳಿದೆ. ಆದರೆ ವಾಸ್ತವಾಂಶ ಪ್ರಕಾಶ ಸರ್ಕಾರ ಬಟ್ಟೆ, ಪುಸ್ತಕ, ಬಿಸಿಯೂಟ ನೀಡಿದೆ, ಆದರೆ ಮೂಲಭೂತವಾಗಿ ಬೇಕಾಗಿರುವ ಶಿಕ್ಷಕರನ್ನೇ ನೀಡಿಲ್ಲ. ೫೦- ೬೦ ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೀಡಿದರೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯವೆಂಬುದು ಪೋಷಕರ ವಾದವಾಗಿದೆ.
ತಾಲೂಕಿನಲ್ಲಿ ಒಟ್ಟು ೪೮೫ ಶಿಕ್ಷಕರ ಕೊರತೆ ಇದೆ, ಈ ಪೈಕಿ ಅತಿಥಿ ಶಿಕ್ಷಕರಾಗಿ ೩೭ಮಂದಿಯನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ, ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದಂತಾಗಿದೆ. ಕಾಯಂ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಅವಧಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.ಸರ್ಕಾರವೇ ಶಾಲೆಗಳಿಗೆ ಕಾಯಂ ಶಿಕ್ಷಕರನ್ನು ನೇಮಿಸದೆ ನಿರ್ಲಕ್ಷ್ಯವಹಿಸುತ್ತಿದೆ, ಇದರಿಂದ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿದೆ.ಶಿಕ್ಷಕರಿಲ್ಲದೆ ಶಾಲೆಗಳನ್ನು ಆರಂಭಿಸುವುದೇ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಒಬ್ಬ ಶಿಕ್ಷಕ ಎಲ್ಲಾ ವಿಷಯಗಳಿಗೆ ಪಾಠ ಮಾಡುವುದಾದರೂ ಹೇಗೆ, ಆರ್ಥಿಕವಾಗಿ ಹೊರೆಯಾದರೂ ಪರವಾಗಿಲ್ಲ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ನಿರ್ಧರಿಸಿದ್ದೇವೆ ಎಂದು ಗಡಿ ಭಾಗದ ಮಕ್ಕಳ ಪೋಷಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.