ಸರ್ಕಾರಿ ಶಾಲೆಗಳು ಪ್ರತಿಭಾವಂತರು, ಸಾಧಕರ ಸೃಷ್ಟಿಗೆ ಸಾಕ್ಷಿ: ಶಾಸಕ ಶಿವಣ್ಣನವರ

KannadaprabhaNewsNetwork | Published : Jul 11, 2024 1:31 AM

ಸಾರಾಂಶ

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಶಾಲೆಗಳಲ್ಲಿಯೂ ಅಗತ್ಯವಾದ ಮೂಲ ಸೌಕರ್ಯ ಸೇರಿದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಆದ್ಯತೆ ನೀಡಲಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ: ಸರ್ಕಾರಿ ಶಾಲೆಗಳು ದೇಶದ ಬಹುದೊಡ್ಡ ಆಸ್ತಿ, ದೇಶಕ್ಕೆ ಸಾಕಷ್ಟು ಪ್ರತಿಭಾವಂತರು ಹಾಗೂ ಸಾಧಕರ ಸೃಷ್ಟಿಗೆ ಸಾಕ್ಷಿಯಾಗಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ಎಸ್‌ಜೆಜೆಎಂ ಶಾಲೆಯಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ, ಶಿಕ್ಷಕರು ಕೂಡ ಶಾಲೆಯಲ್ಲಿನ ಮಕ್ಕಳಿಗೆ ಗುಣಾತ್ಮಕ ಹಾಗೂ ಸೃಜನಾತ್ಮಕ ಶಿಕ್ಷಣ ಕೊಡುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವಂತಹ ಮಹಾನ್ ಚೇತನಗಳನ್ನಾಗಿ ರೂಪಿಸುವಂತೆ ಮನವಿ ಮಾಡಿದರು.

ಅಗತ್ಯ ಮೂಲ ಸೌಕರ್ಯ: ದೇಶದ ಸರ್ವಾಂಗೀಣ ಪ್ರಗತಿ ಅಲ್ಲಿನ ಶೈಕ್ಷಣಿಕ ಪ್ರಗತಿ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸರ್ಕಾರ ಒಂದಿಲ್ಲೊಂದು ಯೋಜನೆ ಜಾರಿಗೊಳಿಸುತ್ತಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಶಾಲೆಗಳಲ್ಲಿಯೂ ಅಗತ್ಯವಾದ ಮೂಲ ಸೌಕರ್ಯ ಸೇರಿದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಆದ್ಯತೆ ನೀಡಲಿದ್ದೇನೆ ಎಂದರು.

ಗುಣಮಟ್ಟಕ್ಕೆ ಆದ್ಯತೆ ನೀಡಿ: ಯಾವುದೇ ಕಾಮಗಾರಿಯಾಗಲಿ ಅದನ್ನ ಅತ್ಯಂತ ಮುತುವರ್ಜಿ ವಹಿಸಿ ದೀರ್ಘ ಬಾಳಿಕೆ ಬರುವಂತೆ ನಿರ್ಮಿಸಬೇಕಿದೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಕಳಪೆ ಕಾಮಗಾರಿ ಒಪ್ಪಲು ಸಾಧ್ಯವೇ ಇಲ್ಲ. ಒಂದು ವೇಳೆ ಕಳಪೆ ಕಾಮಗಾರಿ ನಡೆದಲ್ಲಿ ಗುತ್ತಿಗೆದಾರರನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದರು.

ಈ ವೇಳೆ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ದತ್ತಾತ್ರೇಯ ಸಾಳುಂಕೆ, ಬಿ.ಎನ್. ಹೊಸಗೌಡ್ರ, ಅರುಣ ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ನಾಗರಾಜ ಆನ್ವೇರಿ, ಮಂಜುನಾಥ ಬೋವಿ, ಆರ್.ಜಿ. ಕಳ್ಯಾಳ, ಮುನಾಫ್ ಎರೆಸೀಮಿ, ಲಕ್ಷ್ಮೀ ಜಿಂಗಾಡೆ, ಸೋಮಶೇಖರ ಸಂಕಣ್ಣನವರ, ಖಾದರಸಾಬ್ ದೊಡ್ಮನಿ, ಹನುಮಂತ ಬೊಮ್ಮಲಾಪುರ, ರಫೀಕ್ ಮುದ್ಗಲ್, ಮನ್ಸೂರ್‌ಹಕೀಮ್, ನಜೀರಹ್ಮದ್ ಶೇಖ್, ಅಕ್ಷರ ದಾಸೋಹಾಧಿಕಾರಿ ಎನ್. ತಿಮ್ಮಾರೆಡ್ಡಿ, ಸಮನ್ವಯಾಧಿಕಾರಿ ಎಂ.ಎಫ್. ಹುಳ್ಯಾಳ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಪ್ರಾಚಾರ್ಯ ಮಾಲತೇಶ ಬಂಡೆಪ್ಪನರ, ಉಪ ಪ್ರಾಚಾರ್ಯ ಈರಣ್ಣ ಅಕ್ಕಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share this article