ಕುಡಿಯುವ ನೀರಿನ ಕಾಮಗಾರಿ ಪರಿಶೀಲಿಸಿದ ಸಚಿವ ಪ್ರಿಯಾಂಕ್

KannadaprabhaNewsNetwork | Published : Jul 11, 2024 1:31 AM

ಸಾರಾಂಶ

ಕಾಮಗಾರಿ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ , ಚಳ್ಳಕರೆ ಸಮೀಪ ಬಿಸಿ ಕೆರೆಯ ಬಳಿ ಪೈಪು ಕೆಟ್ಟು ದುರಸ್ತಿ ಕಾರ್ಯ ನಡೆಯುತ್ತಿದೆ. ಬುಧವಾರ ನಾಲ್ಕು ಗಂಟೆಯೊಳಗೆ ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿಯ ಒವರ್‌ಹೆಡ್‌ ಟ್ಯಾಂಕ್‌ಗೆ ನೀರು ಸರಬರಾಜಾಗುವ ಭರವಸೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ವಿಜಯನಗರ ಜಿಲ್ಲೆ, ಹೊಸಪೇಟೆ ಡ್ಯಾಂನಿಂದ ತುಂಗಭದ್ರಾ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆಯ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಪಾವಗಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಯೋಜನೆ ಕುರಿತು ಸಮಗ್ರ ಮಾಹಿತಿ ಪಡೆದರು.

ತಾಲೂಕಿನ ಕುಡಿಯುವ ನೀರಿನ ಜ್ವಲಂತ ಸಮಸ್ಯೆ, ಇತರೆ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಸಮಸ್ಯೆ ಹಾಗೂ ಜನಜಂಗುಳಿ ಹೆಚ್ಚುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಶೀಘ್ರ ಭೈಪಾಸು ರಸ್ತೆ ನಿರ್ಮಾಣ ಕುರಿತು ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ಅವರ ಮನವಿ ಸ್ವೀಕರಿಸಿದ ಸಚಿವ ಪ್ರಿಯಾಂಕ ಖರ್ಗೆ , ತುಂಗಭದ್ರಾ ಯೋಜನೆಯ ನೀರು ಸಂಗ್ರಹ ಸ್ಥಳ, ನಿಡಗಲ್‌ ಬೆಟ್ಟ ಸಮೀಪದ ತಾಲೂಕಿನ ಕಾರನಾಗನಹಟ್ಟಿ ಗ್ರಾಮದ ಕರೆಕಲ್ಲು ಗುಡ್ಡದ ಮೇಲೆ ನಿರ್ಮಿಸಿದ್ದ 13 ಲಕ್ಷ ಲೀಟರ್ ನೀರು ಶೇಖರಣೆ ಸಾಮರ್ಥ್ಯದ ಒವರ್‌ ಹೆಡ್‌ ಎಂಬಿಆರ್ 2 ಟ್ಯಾಂಕ್‌ನ್ನು ಪರಿಶೀಲಿಸಿದರು.

ತಾಲೂಕಿಗೆ ತುಂಗಭದ್ರಾ ನೀರು ಬುಧವಾರ ಸಂಜೆ ವೇಳೆಗೆ ತಾಲೂಕಿನ ಗಡಿಯ ಕೆಂಚಮ್ಮನಹಳ್ಳಿಯ ಒವರ್‌ ಹೆಡ್‌ ಟ್ಯಾಂಕ್‌ಗೆ ಸರಬರಾಜಾಗಲಿದೆ. ಓವರ್‌ ಹೆಡ್‌ ಟ್ಯಾಂಕ್‌ಗಳ ನಿರ್ಮಾಣದ ಕಾರ್ಯ ಅಂತಿಮ ಹಂತದಲ್ಲಿದ್ದು, ಪರೀಕ್ಷೆಗಾಗಿ 200 ಲಕ್ಷ ಲೀ. ಸಂಗ್ರಹದ ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗಲಿದೆ. ಅಗತ್ಯವಿರುವ ಗ್ರಾಮಗಳಿಗೆ ಈ ನೀರು ಜು.12ರಿಂದಲೇ ಪೂರೈಕೆಯಾಗಲಿದ್ದು, ಆಗಸ್ಟ್ 15ರ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ಎಚ್‌.ವಿ.ವೆಂಕಟೇಶ್‌ ಇತರೆ ರಾಜ್ಯ ಸಚಿವರ ಸಮ್ಮುಖದಲ್ಲಿ ಮನೆಮನೆಗೆ ನಲ್ಲಿ ಮೂಲಕ ತುಂಗಭದ್ರಾ ಯೋಜನೆ ನೀರು ಸರಬರಾಜಿಗೆ ಅಧಿಕೃತ ಚಾಲನೆ ನೀಡಲಿರುವುದಾಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ವ್ಯಕ್ತವಾಗಿದೆ.

ಕಾಮಗಾರಿ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ , ಚಳ್ಳಕರೆ ಸಮೀಪ ಬಿಸಿ ಕೆರೆಯ ಬಳಿ ಪೈಪು ಕೆಟ್ಟು ದುರಸ್ತಿ ಕಾರ್ಯ ನಡೆಯುತ್ತಿದೆ. ಬುಧವಾರ ನಾಲ್ಕು ಗಂಟೆಯೊಳಗೆ ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿಯ ಒವರ್‌ಹೆಡ್‌ ಟ್ಯಾಂಕ್‌ಗೆ ನೀರು ಸರಬರಾಜಾಗುವ ಭರವಸೆ ವ್ಯಕ್ತಪಡಿಸಿದರು.

ಗುತ್ತಿಗೆ ನಿರ್ವಹಣೆ ಹೊತ್ತ ಯೋಜನೆಯ ಮೆಗಾ ಕಂಪನಿಯ ವ್ಯವಸ್ಥಾಪಕ ಕೋಟೇಶ್ವರ್‌, ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಿಇಒ ಮಹಮ್ಮದ್‌ ಅಜಿಜ್‌ ಹುಸೇನ್‌, ಜಿಪಂ ಸಿಇಒ ಜಿ.ಪ್ರಭು, ಮಧುಗಿರಿ ಜಿಪಂ ಉಪವಿಭಾಗದ ಕಾರ್ಯಪಾಲಕ ಅಭಿಯಂತರ ರವೀಶ್‌, ತಾಪಂ ಇಒ ಜಾನಕಿರಾಮ್‌, ಕುಡಿಯುವ ನೀರು ವಿಭಾಗದ ಎಇಇ ಹನುಮಂತಯ್ಯ, ಸಹಾಯಕ ಎಂಜಿನಿಯರ್ ಬಸವಲಿಂಗಪ್ಪ ಹಾಗೂ ರಂಗಸಮುದ್ರ ಗ್ರಾಪಂ ಅಧ್ಯಕ್ಷೆ ಮಾರಕ್ಕ ರಾಜಣ್ಣ, ಅಕ್ಕಮಹಾದೇವಿ, ಎಪಿಎಂಸಿ ಮಾಜಿ ಅಧ್ಯಕ್ಷ ದೊಡೇನಹಳ್ಳಿ ಮಾರಪ್ಪ, ಜಯರಾಮಪ್ಪ, ಚಂದ್ರಶೇಖರರೆಡ್ಡಿ ಸದಸ್ಯರಾದ ಮಹಾಲಿಂಗಪ್ಪ, ಓಬಳಾಪುರ ಮಂಜುನಾಥ್‌ ಹಾಗೂ ಪಿಡಿಒ ದಾದಲೂರಪ್ಪ ಮತ್ತಿತರರಿದ್ದರು.

Share this article