ಕನ್ನಡಪ್ರಭ ವಾರ್ತೆ ಮದ್ದೂರು
ಪ್ರಸ್ತುತ ದಿನಗಳಲ್ಲಾದರೂ ದೇವಾಲಯಗಳಿಗಿಂತ ಸರ್ಕಾರಿ ಆಸ್ಪತ್ರೆಗಳು ಜೀರ್ಣೋದ್ಧಾರವಾಗಿರಲಿ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಮದ್ದೂರು ಸಂಸ್ಕೃತಿ ಅಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆಸ್ಪತ್ರೆಗೆ ಬೆಡ್ ಶೀಟ್ ಮತ್ತು ಹೊದಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಗ್ರಾಮದಲ್ಲಿ ೩ ರಿಂದ ೬ ದೇವಾಲಯಗಳು ಇರುತ್ತವೆ, ಆದರೆ, ಆರೋಗ್ಯ ರಕ್ಷಿಸುವ ಪ್ರಾಥಮಿಕ ಆರೋಗ್ಯ ಕೇಂದ್ರವಾಗಲಿ, ಜೀವ ಉಳಿಸುವ ಸಮುದಾಯ ಆರೋಗ್ಯ ಕೇಂದ್ರಗಳಾಲಿ ಇರಲ್ಲ, ಇದ್ದರೂ ಗ್ರಾಮಸ್ಥರ ಸಹಕಾರದಿಂದ ಸರ್ಕಾರಿ ಆಸ್ಪತ್ರೆಗಳು ಜೀರ್ಣೋದ್ಧಾರವಾಗಲು ಸಾಧ್ಯವಾಗಿರುವುದಿಲ್ಲ ಎಂದು ನುಡಿದರು.ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಗಳೇ ನಿಜವಾದ ದೇವಸ್ಥಾನಗಳು, ವೈದ್ಯರೇ ಜೀವ ಉಳಿಸುವ ದೇವರು ಎನ್ನುವುದು ಕೋವಿಡ್-೧೯ರ ದಿನಗಳಲ್ಲಿ ಎಲ್ಲರಿಗೂ ತಿಳಿದಿದೆ, ಕೊರೋನಾ ದಿನಗಳಲ್ಲಿ ಎಲ್ಲಾ ದೇವಾಲಯಗಳು ಬಾಗಿಲು ಮುಚ್ಚಿದ್ದವು, ಆದರೆ ಸರ್ಕಾರಿ ಆಸ್ಪತ್ರೆಗಳು, ದೇವರಂತ ವೈದ್ಯರು ಜನರ ಸೇವೆ, ಜೀವ ಉಳಿಸಲು ಹೋರಾಡುತ್ತಿದ್ದರು ಎಂದು ಸ್ಮರಿಸಿದರು.
ತುರ್ತು ಆರೋಗ್ಯ ರಕ್ಷಣೆಗಾಗಿ, ತಕ್ಷಣದ ಹೆರಿಗೆಗಾಗಿ ಹತ್ತಾರು ಮೈಲಿಗಳ ದೂರ ಅನಾರೋಗ್ಯಸ್ಥರನ್ನು, ಮಕ್ಕಳು-ಗರ್ಭಿಣಿ ತಾಯಂದಿರನ್ನು ಕರದೋಯ್ಯಬೇಕಿರುವ ಪರಿಸ್ಥತಿಯನ್ನು ಎದುರಿಸುತ್ತಿದ್ದೇವೆ ಎಂದು ಎಚ್ಚರಿಸಿದರು.ದೇವಾಯಲಯಗಳ ಕಟ್ಟುವ ಬದಲು ಶಾಲೆಗಳನ್ನು, ಆಸ್ಪತ್ರೆಗಳನ್ನು ನಿರ್ಮಿಸಲು ಒತ್ತಾಯಿಸಿ, ಜೀರ್ಣೋದ್ಧಾರಗೊಳಿಸುವ ಹಣದಲ್ಲಿ ಶಾಲೆ-ಆಸ್ಪತ್ರೆಗಳನ್ನು ಹೈಟೆಕ್‌ಆಗಿ ಅಭಿವೃದ್ಧಿಪಡಿಸಿ, ಗ್ರಾಮೀಣ ಜನರ ಆರೋಗ್ಯ ರಕ್ಷಿಸಿದಂತಾಗಿತ್ತದೆ ಎಂದು ಹೇಳಿದರು.
ಬಿಪಿ, ಶುಗರ್, ಹೃದಯಘಾತದಂತಹ ಅಪಾಯಕಾರಿ ಅನಾಹುತದಿಂದ ಮತ್ತು ಅನಾರೋಗ್ಯಸ್ಥರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಯುವಸಮುದಾಯ, ಸಂಘಟಕರು, ಗ್ರಾಮಸ್ಥರು ಮುಂದಾಗಲಿ ಎಂದು ಕಿವಿಮಾತು ಹೇಳಿದರು.ಬಳಿಕ ಮಾತನಾಡಿದ ಮದ್ದೂರು ಸಂಸ್ಕೃತಿ ಅಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಲ್. ರಾಮಯ್ಯ, ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ, ಸಂಸ್ಕೃತಿ ಅಲಯನ್ಸ್ ಸಂಸ್ಥೆಯಿಂದ ಅಳಿಲು ಸೇವೆ ಮಾಡಲು ಮುಂದಾಗಿದ್ದು, ಒಳ ರೋಗಿಗಳ ಹಿತಕ್ಕಾಗಿ ೩೦ ಸಾವಿರ ಮೌಲ್ಯದ ಹಾಸಿಗೆ, ಹೊದಿಕೆಗಳನ್ನು ನೀಡುತ್ತಿದ್ದೇವೆ ಎಂದು ನುಡಿದರು.
ಆಸ್ಪತ್ರೆಯ ಒಳರೋಗಿಗಳ ಅನುಕೂಲಕ್ಕಾಗಿ ೩೦ ಸಾವಿರ ರು. ಮೌಲ್ಯದ ಪರಿಕರಗಳಾದ ನಾಲ್ಕು ಗುಣಮಟ್ಟದ ಹಾಸಿಗೆಗಳು ಮತ್ತು ಹೊದಿಕೆಗಳನ್ನು ವೈದ್ಯರಿಗೆ ಹಸ್ತಾಂತರಿಸಲಾಯಿತು.ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆಯ ೧ನೇ ಉಪರಾಜ್ಯಪಾಲ ಎಚ್. ಮಾದೇಗೌಡ, ವೈದ್ಯಾಧಿಕಾರಿ ಡಾ. ಸುನಿಲ್ ಕುಮಾರ್, ಮದ್ದೂರು ಸಂಸ್ಕೃತಿ ಅಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷ ಆರ್.ಮಹೇಶ್, ಕಾರ್ಯದರ್ಶಿ ಅಭಿಲಾಶ್, ಖಜಾಂಚಿ ಹರಿಹೆಗಡೆ ಸದಸ್ಯರಾದ ಪ್ರಶಾಂತ್, ಪ್ರಕಾಶ್ ಕೆಂಪಣ್ಣ, ಪ್ರಭಾಕರ್ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.