ಮನೆಗೆ ತೆರಳಲು ದಾರಿ ಬಿಡಿಸಿಕೊಡಿ: ಹಾಸನ ಡಿಸಿಗೆ ಆಲೂರಿನ ನಾಕಲಗೋಡು ಗ್ರಾಮದ ನಿವಾಸಿ ಎನ್.ಆರ್ ಆನಂದ್ ಮೊರೆ

KannadaprabhaNewsNetwork | Published : Jun 2, 2024 1:45 AM

ಸಾರಾಂಶ

ಸ್ಥಳೀಯ ಜಮೀನಿನವರು ಅಡ್ಡಲಾಗಿ ಬೇಲಿ ನಿರ್ಮಾಣ ಮಾಡಿದ್ದು ಕಳೆದ ಮೂವತ್ತು ವರ್ಷಗಳಿಂದ ವಾಸವಿದ್ದ ಮನೆಗೆ ಹೋಗಲು ಯಾವುದೇ ರಸ್ತೆ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಆಲೂರು ತಾಲೂಕಿನ ನಾಕಲಗೋಡು ಗ್ರಾಮದ ನಿವಾಸಿ ಎನ್.ಆರ್.ಆನಂದ್ ಅಳಲು ತೋಡಿಕೊಂಡರು. ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಡಿಸಿ ಸತ್ಯಭಾಮಗೆ ಮನವಿ । ಆಲೂರಿನ ನಾಕಲಗೋಡು ಗ್ರಾಮದ ನಿವಾಸಿ ಎನ್.ಆರ್ ಆನಂದ್ ಅಳಲು । ಮನೆಗೆ ಅಡ್ಡಲಾಗಿ ಬೇಲಿ ನಿರ್ಮಾಣ

ಕನ್ನಡಪ್ರಭ ವಾರ್ತೆ ಹಾಸನ

ಸ್ಥಳೀಯ ಜಮೀನಿನವರು ಅಡ್ಡಲಾಗಿ ಬೇಲಿ ನಿರ್ಮಾಣ ಮಾಡಿದ್ದು ಕಳೆದ ಮೂವತ್ತು ವರ್ಷಗಳಿಂದ ವಾಸವಿದ್ದ ಮನೆಗೆ ಹೋಗಲು ಯಾವುದೇ ರಸ್ತೆ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಆಲೂರು ತಾಲೂಕಿನ ನಾಕಲಗೋಡು ಗ್ರಾಮದ ನಿವಾಸಿ ಎನ್.ಆರ್.ಆನಂದ್ ಅಳಲು ತೋಡಿಕೊಂಡರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪತ್ನಿ ಹಾಗೂ ಎರಡು ಮಕ್ಕಳೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ರಸ್ತೆ ಸಮಸ್ಯೆ ಬಗೆಹರಿಸುವಂತೆ ಮನವಿ ನೀಡಲು ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಲೂರು ತಾಲೂಕಿನ ನಾಕಲಗೋಡು ಗ್ರಾಮದ ಸರ್ವೆ ನಂಬರ್ ೬೫/೪ ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡು ೧೯೯೪ ಜೀವನ ನಡೆಸುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಸ್ಥಳೀಯ ಜಮೀನಿನವರು ಮನೆಗೆ ಸಾಗುವ ದಾರಿಯಲ್ಲಿ ಸಂಚಾರ ನಡೆಸಲು ಅಡ್ಡಿಪಡಿಸುತ್ತಿದ್ದು, ಇದೀಗ ಹದಿನೈದು ದಿನಗಳ ಹಿಂದೆ ರಸ್ತೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸಿ, ಅಡ್ಡಲಾಗಿ ಬೇಲಿ ನಿರ್ಮಾಣ ಮಾಡಿ ಈಗ ಮನೆಗೆ ಸಂಚಾರ ನಡೆಸದಂತೆ ಸಂಪೂರ್ಣವಾಗಿ ರಸ್ತೆ ಬಂದ್ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಕಸಬಾ ಹೋಬಳಿ ಕಣತೂರು ಗ್ರಾಪಂ ನಿಂದ ಪತ್ನಿ ಪ್ರಭಾವತಿ ಹೆಸರಿಗೆ ಇ-ಸ್ವತ್ತು ಪಡೆದಿದ್ದೇವೆ. ೧೯೯೪ ರಿಂದ ಮನೆಗೆ ವಿದ್ಯುತ್ ಸಂಪರ್ಕ ಕೂಡ ಪಡೆದಿದ್ದೇವೆ. ಅಂದಿನಿಂದಲೂ ಸರ್ವೆ ನಂ. ೫೫ ರಲ್ಲಿ ನಾವು ಸಂಚಾರ ನಡೆಸುತ್ತಿದ್ದೆವು. ಹೀಗಿರುವಾಗ ಗ್ರಾಮದ ತಿಮ್ಮೇಗೌಡ ಮತ್ತು ಸುಂದರರಾಜು ಎಂಬುವವರು ಸ.ನಂ.೫೫ ನಲ್ಲಿ ಸರ್ಕಾರದಿಂದ ೧-೨೦ಗುಂಟೆ ಜಾಗವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ನಮಗೆ ತಿಳಿಯದ ರೀತಿಯಲ್ಲಿ ಮಂಜೂರಾತಿ ಮಾಡಿಸಿ ಸರ್ವೆಯರ್ ರವರಿಂದ ಹದ್ದುಬಸ್ತು ಮಾಡಿಸಿಕೊಂಡು ನಮಗೀಗ ಸಂಚಾರ ನಡೆಸಲು ರಸ್ತೆ ಇಲ್ಲದಂತೆ ಮಾಡಿದ್ದಾರೆ’ ಎಂದು ದೂರಿದರು.

‘ನಾವು ಈ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಪಂ ಸೇರಿದಂತೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೂ ಸಹ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ನಮ್ಮ ಸಮಸ್ಯೆಯನ್ನು ಯಾರು ಸಹ ಗಂಭೀರವಾಗಿ ಪರಿಗಣಸದೆ ನಿರ್ಲಲಕ್ಷ್ಯ ತೋರುತ್ತಿದ್ದಾರೆ. ನನ್ನ ಜಮೀನನಲ್ಲಿ ಒಂಟಿ ಮನೆಯಿಂದ ಬೇರೆಡೆ ಎಲ್ಲಿಯೂ ಸಂಚಾರಕ್ಕೆ ಅವಕಾಶವಿಲ್ಲ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತ ಬದುಕು ಸಾಗಿಸುತ್ತಿದ್ದೇವೆ’ ಎಂದು ನೊಂದು ನುಡಿದರು.

ಈ ವೇಳೆ ಮಾತನಾಡಿದ ಆನಂದ್ ಪತ್ನಿ ಪ್ರಭಾವತಿ, ‘ರಸ್ತೆ ಸಮಸ್ಯೆ ಬಗೆಹರಿಸುವಂತೆ ಕೆಲ ಸಂಘಟನೆಗಾರರು ಅಧಿಕಾರಿಗಳಿಗೆ ಒತ್ತಡ ಹಾಕಿದ ನಂತರ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಜೂ.೨೪ ರಂದು ಆಗಮಿಸಿದ್ದರು. ವಾಸ್ತವ ತಿಳಿದು ಮಂಜೂರುದಾರರಿಗೆ ಮನೆಗೆ ಹೋಗಲು ರಸ್ತೆ ಬಿಡಬೇಕು ಎಂದು ಅಧಿಕಾರಿಗಳು ಸ್ಥಳೀಯ ಜಮೀನುದಾರರಿಗೆ ಹೇಳಿದಾಗ ಅವರು ಒಪ್ಪಲಿಲ್ಲ. ಇದರಿಂದ ಹತಾಶರಾಗಿದ್ದ ಆನಂದ್ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಸ್ಥಳದಲ್ಲೆ ಇದ್ದ ಪೋಲಿಸ್ ಅಧಿಕಾರಿ ಒಬ್ಬರ ಸಮಯಪ್ರಜ್ಞೆಯಿಂದ ಬಾಗಿಲು ಒಡೆದು ಕಾಪಾಡಿದರು’ ಎಂದರು.

Share this article