ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ತೆಂಗು ಬೆಳೆಗೆ ಉತ್ತಮ ಬೆಲೆ ಇದ್ದು ರೋಗಬಾಧೆಯಿಂದ ತೆಂಗು ಬೆಳೆ ಹಾಳಾಗಿದೆ. ತೆಂಗು ಬೆಳೆಗಾರರನ್ನು ಉಳಿಸುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಅನುದಾನ ನೀಡುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದರು.ಹೋಬಳಿಯ ಬನವಾಸೆ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಎಫ್ಎನ್ಎಸ್ ಆಹಾರ ಮತ್ತು ಪೌಷ್ಟಿಕಾಂಶ ಯೋಜನೆ ಅಡಿಯಲ್ಲಿ ಬಿತ್ತನೆ ರಾಗಿ ಮತ್ತು ಸಾವಯವ ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಉಚಿತವಾಗಿ ರೈತರಿಗೆ ವಿತರಿಸಿ ಮಾತನಾಡಿದರು.ಎಫ್ಎನ್ಎಸ್ ಯೋಜನೆ ಅಡಿಯಲ್ಲಿ ಒಬ್ಬ ರೈತರಿಗೆ 2,311 ರು.ಗಳ ವೆಚ್ಚದಲ್ಲಿ ರಾಗಿ ಮತ್ತು ಸಾವಯವ ಗೊಬ್ಬರ ಬೇವಿನ ಎಣ್ಣೆ ಕೀಟನಾಶಕ ಸೇರದಂತೆ ಇನ್ನಿತರ ಕೃಷಿ ಪರಿಕರಗಳನ್ನು ಗ್ರಾಮದ lಸುಮಾರು 100 ರೈತರಿಗೆ 2.30 ಲಕ್ಷ ವೆಚ್ಚದಲ್ಲಿ ಗ್ರಾಮದ ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಬಳಸಿಕೊಂಡು ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯುವಂತೆ ಸಲಹೆ ನೀಡಿದರು .ಒಂದು ಎಕರೆಗೆ ರಾಗಿಗೆ ವಿಮಾ ಇಲಾಖೆ 344 ರು.ಗಳನ್ನು ನಿಗದಿ ಮಾಡಿದ್ದು ಹವಮಾನ ವೈಪರಿತದಿಂದ ಬೆಳೆ ಹಾಳಾದರೆ ಪ್ರತಿ ಎಕರೆಗೆ 17,000 ಸಹಾಯಧನ ಸಿಗಲಿದೆ ಎಂದರು.ಈಗಾಗಲೇ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಹೋಬಳಿ ವ್ಯಾಪ್ತಿಯ ರಿಯಾಯಿತಿ ದರದಲ್ಲಿ ರೈತರಿಗೆ ಸ್ಪಿಂಕ್ಲರ್ ಸೆಟ್ ಹಾಗೂ ಸಹಾಯಧನದಲ್ಲಿ ಪಿವಿಸಿ ಪೈಪ್ ನೀಡಲಾಗಿದೆ ಮುಂಬರುವ ದಿನಗಳಲ್ಲೂ ಬೇಡಿಕೆಗೆ ಅನುಗುಣವಾಗಿ ರೈತರಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.ತೆಂಗು ನುಸಿ ಹಾಗೂ ರೋಗದ ಬಗ್ಗೆ ಹೆಚ್ಚು ಜಾಗೃತಿ ಇರಲಿ ತಾಲೂಕಿನಲ್ಲಿ ತೆಂಗು ಬೆಳೆಗೆ ನುಸಿ ಗರಿ ಚುಕ್ಕೆ ರೋಗ ಕೊಳೆರೋಗ ಸೇರಿದಂತೆ ಅನೇಕ ಕಾಯಿಲೆಗಳು ಸಾವಿರಾರು ಹೆಕ್ಟರ್ ಪ್ರದೇಶದ ತೆಂಗಿನ ಮರಗಳಿಗೆ ಕಾಯಿಲೆ ಹರಡಿದ್ದು ಇದರಿಂದ ತಾಲೂಕಿನ ರೈತರು ಸಂಕಷ್ಟಕ್ಕೀಡಾಗಿದ್ದು, ಈ ಸಮಸ್ಯೆಯ ಬಗ್ಗೆ ಆಗಸ್ಟ್ ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿನ ತೆಂಗಿನ ಬೆಳೆಗಾರರ ಪರವಾಗಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕೆ. ಮಾತನಾಡಿ, ತಾಲೂಕಿನಲ್ಲಿ ಮುಸುಕಿನ ಜೋಳಕ್ಕೆ ಬಿಳಿ ಚುಕ್ಕೆ ರೋಗ ಹರಡಿದ್ದು ರೋಗದಿಂದ ಬೆಳೆಯನ್ನು ಉಳಿಸುವ ದೃಷ್ಟಿಯಿಂದ ಅಜಾಕ್ಸಿಸ್ಟ್ರೋಬಿನ್, ಮೆಟೆಲಾಕ್ಸಿಲ್ ಮತ್ತು ಮಾನ್ಕೋಜೆಬ್ ಔಷಧಿಯನ್ನು ಬೆಳೆಗಳಿಗೆ ಸಿಂಪಡಿಸುವಂತೆ ಸಲಹೆ ನೀಡಿದರು. ರಾಜ್ಯ ಸರ್ಕಾರ ಕೃಷಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳುವ ಮೂಲಕ ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆದು ಲಾಭಗಳಿಸುವಂತೆ ಸಲಹೆ ನೀಡಿದರು.ಹೋಬಳಿ ಕೃಷಿ ಅಧಿಕಾರಿ ರಕ್ಷಿತ್ ಎಚ್ಎಸ್ ಮಾತನಾಡಿ, ರಾಗಿ ಬೆಳೆಗೆ ಬೆಳೆ ವಿಮೆ ಮಾಡಿಸಲು ಆಗಸ್ಟ್ 15 ಕೊನೆಯ ದಿನಾಂಕವಾಗಿರುವುದರಿಂದ ರೈತರು ತಡ ಮಾಡದೆ ನೋಂದಣಿಗೆ ಮುಂದಾಗಬೇಕು. ನೋಂದಣಿ ಮಾಡಿಸಿಕೊಂಡ ನಂತರ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಂಡರೆ ಮಾತ್ರ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಬಹುದು. ಶಾಸಕರ ಅಧ್ಯಕ್ಷತೆಯಲ್ಲಿ 2025 26ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಹೋಬಳಿಯ ಬನವಾಸೆ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಗ್ರಾಮದ ಪ್ರತಿಯೊಬ್ಬ ರೈತರಿಗೂ 2,311 ರು.ಗಳ ವೆಚ್ಚದಲ್ಲಿ ಬಿತ್ತನೆ ಬೀಜ ಕೃಷಿ ಪರಿಕರಗಳನ್ನು ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕೃಷಿ ಕಿಟ್‌ನಲ್ಲಿ 250 ಮಿಲಿ ಇಮಿಡಕ್ಲೋಪ್ರಿಡ್ 100 ಮಿಲಿ ಥಾಯೋಮೆಥಕ್ಯಾಮ್ + ಲ್ಯಾಂಬ್ದ ಸೈಹಾಲೋತ್ರೀನ್ 50 ಕೆಜಿ ಜಿಪ್ಸಂ 5 ಕೆಜಿ ರಾಗಿಯನ್ನು ಕೊಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ವಿಎ ಮಂಜುನಾಥ್, ಉದ್ಯಮಿ ಹಾಗೂ ಜೆಡಿಎಸ್ ಯುವ ಮುಖಂಡ ಭುವನಹಳ್ಳಿ ಯೋಗೇಶ್, ಮುಖಂಡರಾದ ತಮ್ಮಯಣ್ಣ, ಬಾಗೂರು ಕೃಷಿ ಪತ್ತಿನ ನಿರ್ದೇಶಕ ಸುರೇಶ್, ಸೇರಿದಂತೆ ರೈತರು ಹಾಜರಿದ್ದರು.