ತುಂಗಭದ್ರಾ ನದಿ ಶುದ್ಧತೆಗೆ ಸರ್ಕಾರ ಆದ್ಯತೆ ನೀಡಲಿ: ಶಾಸಕ ಜೆ.ಎನ್‌. ಗಣೇಶ್

KannadaprabhaNewsNetwork |  
Published : Dec 19, 2025, 02:45 AM IST
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಜೆ.ಎನ್.ಗಣೇಶ ಮಾತನಾಡಿದರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯಗಳ ಗೇಟ್ ನಿರ್ವಹಣೆ ವಿಷಯದಲ್ಲಿ ವಿಪಕ್ಷಗಳು ಸಹಕಾರ ನೀಡಬೇಕು ಎಂದು ಶಾಸಕ ಜೆ.ಎನ್‌. ಗಣೇಶ್ ಒತ್ತಾಯಿಸಿದರು..

ಕಂಪ್ಲಿ: ಕಾರ್ಖಾನೆಗಳ ತ್ಯಾಜ್ಯ, ಕೃಷಿಯಿಂದ ಹೊರಹೊಮ್ಮುವ ಮಲೀನ ನೀರು, ಚರಂಡಿಗಳ ಹರಿವು ಹಾಗೂ ರಾಸಾಯನಿಕ ತ್ಯಾಜ್ಯಗಳಿಂದ ತುಂಗಭದ್ರಾ ನದಿ ದಿನೇದಿನೇ ಕಲುಷಿತಗೊಳ್ಳುತ್ತಿದ್ದು, ಇದನ್ನು ತಡೆಯಲು ಮೂಲದಲ್ಲಿಯೇ ನೀರನ್ನು ಸಂಸ್ಕರಿಸಿ ನಂತರ ನದಿಗೆ ಸೇರಿಸುವ ಸಮಗ್ರ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದು ಶಾಸಕ ಜೆ.ಎನ್‌. ಗಣೇಶ್ ಒತ್ತಾಯಿಸಿದರು.

ಮಂಗಳವಾರ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು, ನದಿಯ ಶುದ್ಧತೆ ಕಾಪಾಡುವುದು ರಾಜ್ಯದ ಪ್ರಮುಖ ಜವಾಬ್ದಾರಿಯಾಗಿದೆ. ಕೈಗಾರಿಕೆಗಳು ಹಾಗೂ ನಗರ ಪ್ರದೇಶಗಳಿಂದ ಹೊರಹೊಮ್ಮುವ ಮಲೀನ ನೀರು ನೇರವಾಗಿ ನದಿಗೆ ಸೇರುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಇದನ್ನು ತಡೆಯಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ತುಂಗಭದ್ರಾ ಜಲಾಶಯಗಳ ಗೇಟ್ ನಿರ್ವಹಣೆ ವಿಷಯದಲ್ಲಿ ವಿಪಕ್ಷಗಳು ಸಹಕಾರ ನೀಡಬೇಕು. ರಾಜ್ಯದ ಎಂಜಿನಿಯರ್‌ಗಳು ಜಲಾಶಯಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಸಹಾಯಕರಾಗಿದ್ದಾರೆ. ನೀರಿನ ನಿರ್ವಹಣೆಯಲ್ಲಿ ಸ್ಪಷ್ಟ ನೀತಿ ಮತ್ತು ತಾಂತ್ರಿಕ ಪರಿಣಿತಿ ಅಗತ್ಯವಿದೆ ಎಂದರು.

ರೈತರ ನೀರಿನ ಸ್ವಾವಲಂಬನೆಗಾಗಿ ನವಲಿ ಸಮನಾಂತರ ಜಲಾಶಯ ನಿರ್ಮಿಸಬೇಕು. ಆಲಮಟ್ಟಿ ಜಲಾಶಯದಿಂದ ನೆಲಗಾಲುವೆಗಳ ಮೂಲಕ ನೀರು ತರಬೇಕು. ವಿತರಣಾ ನಾಲೆಗಳಿಗೆ ಒದಗಿಸುವ ನೀರಿನ ಇಂಡೆಂಟ್‌ನ್ನು ಪರಿಷ್ಕರಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹೊಲಕ್ಕೊಂದು ಕೆರೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ನೀರಿನ ಸೌಲಭ್ಯ ಒದಗಿಸಬೇಕು. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಂಪ್ಲಿ ಅಥವಾ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕೆಂದು ಸಲಹೆ ನೀಡಿದ ಅವರು, ಇದರಿಂದ ರೈತರಿಗೆ ಬೆಳೆ ಮಾರಾಟಕ್ಕೆ ಅನುಕೂಲವಾಗುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗವೂ ಸಿಗಲಿದೆ ಎಂದರು.

ಜಿಲ್ಲೆಯ ಬೃಹತ್ ಕೈಗಾರಿಕೆಗಳಲ್ಲಿ ಸ್ಥಳೀಯ ಯುವಕರಿಗೆ ಸಮರ್ಪಕ ಉದ್ಯೋಗಾವಕಾಶ ದೊರೆಯುತ್ತಿಲ್ಲ ಎಂದು ಆರೋಪಿಸಿದ ಶಾಸಕ ಗಣೇಶ್, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು