ಎಸ್ಐಆರ್ ಗೆ ಸರ್ಕಾರ ಅಗತ್ಯ ದಾಖಲೆ ಒದಗಿಸಲಿ: ದುಂಡುಮೇಜಿನ ಸಭೇಲಿ ಸಿಪಿಐ ಆಗ್ರಹ

KannadaprabhaNewsNetwork |  
Published : Jun 08, 2026, 01:15 AM IST
೭ಕೆಎಲ್‌ಆರ್-೧ಕೋಲಾರದ ಪತ್ರಕರ್ತರ ಭವನದಲ್ಲಿ ಎಸ್‌ಐಆರ್ ಸಾಧಕ ಬಾಧಕಗಳ ಕುರಿತ ದುಂಡು ಮೇಜಿನ ಸಭೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ ಸರ್ವ ಪಕ್ಷಗಳ ಸಹಕಾರ ಹಾಗೂ ಸಾರ್ವಜನಿಕರ ಹಿತಾಸಕ್ತಿಯಿಂದ ಹೋರಾಟ ರೂಪಿಸುವ ಮೊದಲ ಹಂತವಾಗಿ ಜೂ.೮ ರಂದು ಸೋಮವಾರ ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆಯನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯು ಪಶ್ಚಿಮ ಬಂಗಾಳದಂತೆ ಆಗದಿರಲು ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರತಿಯೊಬ್ಬರಿಗೂ ಪರಿಷ್ಕರಣೆಗೆ ಅಗತ್ಯವಿರುವ ದಾಖಲಾತಿಗಳನ್ನು ತುರ್ತಾಗಿ ಒದಗಿಸಲು ಮುಂದಾಗಬೇಕೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಎಸ್‌ಐಆರ್ ಸಾಧಕ- ಬಾಧಕಗಳ ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಮಾಡಲು ಪರಿಷ್ಕರಣೆಗೆ ಅಗತ್ಯವಿರುವ ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಪ್ರಮಾಣ ಪತ್ರ ದಾಖಲೆಗಳನ್ನು ಚುನಾವಣಾ ಮಾದರಿಯಲ್ಲಿ ಅರ್ಜಿ ಸಲ್ಲಿಸಿದ ದಿನವೇ ಜನತೆಗೆ ಸಿಗುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಇಲ್ಲವಾದಲ್ಲಿ ಪಶ್ಚಿಮ ಬಂಗಾಳದಂತೆ ೯೧ ಲಕ್ಷಕ್ಕೂ ಅಧಿಕ ಮತದಾದರು ಪಟ್ಟಿಯಿಂದ ಹೊರ ಹೋಗುವ ಸಾಧ್ಯತೆ ಇದೆ, ರಾಜ್ಯದಲ್ಲಿ ಈವರೆಗೂ ನಡೆದಿರುವ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಶೇ.೧೦ರಷ್ಟು ಹೆಸರುಗಳು ಹೊಂದಾಣಿಕೆಯಾಗಿಲ್ಲ ಎನ್ನುವುದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಯಾರದ್ದೂ ವಿರೋಧ ಇಲ್ಲ, ಆದರೆ, ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ತಾರ್ಕಿಕ ವ್ಯತ್ಯಾಸಗಳನ್ನು ಆಧಾರವಾಗಿಟ್ಟುಕೊಂಡು ೯೧ ಲಕ್ಷ ಮಂದಿಯನ್ನು ಹೊರಗಿಡಲಾಗಿದೆ, ಈ ಪೈಕಿ ವಲಸಿಗರು ಎಷ್ಟು ಮಂದಿ ಎಂಬ ಅಂಕಿ ಅಂಶವನ್ನು ಬಹಿರಂಗಪಡಿಸುತ್ತಿಲ್ಲ, ಈಗ ಕರ್ನಾಟಕದಲ್ಲಿಯೂ ಇಂಥದ್ದೇ ಪ್ರಕ್ರಿಯೆಯಲ್ಲಿ ಪರಿಷ್ಕರಣೆ ನಡೆಯುತ್ತಿರುವುದನ್ನು ಸರ್ಕಾರ ಮತ್ತು ಜನತೆ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.

ಮ್ಯಾಪಿಂಗ್ ಹಾಗೂ ಮ್ಯಾಚಿಂಗ್ ಆಗಿರುವ ಹೆಸರುಗಳ ಪೈಕಿಯು ತಂದೆ- ತಾಯಿ ಹೆಸರು ಇನ್ಷಿಯಲ್ ಹೊಂದಾಣಿಕೆಯಾಗದಿರುವುದು, ೪೫ ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತೆ ಅರ್ಜಿ ಸಲ್ಲಿಸಿದರೆ ಪರಿಗಣಿಸದಿರುವುದು, ಆರನೇ ಮಗ, ಮಗಳಾಗಿದ್ದರೆ ಪರಿಗಣನೆಗೆ ಬಾರದಿರುವುದು, ಪೋಷಕರಿಗೂ, ಮಕ್ಕಳ ನಡುವೆ ೧೫ ವರ್ಷಕ್ಕಿಂತ ಕಡಿಮೆ ಅಂತರ ಇರುವುದನ್ನು ತಾರ್ಕಿಕ ವ್ಯತ್ಯಾಸಗಳೆಂದು ಗುರುತಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಕೇಂದ್ರ ಬಿಜೆಪಿ ಸರ್ಕಾರವು ಹಾಗೂ ಚುನಾವಣಾ ಆಯೋಗವು ನಿರ್ದಿಷ್ಟ ಸಮುದಾಯ ಹಾಗೂ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಿಂದಾಗಿ ದೇಶಾದ್ಯಂತ ಸುಮಾರು ೧೦ ಕೋಟಿ ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಎಚ್ಚರಿಸಿದ ಅವರು, ಈ ಕುರಿತು ಜನತೆ ಧ್ವನಿ ಎತ್ತಿ ಹೋರಾಟ ನಡೆಸಬೇಕಾಗಿದೆ ಎಂದರು.

ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಲೋಪದೋಷಗಳ ವಿರುದ್ಧ ಪ್ರತಿಯೊಬ್ಬರೂ ಸಹಕರಿಸಿ ಕೈಜೋಡಿಸಿ ಧ್ವನಿ ಎತ್ತಿ ಹೋರಾಟ ರೂಪಿಸಬೇಕು, ಇಲ್ಲವಾದಲ್ಲಿ ವ್ಯಕ್ತಿಗತ ಅಸ್ತಿತ್ವಗಳ ಜೊತೆಗೆ ದೇಶದ ಮೂಲ ಸಂವಿಧಾನದ ಆಶಯವು ಅಲುಗಾಡಲಿದೆಯೆಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ ಸರ್ವ ಪಕ್ಷಗಳ ಸಹಕಾರ ಹಾಗೂ ಸಾರ್ವಜನಿಕರ ಹಿತಾಸಕ್ತಿಯಿಂದ ಹೋರಾಟ ರೂಪಿಸುವ ಮೊದಲ ಹಂತವಾಗಿ ಜೂ.೮ ರಂದು ಸೋಮವಾರ ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆಯನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ಮುನಿಸ್ವಾಮಿ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಯಾವುದೇ ಅರ್ಹ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಾರದು, ಯಾರ ಹಕ್ಕುಗಳು ಮೊಟಕುಗೊಳ್ಳಬಾರದು ಎಂಬಂತೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿ ಎಂದರು.

ಅಲ್ಪಸಂಖ್ಯಾತ ಮುಖಂಡ ಅನ್ವರ್ ಪಾಷಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಟಿ.ವಿಜಯಕುಮಾರ್, ಹಾರೋಹಳ್ಳಿ ರವಿ, ಅಬ್ಬಣಿ ಶಿವಪ್ಪ, ಪಿ.ಶ್ರೀನಿವಾಸ್, ಎನ್.ಎನ್.ಶ್ರೀರಾಮ್, ಪಾತಕೋಟೆ ನವೀನ್ ಕುಮಾರ್, ವೀರಭದ್ರ, ಅಂದ್ರಹಳ್ಳಿ ಗಮನ ಮಹಿಳಾ ಸಂಘದ ಶಾಂತಮ್ಮ ಇದ್ದರು. ವಿಜಯಕೃಷ್ಣ ಸ್ವಾಗತಿಸಿ, ತಂಗರಾಜು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಕ್ ಉಗ್ರರ ಜತೆ ಮತ್ತಷ್ಟು ಜನಕ್ಕೆ ನಂಟು ಸಾಧ್ಯತೆ!: ರಾಜನಹಳ್ಳಿ ಶಿವಕುಮಾರ ಶಂಕೆ
ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಸಲೀಂಗೆ ಸಚಿವ ಸ್ಥಾನಕ್ಕೆ ಒತ್ತಾಯ