ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ರಂಗಭೂಮಿ ಕಲಾವಿದರನ್ನು ಗುರುತಿಸಿ ಅವರ ಕಲೆಯನ್ನು ಪ್ರೋತ್ಸಾಹಿಸುವ ಜೊತೆಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಒತ್ತಾಯಿಸಿದರು.ನಗರದ ರೋಟರಿ ಭವನದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರು, ಚೇತನ ಕಲಾವಾಹಿನಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ರಂಗಭೂಮಿ ಕಲಾವಿದರರಿಂದ ರಂಗಭೂಮಿ ಕಲೆ ಜೀವಂತವಾಗಿ ಉಳಿದಿದೆ. ಚಿತ್ರರಂಗದಲ್ಲಿ ಕೆಲವರಿಗೆ ಅವಕಾಶ ಸಿಗುತ್ತದೆ. ಆದರೆ ರಂಗಭೂಮಿಯಲ್ಲಿ ಎಲ್ಲರಿಗೂ ಸದಾವಕಾಶವಿದ್ದು, ರಂಗಭೂಮಿ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ರಂಗಭೂಮಿಯಲ್ಲಿ ನೈಜ ಕಲಾವಿದರ ಅನಾವರಣವಾಗುತ್ತದೆ.
ಏಕಕಾಲದಲ್ಲಿ ಎಲ್ಲ ಕಲೆಯನ್ನು ಕರಗತ ಮಾಡಿಕೊಂಡು ಪ್ರದರ್ಶನ ಮಾಡುವ ನೈಪುಣ್ಯತೆಯನ್ನು ಕಲಾವಿದ ಹೊಂದಿರುತ್ತಾನೆ. ಆದರೆ, ಚಿತ್ರರಂಗದಲ್ಲಿ ನಟನೆ ಒಬ್ಬರು ಮಾಡಿದರೆ, ಸಂಭಾಷಣೆ ಮತ್ತೊಬ್ಬರದು, ಹಾಡುವವರೇ ಒಬ್ಬರು, ಇದೆಲ್ಲವನ್ನು ಸಂಕಲನ ಮಾಡುವವರು ಒಬ್ಬರಿರುತ್ತಾರೆ. ಆದರೆ, ರಂಗಭೂಮಿ ಕಲೆಯಲ್ಲಿ ಎಲ್ಲವನ್ನು ಒಬ್ಬನೇ ಮಾಡಬೇಕಾಗುತ್ತದೆ. ಇವರು ನಿಜವಾದ ಕಲೆ ಪೋಷಣೆ ಮತ್ತು ರಂಗ ಕಲಾವಿದರಾಗುತ್ತಾರೆ. ನೈಜತೆ ಪ್ರದರ್ಶನ ಮಾಡುತ್ತಾರೆ. ಹಿಗಾಗಿ ನಿರಂತರ ಜೀವಿತವಾಗಿರುವವರಿಗೂ ಕಲೆ ಬೆಳೆಯುತ್ತಾ ಹೋಗುತ್ತದೆ ಎಂದರು.ಹೀಗಾಗಿ ಇಂಥ ಗ್ರಾಮೀಣ ಭಾಗದಲ್ಲಿರುವ ರಂಗಭೂಮಿ ಕಲಾವಿದರನ್ನು ರಾಜ್ಯ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದರೆ, ಇನ್ನು ಹೆಚ್ಚಿನ ರೀತಿಯಲ್ಲಿ ರಂಗಭೂಮಿ ಕಲೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು. ಅಧ್ಯಕ್ಷ ತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ವಿನಯ್ ಮಾತನಾಡಿ, ಸಾಹಿತ್ಯ, ಸಂಗೀತ, ನಟನೆ. ನಾಟಕ ಪರಿಪೂರ್ಣ ಕಲೆ ಮನುಷ್ಯನಿಗೆ ಸಂಸ್ಕೃತಿ, ಅಭಿರುಚಿ ಕಲಿಸುತ್ತದೆ. ರಂಗಭೂಮಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ. ರಂಗಭೂಮಿ ಚಿರಾಯುವಾಗಲಿ ಎಂದು ಆಶಿಸಿದರು,
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು ಮಾತನಾಡಿದರು. ಡ್ರಾಮಾ ಮಾಸ್ಟರ್ ಮಂಗಲ ಶಿವಣ್ಣ, ನಂಜೇದೇವನಪುರ ಗ್ರಾಪಂ ಅಧ್ಯಕ್ಷ, ಕಲಾವಿದ ಪಿ.ಶೇಖರಪ್ಪ, ದಡದಹಳ್ಳಿ ಸೂರ್ಯಮೂರ್ತಿ, ಶಿವಪುರ ಶಿವಸ್ವಾಮಿ ಅವರನ್ನು ಗಣ್ಯರು ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ಎಂ.ಎನ್.ಮಹದೇವ್, ಕಲಾವಿದರಾದ ಜನ್ನೂರು ರೇವಣ್ಣ, ಎನ್.ಆರ್. ಪುರುಷೋತ್ತಮ್. ಎಂ. ಕೆ.ಎಂ.ಬಸವರಾಜು, ಪಿ.ಕುಮಾರ್, ಎಂ.ಎನ್.ಸಂಪತ್ ಕುಮಾರ್, ಎನ್.ಮಹೇಂದ್ರ, ಆರ್.ಮಲ್ಲಿಕಾರ್ಜುನ ಸ್ವಾಮಿ, ತೊರವಳ್ಳಿ ಕುಮಾರ್, ರಿದಮ್ ರಾಮಣ್ಣ, ಪಿ.ನಿಂಗಯ್ಯ, ಗೋವಿಂದರಾಜು, ಅಮ್ಮನಪುರ ಸುರೇಶ್, ಸುರೇಂದ್ರ, ಗೋವಿಂದರಾಜು ಅರಳಿಪುರ ಇದ್ದರು.