ಗಂಗಾವತಿ: ಅಂಜನಾದ್ರಿಯಲ್ಲಿ ಡಿ. 2 ಮತ್ತು 3ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಭಕ್ತರಿಗೆ ಸೂಕ್ತ ವ್ಯವಸ್ಥೆ ಹಾಗೂ ಸರ್ಕಾರದಿಂದಲೇ ಹೋಮ-ಹವನಗಳನ್ನು ಮಾಡಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರಸಭೆಯಲ್ಲಿ ಹನುಮಮಾಲೆ ವಿಸರ್ಜನೆ ಅಂಗವಾಗಿ ಜಿಲ್ಲಾಡಳಿತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ 20 ಸಮಿತಿಗಳನ್ನು ರಚಿಸಲಾಗಿದೆ. ಪ್ರಮುಖವಾಗಿ ಆಹಾರ ಸಮಿತಿ, ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಸೇರಿದಂತೆ 13 ಸಮಿತಿಗಳನ್ನು ರಚನೆ ಮಾಡಿ ಅವರಿಗೆ ಜವಾಬ್ದಾರಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಭಕ್ತರಿಗೆ ಸ್ನಾನ, ಪ್ರಸಾದದ ವ್ಯವಸ್ಥೆ ಮಾಡಬೇಕು. ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಭಕ್ತರಿಗೆ ವಾಹನ ನಿಲುಗಡೆಗೆ ಸೂಕ್ತ ಸ್ಥಳ ನಿಗದಿ ಮಾಡಬೇಕು. 4 ಕಡೆ ಚೆಕ್‌ಪೋಸ್ಟ್ ಸ್ಥಾಪಿಸಿ, ಸಿಸಿ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಬೇಕು ಎಂದರು.ವಿದ್ಯುತ್ ದೀಪಾಲಂಕಾರ
ದೇಗುಲ ಸೇರಿದಂತೆ ಬೆಟ್ಟವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಇದು ರಾಜ್ಯಕ್ಕೆ ಮಾದರಿಯಾಗಬೇಕು. ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಾಣಿಗಳು ಬರದಂತೆ ಅರಣ್ಯ ಇಲಾಖೆಯವರು ಕಟ್ಟೆಚ್ಚರವಹಿಸಬೇಕು ಎಂದರು.ಸರ್ಕಾರದಿಂದಲೇ ವ್ಯವಸ್ಥೆ
ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದಲ್ಲಿ ಸರ್ಕಾರದಿಂದ ಹೋಮ-ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ವೇಳೆ ಬೇರೆ ಸಂಘ-ಸಂಸ್ಥೆಗಳು ಹೋಮ-ಹವನ ಮಾಡುವುದು ಬೇಡ. ಸರ್ಕಾರವೇ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದರು.ಗೊಂದಲ ಸೃಷ್ಟಿಸುವವರ ಮೇಲೆ ಕ್ರಮ
ಅಂಜನಾದ್ರಿ ಸೇರಿದಂತೆ ಹನುಮಮಾಲಾ ವಿಸರ್ಜನೆ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಗೊಂದಲ ಎಬ್ಬಿಸುತ್ತಾರೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಿ ಎಂದು ಸಚಿವರು ಎಸ್‌ಪಿಗೆ ಸೂಚಿಸಿದರು.ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಅಂಜನಾದ್ರಿಯಲ್ಲಿ ಬರುವ ಭಕ್ತರಿಗೆ ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆ ನಿರ್ವಹಿಸಬೇಕು ಎಂದರು. ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಹನುಮಾಲೆ ವಿಸರ್ಜನೆ ಕುರಿತು ವಿವರಿಸಿದರು. ಸಂಸದ ರಾಜಶೇಖರ್ ಹಿಟ್ನಾಳ್, ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಸಹಾಯಕ ಆಯುಕ್ತ ಮಹೇಶ ಮಾಲಿಗಿತ್ತಿ, ನಗರಸಭೆ ಅಧ್ಯಕ್ಷ ಹೀರಾಸಿಂಗ್, ದೊಡ್ಡಪ್ಪ ದೇಸಾಯಿ ಇದ್ದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.