ಗುಂಪು ಮನೆ ಫಲಾನುಭವಿಗಳಿಗೆ ಸರ್ಕಾರದಿಂದ 4 ಲಕ್ಷ ಹೆಚ್ಚುವರಿ ಹಣ

KannadaprabhaNewsNetwork |  
Published : Jun 14, 2025, 03:02 AM IST
1 | Kannada Prabha

ಸಾರಾಂಶ

ಮೈಸೂರು: ಗುಂಪು ಮನೆಗಳ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು 4 ಲಕ್ಷ ರೂ. ಹೆಚ್ಚುವರಿಯಾಗಿ ನೀಡಲು ಉದ್ದೇಶಿಸಿದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ತಿಳಿಸಿದರು.

ಮೈಸೂರು: ಗುಂಪು ಮನೆಗಳ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು 4 ಲಕ್ಷ ರೂ. ಹೆಚ್ಚುವರಿಯಾಗಿ ನೀಡಲು ಉದ್ದೇಶಿಸಿದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯು ಕೆ.ಆರ್‌. ಕ್ಷೇತ್ರದ ಲಲಿತಾದ್ರಿಪುರದಲ್ಲಿ ನಿರ್ಮಿಸುತ್ತಿರುವ ಗುಂಪು ಮನೆಗಳ ಫಲಾನುಭವಿಗಳಿಗಾಗಿ ಲೀಡ್‌ ಬ್ಯಾಂಕ್‌ ಸಹಯೋಗದಲ್ಲಿ ಶುಕ್ರವಾರ ಪುರಭವನದಲ್ಲಿ ಆಯೋಜಿಸಿದ್ದ ಸಾಲ ಮೇಳವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸರ್ಕಾರದಿಂದ 1440 ಮನೆ ಮಂಜೂರಾಗಿದ್ದು, ಅದರಲ್ಲಿ ಕೆ.ಆರ್‌. ಕ್ಷೇತ್ರದ 940 ಫಲಾನುಭವಿಗಳನ್ನು ಗುರುತಿಸಲಾಗಿದೆ. ವರುಣ ಕ್ಷೇತ್ರಕ್ಕೆ 500 ಮನೆ ಮಂಜೂರಾಗಿದು, ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಅಂತಿಮವಾಗಿಲ್ಲ. ಹೀಗಾಗಿ, ಕೆ.ಆರ್. ಕ್ಷೇತ್ರದವರಿಗೆ ಸಾಲ ಮೇಳ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಯೋಜನೆ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದಾಗ ಜಮೀರ್‌ ಅಹಮದ್‌ ಅವರು ರಾಜ್ಯ ಸರ್ಕಾರದಿಂದ 4 ಲಕ್ಷ ರೂ. ಹೆಚ್ಚುವರಿಯಾಗಿ ಫಲಾನುಭವಿಗಳಿಗೆ ನೀಡಲು ರೂಪುರೇಷೆ ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಫಲಾನುಭವಿಗಳು ಉಳಿದ ಮೊತ್ತಕ್ಕೆ ಸಾಲಕ್ಕೆ ಅರ್ಜಿ ಸಲ್ಲಿಸುವಂತೆ ಅವರು ತಿಳಿಸಿದರು.

ಈ ಮನೆಗೆ ಸುಮಾರು 13 ಲಕ್ಷ ರೂ. ಖರ್ಚಾಗಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ ಹೊರತಾಗಿಯೂ ಫಲಾನುಭವಿಗಳು ಕನಿಷ್ಠ 9.5 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಸರ್ಕಾರದ ಹೆಚ್ಚುವರಿ ಧನಸಹಾಯವು ಜನಸಾಮಾನ್ಯರಿಗೆ ಸಹಕಾರಿಯಾಗಲಿದೆ. 2026ರ ಡಿಸೆಂಬರ್‌ ಒಳಗಾಗಿ ಎಲ್ಲರೂ ಹೊಸ ಮನೆಯ ಗೃಹಪ್ರವೇಶ ಮಾಡುವಂತಾಗಲಿ ಎಂದು ಅವರು ಆಶಿಸಿದರು.

ನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸೀಫ್, ಹೆಚ್ಚುವರಿ ಆಯುಕ್ತೆ ಕುಸುಮಾಕುಮಾರಿ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕೃಷ್ಣಮೂರ್ತಿ, ಕೆ.ಆರ್. ಕ್ಷೇತ್ರದ ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಫಾರೂಕ್, ಸೋಮಣ್ಣ, ನೀಲಾ ಪಂಪಾವತಿ ಮೊದಲಾದವರು ಇದ್ದರು.

----

ಕೋಟ್...

13 ಎಕರೆ 40 ಕುಂಟೆ ಜಾಗದಲ್ಲಿ 202 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಬಳ್ಳಾರಿ ಹಾಗೂ ಮೈಸೂರಿನಲ್ಲಿ ಪ್ರಥಮ ಬಾರಿಗೆ ಈ ಯೋಜನೆ ಜಾರಿಯಾಗಿದೆ. ಫಲಾನುಭವಿಗಳ ಸಹಾಯಕ್ಕಾಗಿ 15 ಬ್ಯಾಂಕುಗಳು ಬಂದಿದ್ದು, ಫಲಾನುಭವಿಗಳ ಕಡೆಯಿಂದ ಆಗಬೇಕಾದ ಕೆಲಸಗಳು ವೇಗವಾಗಿ ಮುಗಿದರೆ ಮುಂದಿನ ವರ್ಷ ಹಕ್ಕುಪತ್ರ ವಿತರಿಸಲಾಗುವುದು.

- ಶೇಕ್ ತನ್ವೀರ್ ಆಸೀಫ್, ಆಯುಕ್ತ, ಮೈಸೂರು ಮಹಾನಗರ ಪಾಲಿಕೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ