ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ವ್ಯವಸ್ಥಾಪಕರಾಗಿದ್ದ ವಿ.ವಿನೋದ್ ಅವರು ನೇಮಕಾತಿ ವೇಳೆ ಸಲ್ಲಿಸಿದ್ದ ಎಂ.ಟೆಕ್ ಪದವಿಯ ಪ್ರಮಾಣಪತ್ರ ನಕಲಿ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದ್ದು, ಅವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿರುವ ಯೋಜನಾ ವ್ಯವಸ್ಥಾಪಕರ ನೇಮಕ ಸಂಬಂಧದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ವಿನೋದ್ ಅವರು 2022ರಲ್ಲಿ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ತಾವು 2016ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿರುವುದಾಗಿ ಅಂಕಪಟ್ಟಿ ಸಲ್ಲಿಸಿದ್ದರು. ಈ ಮಧ್ಯೆ, ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಇವರ ಪದವಿ ನಕಲಿ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಪ್ರಮಾಣಪತ್ರದ ನೈಜತೆ ಪರಿಶೀಲನೆಗೊಳಪಡಿಸಿದಾಗ, ವಿನೋದ್ ಅವರು ಎಂ.ಟೆಕ್ ಪದವಿ ಪಡೆಯದಿರುವುದು ಕಂಡು ಬಂದಿತ್ತು. ಹಾಗಾಗಿ, ವಿನೋದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದಾದ ನಂತರ ಮತ್ತೆ ಮೂವರು ಸೈಟ್ ಎಂಜಿನಿಯರ್‌ಗಳ ವಿದ್ಯಾರ್ಹತೆ ಕೂಡ ನಕಲಿ ಎಂಬುದು ತಿಳಿದು ಬಂದಿದ್ದು, ಇವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.ಈ ಪ್ರಕರಣದ ಬೆನ್ನಲ್ಲೇ ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿರುವ ಯೋಜನಾ ವ್ಯವಸ್ಥಾಪಕರ ನೇಮಕ ಸಂಬಂಧದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್‌ಗೆ ಪತ್ರ ಬರೆದಿದ್ದಾರೆ.