5 ಲಕ್ಷ ರು. ಶೂನ್ಯ ಬಡ್ಡಿ ಕೃಷಿ ಸಾಲದ ಗೊಂದಲ ನಿವಾರಿಸಲು ಸರ್ಕಾರಕ್ಕೆ ಆಗ್ರಹ

KannadaprabhaNewsNetwork |  
Published : Aug 10, 2026, 03:00 AM IST
08ಮಂಜುನಾಥ | Kannada Prabha

ಸಾರಾಂಶ

ರಾಜ್ಯದ ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿರುವ ಕುರಿತು ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.

ಕಾರ್ಕಳ: ರಾಜ್ಯದ ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿರುವ ಕುರಿತು ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ₹5 ಲಕ್ಷದವರೆಗೆ ಶೂನ್ಯ ಬಡ್ಡಿ ಕೃಷಿ ಸಾಲ ಲಭ್ಯವಿದೆ ಎಂಬ ಸಂದೇಶಗಳು ರೈತರಿಗೆ ತಲುಪುತ್ತಿವೆ. ಆದರೆ ಹಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (PACS) ಇನ್ನೂ ₹3 ಲಕ್ಷದವರೆಗೆ ಮಾತ್ರ ಸಾಲ ನೀಡಲು ಸಾಧ್ಯವಾಗುತ್ತಿರುವುದರಿಂದ ರೈತರು ಮತ್ತು ಸಹಕಾರಿ ಸಂಘಗಳ ನಡುವೆ ಗೊಂದಲ ಉಂಟಾಗಿದೆ ಎಂದು ತಿಳಿಸಿದ್ದಾರೆ.ಮುಖ್ಯಮಂತ್ರಿಗಳ ಕಚೇರಿ ಅಥವಾ ಸರ್ಕಾರದ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸೇರಿದಂತೆ ಮೊಬೈಲ್‌ಗಳಿಗೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿ ಕೃಷಿ ಸಾಲ ಲಭ್ಯವಿದೆ ಎಂಬ ಸಂದೇಶಗಳು ಬರುತ್ತಿರುವ ಹಿನ್ನೆಲೆಯಲ್ಲಿ ರೈತರು ಸಹಕಾರಿ ಸಂಘಗಳಿಗೆ ತೆರಳಿ ಸಾಲದ ಬಗ್ಗೆ ವಿಚಾರಿಸುತ್ತಿದ್ದಾರೆ. ಆದರೆ ಅಗತ್ಯ ಹಣದ ಲಭ್ಯತೆ, ಬಡ್ಡಿ ಸಹಾಯಧನ ಹಾಗೂ ಅನುಷ್ಠಾನದ ಕಾರ್ಯವಿಧಾನದ ಕುರಿತು ಸ್ಪಷ್ಟತೆ ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸಬಹುದು ಎಂದು ಅವರು ಹೇಳಿದ್ದಾರೆ.₹5 ಲಕ್ಷದವರೆಗೆ ಸಾಲ ನೀಡುವ ಯೋಜನೆ ಎಲ್ಲ ಅರ್ಹ ರೈತರಿಗೆ ಅನ್ವಯವಾಗುತ್ತದೆಯೇ, ಈಗಾಗಲೇ ₹3 ಲಕ್ಷ ಸಾಲ ಪಡೆದವರಿಗೆ ಹೆಚ್ಚುವರಿ ₹2 ಲಕ್ಷ ನೀಡಲಾಗುತ್ತದೆಯೇ, ಅದರ ಅರ್ಹತಾ ಮಾನದಂಡಗಳೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕಾಮತ್ ಒತ್ತಾಯಿಸಿದ್ದಾರೆ.ಅಲ್ಲದೆ, ಹೆಚ್ಚುವರಿ ಸಾಲ ನೀಡಲು ಅಗತ್ಯವಿರುವ ಬಡ್ಡಿ ಸಹಾಯಧನ ಮತ್ತು ಹಣವನ್ನು ಸಹಕಾರಿ ಬ್ಯಾಂಕುಗಳು ಹಾಗೂ PACSಗಳಿಗೆ ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಬೇಕು. ನಬಾರ್ಡ್, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಹಾಗೂ PACSಗಳ ನಡುವೆ ಹಣದ ಹರಿವಿನಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ರೈತರಿಗೆ ಹೆಚ್ಚಿನ ಪ್ರಮಾಣದ ಶೂನ್ಯ ಬಡ್ಡಿ ಕೃಷಿ ಸಾಲ ದೊರೆಯುವುದು ಸ್ವಾಗತಾರ್ಹ. ಆದರೆ ಸರ್ಕಾರದ ಘೋಷಣೆ ಮತ್ತು ಸಹಕಾರಿ ಸಂಘಗಳ ಹಣಕಾಸಿನ ಸಾಮರ್ಥ್ಯದ ನಡುವೆ ಅಂತರ ಇರಬಾರದು. ರೈತರಿಗೆ ತಪ್ಪು ಭರವಸೆ ನೀಡದೆ, ಯೋಜನೆಯ ಹಣಕಾಸಿನ ಹೊಣೆಯನ್ನು ಸಹಕಾರಿ ಸಂಸ್ಥೆಗಳ ಮೇಲೆ ಹೊರಿಸುವಂತಾಗಬಾರದು ಎಂದು ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ.

₹5 ಲಕ್ಷದ ಸಾಲ ಯೋಜನೆಯ ಕುರಿತು ರಾಜ್ಯಾದ್ಯಂತ ಏಕರೂಪದ ಮಾರ್ಗಸೂಚಿ ಹಾಗೂ ಅಧಿಕೃತ ಸ್ಪಷ್ಟೀಕರಣ ಹೊರಡಿಸಿ ರೈತರು ಮತ್ತು ಸಹಕಾರಿ ಸಂಸ್ಥೆಗಳಲ್ಲಿರುವ ಗೊಂದಲವನ್ನು ತಕ್ಷಣ ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ.ಕ.: ಪಶುಪಾಲನಾ ಇಲಾಖೆಗೆ ತೀವ್ರ ಸಿಬ್ಬಂದಿ ಕೊರತೆ!
ಚೌಕಿ ರಂಗಶಾಲೆಯೂ ಆಗಿತ್ತು: ದಿವಾಣ ಶಿವಶಂಕರ ಭಟ್