ರಾಮರಾಜ್ಯದ ಪರಿಕಲ್ಪನೆಯಡಿಯಲ್ಲಿ ಸರ್ಕಾರದ ಕೆಲಸ: ದಿನೇಶ್ ಗುಂಡೂರಾವ್

KannadaprabhaNewsNetwork | Published : Jan 24, 2024 2:01 AM

ಸಾರಾಂಶ

ಸುಳ್ಯದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಡೆಯಿತು. 400 ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಗಳನ್ನು ವರ್ಗಾವಣೆ ಮಾಡಲಾಯಿತು. ಸಂಜೆಯವರೆಗೂ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸುಳ್ಯ

ಜಾತಿ, ಧರ್ಮ, ಪಕ್ಷ ಮೀರಿ ಎಲ್ಲ ವರ್ಗದವರಿಗೂ ಸರ್ಕಾರದ ಯೋಜನೆಯನ್ನು ತಲುಪಿಸುವ ಮೂಲಕ ಸಾಮಾಜಿಕ ನ್ಯಾಯದಡಿಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇದು ರಾಮರಾಜ್ಯದ ಕಲ್ಪನೆಯೂ ಆಗಿರುವುದರಿಂದ ಆ ನಿಟ್ಟಿನಲ್ಲೇ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸುಳ್ಯದಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನತಾದರ್ಶನಕ್ಕೆ 400 ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಗಳನ್ನು ವರ್ಗಾವಣೆ ಮಾಡಲಾಯಿತು. ಸಂಜೆಯವರೆಗೂ ಕಾರ್ಯಕ್ರಮ ನಡೆಯಿತು. ಜನರಿಗೆ ಬಹಳಷ್ಟು ಸಮಸ್ಯೆಗಳು ಇರುತ್ತದೆ. ಅದಕ್ಕೆ ಸ್ಪಂದನೆ ಮಾಡಬೇಕಾದುದು ಸರ್ಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಜನ ಸ್ಪಂದನೆ ಹಮ್ಮಿಕೊಳ್ಳಳಾಗಿದೆ. ಎಲ್ಲ ಅರ್ಜಿಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರ ಕೊಡಲಾಗುವುದು ಎಂದು ಹೇಳಿದರು. ಕೃಷಿಕರಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹ: ಸುಳ್ಯ ತಾಲೂಕಿನಲ್ಲಿ ಅಡಕೆ ಎಲೆ ಹಳದಿ ರೋಗದಿಂದ ಹಾಗೂ ಎಲೆ ಚುಕ್ಕೆ ರೋಗದಿಂದ ಅಡಕೆ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಭಾಗದ ಕೃಷಿಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಒತ್ತಾಯಿಸಿದ್ದಾರೆ. ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಳ್ಯ ತಾಲೂಕಿನಲ್ಲಿ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಸಮಸ್ಯೆ ಇದೆ. ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಇದರಿಂದ ಜಾಗದ ದಾಖಲೆ ಇಲ್ಲದೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯಂಚಿನಲ್ಲಿ ಮನೆ ಮಾಡಿಕೊಂಡವರ ಸಮಸ್ಯೆ ಇತ್ಯಾದಿಗಳನ್ನು ಸರಿಪಡಿಸಬೇಕಾದ ಕೆಲಸ ಆಗಬೇಕಾಗಿದೆ ಎಂದವರು ಹೇಳಿದರು. ಶಾಸಕಿ ಅಸಮಾಧಾನ, ಸಚಿವರ ಸಮರ್ಥನೆ: ತನ್ನ ಆಗಮನಕ್ಕೂ ಮುಂಚೆಯೇ ಜನತಾದರ್ಶನ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ ಸೂಚಿಸಿದ ಹಾಗೂ ಸರಿಯಾದ ಸಮಯಕ್ಕೆ ಜನರ ಸಮಸ್ಯೆ ಆಲಿಸಬೇಕೆಂದು ಆರಂಭಿಸಿರುವುದಾಗಿ ಉಸ್ತುವಾರಿ ಸಚಿವರು ಸಮರ್ಥನೆ ನೀಡಿದ ಘಟನೆ ನಡೆಯಿತು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಅವರು ಸರಿಯಾಗಿ 11 ಗಂಟೆಯ ವೇಳೆ ಕೆವಿಜಿ ಪುರಭವನಕ್ಕೆ ಆಗಮಿಸಿದ ಬಳಿಕ ಕಾರ್ಯಕ್ರಮ ಆರಂಭಗೊಂಡಿತು. ಈ ವೇಳೆ ಶಾಸಕರು ಆಗಮಿಸಿರಲಿಲ್ಲ. ಕಾರ್ಯಕ್ರಮಕ್ಕೆ ಪುತ್ತೂರು ಎ.ಸಿ. ಸ್ವಾಗತ ಮಾಡುತ್ತಿದ್ದ ವೇಳೆ ಕಾರ್ಯಕ್ರಮಕ್ಕೆ ಬಂದ ಭಾಗೀರಥಿ ಮುರುಳ್ಯ ಎ.ಸಿ. ಅವರಲ್ಲೇ ಅಸಮಾಧಾನ ತೋಡಿಕೊಂಡರು. ಉದ್ಘಾಟನೆ ಬಳಿಕ ಶಾಸಕಿಯವರಿಗೆ ಮಾತನಾಡುವ ಅವಕಾಶ ನೀಡಲಾಯಿತು. ಈ ವೇಳೆ ತನ್ನ ಮಾತಿನಲ್ಲೂ ಅಸಮಾಧಾನ ತೋಡಿಕೊಂಡ ಶಾಸಕರು , ಬಾಳಿಲದಲ್ಲಿ ಒಮ್ಮೆ ಉದ್ಘಾಟನೆಗೊಂಡ ಹಾಸ್ಟೆಲ್ ಕಟ್ಟಡ ಮತ್ತೆ ಉದ್ಘಾಟನೆ ಇಟ್ಟುಕೊಂಡಿದ್ದೀರಿ. ಅಲ್ಲೇ ಕಾರ್ಯಕ್ರಮ ಅಂತ ನಾನು ಅಲ್ಲಿದ್ದೆ. ಸರಿಯಾದ ಮಾಹಿತಿಯನ್ನೂ ನೀಡಲಾಗಿಲ್ಲ. ತಾನು ಈ ಕ್ಷೇತ್ರದ ಶಾಸಕಿ. ಓರ್ವ ಮಹಿಳೆ. ಈ ಕಾರಣಕ್ಕಾದರೂ ಸ್ವಲ್ಪ ಹೊತ್ತು ಕಾಯಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಆ ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕಿಯವರು ಗಮನಹರಿಸಬೇಕು. ಸರಿಯಾದ ಸಮಯಕ್ಕೆ ಜನತಾದರ್ಶನ ಆರಂಭಿಸಬೇಕೆಂದು ಬೆಳಗ್ಗಿನ ಉಪಹಾರವನ್ನು ಮಂಗಳೂರಿನಲ್ಲಿ ಮಾಡದೆ ಇಲ್ಲಿಗೆ ಬಂದಿದ್ದೇವೆ. ದಾರಿಯಲ್ಲಿ ಒಂದೆರಡು ಕಡೆ ನಿಲ್ಲಿಸಿದಾಗಲೂ ಸಚಿವರು ಜನರನ್ನು ಕಾಯಿಸಬಾರದು. ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಬೇಕೆಂದು ಹೇಳಿ ಬಂದಿದ್ದೇವೆ ಎಂದು ಹೇಳಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌, ತಮ್ಮ ಭಾಷಣದ ಕೊನೆಗೆ ಈ ಬಗ್ಗೆ ಪ್ರಸ್ತಾಪಿಸಿ, ಶಾಸಕರಿಗೆ ಏನೋ ಗೊಂದಲವಾಗಿದೆ. ನಾವೇನು ಗೊಂದಲ ಮಾಡಿಲ್ಲ. ಜನರನ್ನು ಕಾಯಿಸಬಾರದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭಿಸಬೇಕೆಂಬ ಕಾರಣಕ್ಕೆ ಬಂದು ಕಾರ್ಯಕ್ರಮ ಆರಂಭಿಸಿದ್ದೇವೆ. ಎಲ್ಲರ ಸಹಕಾರದಿಂದ ತಾಲೂಕಿನ ಅಭಿವೃದ್ಧಿ ಆಗಬೇಕಾಗಿದೆ. ಎಂದು ಹೇಳಿದರು. ಜನತಾ ದರ್ಶನ ಕಾರ್ಯಕ್ರಮದ ಬಳಿಕ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ದರ್ಶನದಲ್ಲಿ 407 ಅರ್ಜಿಗಳು ಬಂದಿತ್ತು. ಹೆಚ್ಚಾಗಿ ಅರಣ್ಯ ಭೂಮಿ ಸಮಸ್ಯೆ, ಒನ್ ಟು ಫೈವ್ ಸಮಸ್ಯೆಗೆ ಸಂಬಂಧಿಸಿದ್ದು. ಇದರ ಇತ್ಯರ್ಥಕ್ಕಾಗಿ ಸರ್ವೆಗೆ ವಿಶೇಷ ತಂಡ ರಚನೆ ಮಾಡಲಾಗುವುದು. ಸುಳ್ಯ ಕ್ಷೇತ್ರದಲ್ಲಿ ಇಷ್ಟು ಸಮಸ್ಯೆಗಳಿದ್ದರೂ ಈವರೆಗೆ ಗಮನ ಹರಿಸಿಲ್ಲ ಎಂದೇ ಹೇಳಬೇಕಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಿಗೆ ತಂತ್ರಜ್ಞರ ನೇಮಕ ಶೀಘ್ರದಲ್ಲೇ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಪ್ರೊ.ಕೆ.ಈ .ರಾಧಾಕೃಷ್ಣ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಂ, ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ಎಂ‌. ವೆಂಕಪ್ಪ ಗೌಡ, ಟಿ.ಎಂ.ಶಹೀದ್ ಉಪಸ್ಥಿತರಿದ್ದರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ: ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಿಂದ ಪಕ್ಷ ಪ್ರಯೋಜನ ಪಡೆಯಲು ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಸುಳ್ಯಕ್ಕೆ ಆಗಮಿಸಿದ್ದ ಸಚಿವರು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಖಂಡಿತವಾಗಿಯೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿರುತ್ತದೆ ಎಂದು ಹೇಳಿದ ಸಚಿವರು, ಕೇಂದ್ರ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿ ಅನ್ಯಾಯ ಮಾಡುತ್ತಿದೆ. ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ. ಕರ್ನಾಟಕದ 27 ಬಿಜೆಪಿ ಎಂ.ಪಿ.ಗಳೂ ರಾಜ್ಯದ ಪರ ಮಾತನಾಡುತ್ತಿಲ್ಲ. ಇಂಥವರನ್ನು ಮತ್ತೆ ಮತ್ತೆ ಗೆಲ್ಲಿಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಪ್ರೊ.ಕೆ.ಈ .ರಾಧಾಕೃಷ್ಣ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಂ, ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ಎಂ‌. ವೆಂಕಪ್ಪ ಗೌಡ, ಡಾ. ರಘು, ಟಿ.ಎಂ.ಶಹೀದ್ ಮೊದಲಾದವರು ಉಪಸ್ಥಿತರಿದ್ದರು.

Share this article