ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಬಹುಜನ ಸಮಾಜ ಪಾರ್ಟಿ ವತಿಯಿಂದ ನಡೆದ ಮಾನ್ಯವರ್ ದಾದಾ ಸಾಹೇಬ್ ಕಾನ್ಸಿರಾಂ ರವರ 92ನೇ ಜನ್ಮ ದಿನಾಚರಣೆ ಹಾಗೂ ಬಹುಜನ್ ದಿವಸ್ ಮೈಸೂರು ವಲಯ ಮಟ್ಟದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಧರ್ಮ ಹಾಗೂ ಜಾತಿ ಆಧಾರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜನರ ಹಿತ ಕಾಯುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಕಿಡಿಕಾರಿದರು.
ಹಿಂದುಳಿದ ಸಮುದಾಯದ ಜನರನ್ನು ಒಂದೂಗೂಡಿಸಿ ರಾಜಕೀಯ ಪ್ರಜ್ಞೆ ನೀಡಿದ ಕಾನ್ಸಿರಾಂ ಅವರು ರಾಜಕೀಯದಲ್ಲಿಯೇ ಮಾದರಿ ಎನಿಸಿದ್ದಾರೆ. ಡಾ.ಅಂಬೇಡ್ಕರ್ ನಂತರ ಈ ದೇಶದಲ್ಲಿ ಶೋಷಿತರನ್ನು ಜಾಗೃತಿ ಮೂಡಿಸುವ ಮೂಲಕ ಅವರಿಗೆ ರಾಜಾಕೀಯ ಅಧಿಕಾರವನ್ನು ದೊರಕಿಸಿಕೊಂಡು ಮಹಾನ್ ವ್ಯಕ್ತಿ ಯಾರಾದರೂ ಇದ್ದರೆ ಅವರು ದಾದಾ ಸಾಹೇಬ್ ಕಾನ್ಸಿರಾಂ ಜೀ ಎಂದರು.ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಎಸ್ಪಿ ಪಕ್ಷವನ್ನು ಕಟ್ಟಿ ಸ್ವತಂತ್ರವಾಗಿ ಅಧಿಕಾರಕ್ಕೆ ತಂದು ಅಕ್ಕ ಮಾಯಾವತಿಯನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ ತೋರಿಸಿದ್ದಾರೆ. ಅಂತಹ ಬಹುಜನ ಸಮಾಜ ಪಕ್ಷವನ್ನು ನಾವೆಲ್ಲರೂ ಒಗ್ಗೂಡಿ ರಾಜ್ಯದಲ್ಲಿ ಕಟ್ಟುವ ಮೂಲಕ ರಾಜ್ಯಾಧಿಕಾರ ಪಡೆಯೋಣ ಎಂದರು.
ಮತಗಳನ್ನು ಮಾರಿಕೊಳ್ಳಬಾರದೆಂಬ ಉದ್ದೇಶದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿವೆ. ಮುಂದಿನ ದಿನಗಳಲ್ಲಿ ಬಿಎಸ್ಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ವಿವರಿಸಿದರು.
ಬಿಎಸ್‌ಪಿ ರಾಜ್ಯ ಉಸುವಾರಿ ಡಾ.ಹ.ರಾ ಮಹೇಶ್ ಮಾತನಾಡಿ, ಕಾನ್ಸಿರಾಂ ಹಾಗೂ ಬಹುಜನ ಸಮಾಜದ ಹೋರಾಟದಿಂದಾಗಿ ಎಲ್ಲಾ ಸರ್ಕಾರಿ ಕಚೇರಿ ಹಾಗೂ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳನ್ನು ಕಾಣಬಹುದು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪರಿಶಿಷ್ಟ ಸಮುದಾಯ ಮತಗಳನ್ನು ವೋಟ್ ಬ್ಯಾಂಕ್ ಮಾಡಿಕೊಂಡಿವೆಯೇ ಹೊರತು ರಾಜಕೀಯ ಶಕ್ತಿ ನೀಡಿಲ್ಲ ಎಂದರು.ದೇಶ ಭಕ್ತಿ ಎಂದು ಹೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಮೇರಿಕಾದ ತಾಳಕ್ಕೆ ಕುಣಿಯುತ್ತಿದೆ. ನರೇಂದ್ರಮೋದಿ ದೇಶವನ್ನು ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ಬಿಎಸ್‌ಪಿ ಪಕ್ಷದಲ್ಲಿ ಎಲ್ಲಾ ಸಮುದಾಯದ ಜನರು ಭಾಗಿಯಾಗಲಿದ್ದು, ಮನುವಾದಿಗಳು ಸುಳ್ಳುಗಳಿಗೆ ಕಿವಿಕೊಡಬಾರದೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನಾ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥ ನಡೆಸಿ ಘೋಷಣೆಗಳನ್ನು ಕೂಗಿದರು. ಕಾರ್ಯಕ್ರಮದಲ್ಲಿ ಬಿಎಸ್ಪಿ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಉಸ್ತುವಾರಿ ಗಂಗಾಧರ್ ಬಹುಜನ್, ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಜಿಲ್ಲಾಧ್ಯಕ್ಷ ಎಸ್. ಶಿವಶಂಕರ್, ಉಸ್ತುವಾರಿ ಹೆಚ್.ಎನ್.ವೀರಭದ್ರಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಸುಧಾಕರ್ ಮುಖಂಡರಾದ ಉಮೇಶ್ ಮೌರ್ಯ, ಎನ್. ದೇವರಾಜು, ದೌಲದ್ ಪಾಷಾ, ಲೋಕೇಶ್ ಗೌಡ, ಬಿ.ಡಿ. ರಾಜೇಂದ್ರ, ಬಿ.ಎಸ್.ತಮ್ಮಯ್ಯ, ಕೆ.ಎಸ್. ಮಹೇಶ್ ಸೇರಿದಂತೆ ಇತರರಿದ್ದರು.