ಸರ್ಕಾರಗಳು ಉದ್ಯೋಗ ಸೃಷ್ಟಿಸಬೇಕು: ಶಾಸಕ ಪುಟ್ಟರಂಗಶೆಟ್ಟಿ

KannadaprabhaNewsNetwork | Published : Jun 24, 2024 1:33 AM

ಸಾರಾಂಶ

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ಚಾಮರಾಜನಗರದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕ್ರಮಕೈಗೊಳ್ಳಲಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ - ಎನ್ ಎಸ್ ಯು ಐ ಜಿಲ್ಲಾ ಸಮಿತಿ ವತಿಯಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ 2023-24 ನೇ ಸಾಲಿನ ಎಸ್ಎಸ್ಎಲ್ ಸಿಯಲ್ಲಿ ಶೇ.80 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85 ಕ್ಕಿಂತ ಹೆಚ್ವು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಕಳೆದ ಬಾರಿ ಜಿಲ್ಲೆಯಲ್ಲಿ ಪಿಯುಸಿಯಲ್ಲಿ ೧೨ನೇ ಸ್ಥಾನದಲ್ಲಿದ್ದು, ಈ ಬಾರಿ ೮ನೇ ಸ್ಥಾನಕ್ಕೆ ಬಂದಿದ್ದೇವೆ. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ 9ನೇ ಸ್ಥಾನದಲ್ಲಿದ್ದು ಈ ಬಾರಿ ೨೪ನೇ ಸ್ಥಾನಕ್ಕೆ ಹೋಗಿದ್ದೇವೆ. ಇದರ ಬಗ್ಗೆ ಚಿಂತಿಸಬೇಕಿದೆ. ಕೊವೀಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಮುಂದೆ ಇದ್ದೆವು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಕಡಿಮೆ ಬರಲು ಕಾರಣ ಏನು ಎಂಬುದಕ್ಕೆ ಚಿಂತನೆ ಮಾಡಬೇಕಿದೆ. ಕೆಲವು ಮಕ್ಕಳು ೮೦,೯೦ ಅಂಕ ಪಡೆದರೆ ಸಾಲದು ಎಂದರು.

ಇದು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರಮಪಟ್ಟು ಗುರಿಯಿಟ್ಟುಕೊಂಡು ಓದುತ್ತಿದ್ದಾರೆ. ಕೆಲವರು ವೈದ್ಯರು, ಎಂಜಿನಿಯರ್, ನರ್ಸ್ ಆಗುತ್ತಾರೆ. ಕೆಲವರು ಕೃಷಿ, ವ್ಯಾಪಾರ ಮಾಡುತ್ತಾರೆ. ಉದ್ಯೋಗವನ್ನೇ ನಂಬಿಕೊಂಡು ಓದುವ ಬಡವಿದ್ಯಾರ್ಥಿ ಗತಿಯೇನಾಗಬೇಕು. ಹೊರದೇಶದಲ್ಲಿ ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದಾರೆ ಅದು ನಮ್ಮ ದೇಶದಲ್ಲಿ ಆಗಬೇಕು. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸೃಷ್ಠಿ ಮಾಡಬೇಕು ಎಂದರು.

ಸಾಮಾನ್ಯ ಜ್ಞಾನ ಬೆಳಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದ ಕೊಳ್ಳೇಗಾಲದ ಶಾಸಕ ಎ.ಅರ್. ಕೃಷ್ಣಮೂರ್ತಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ವು ಒತ್ತು ನೀಡಿದ ಪರಿಣಾಮದಿಂದ ದೇಶದಲ್ಲಿ ಕೆಲವರಿಗೆ ಮೀಸಲಾಗಿದ್ದ ಶಿಕ್ಷಣ ಸರ್ವರಿಗೂ ದೊರೆತು. ದೇಶ ಅಭಿವೃದ್ಧಿ ಹೊಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತಾಯಿತು ಎಂದರು.

ನಮ್ಮ ತಂದೆ ಬಿ.ರಾಚಯ್ಯನವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಸಾಮಾನ್ಯ ಬಡಕುಟುಂಬದ ಮಕ್ಕಳು ವೈದ್ಯರು, ಎಂಜಿನಿಯರ್ ಆಗಲಿ ಎಂದು ನೀಟ್ ಪರೀಕ್ಷೆ ತಂದರು. ಇದು ಸಂವಿಧಾನದಲ್ಲಿ ಕಾನೂನು ಆಗಿದೆ. ಸಂವಿಧಾನದಿಂದ ಸರ್ವರಿಗೂ ಮೀಸಲಾತಿ ಅವಕಾಶ ಸಿಕ್ಕಿದೆ. ನೇಮಕಾತಿ ಕಾಲಕಾಲಕ್ಕೆ ಆಗುತ್ತಿಲ್ಲ. ನಿವೃತ್ತಿ ಹೊಂದುವ ಸಂದರ್ಭದಲ್ಲಿ ಹುದ್ದೆ ತುಂಬಿದರೆ ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಬೆಳೆಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಹೆಚ್ಚು ಅಂಕ ಪಡೆಯಲು ಅನುಕೂಲವಾಗುತ್ತದೆ ಎಂದರು.

ಶಾಸಕ ಗಣೇಶಪ್ರಸಾದ್ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೇಸರದ ಸಂಗತಿಯಾಗಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಕಾಲೇಜು ಶಿಕ್ಷಣಕ್ಕಿಂತ ಆನ್ಲೈನ್ ಶಿಕ್ಷಣ ಮಹತ್ವ ಪಡೆದಿದೆ. ಸ್ಪರ್ಧಾತ್ಮಕ ಯುಗದಿಂದ ಪ್ರಪಂಚ ವೇಗವಾಗಿ ಬೆಳೆಯುತ್ತಿದೆ. ಆಗಾಗಿ ವಿದ್ಯಾರ್ಥಿಗಳು ಶ್ರಮಪಟ್ಟ ಓದಬೇಕು ಆಗ ಮಾತ್ರ ಸಾಧನೆ ಸಾಧ್ಯ ಎಂದರು.

ಪ್ರತಿಭಾ ಪುರಸ್ಕಾರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಯಲ್ಲಿ ಶೇ.80% ಮತ್ತು ದ್ವಿತೀಯ ಶೇ.85% ಕ್ಕಿಂತ ಹೆಚ್ವು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಒಂದು ಫೈಲ್, ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸನ್ಮಾನ: ಸಿಮ್ಸ್ ಆಸ್ಪತ್ರೆ ನಿವಾಸಿ ವೈದ್ಯ ಡಾ.ಮಹೇಶ್, ಸರ್ಕಾರಿ ವಕೀಲರಾದ ಅರುಣ್ ಕುಮಾರ್, ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಗಳಿಗೆ ಸಮವಸ್ತ್ರ ವಿತರಿಸಲಾಯಿತು.

ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಮೋಹನ್ ನಗು ಪ್ರಾಸ್ತಾವಿಕ ಭಾಷಣ ಮಾಡಿದರು. ನಿಯೋಜಿತ ನಳಂದ ವಿಶ್ವವಿದ್ಯಾಲಯದ ಕಾರ್ಯದರ್ಶಿ ಭಂತೆ ಬೋದಿದತ್ತತೇರ ಕಾರ್ಯಕ್ರಮದ ಸಾನಿಧ್ಯವಹಿಸಿದರು. ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಸರ್ಕಾರಿ ವಕೀಲ ಅರುಣ್ ಕುಮಾರ್, ಚೂಡಾಧ್ಯಕ್ಷ ಮಹಮ್ನದ್ ಅಸ್ಗರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರವಿಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಲತಾಜತ್ತಿ, ಜಿ.ಪಂ.ಮಾಜಿ ಸದಸ್ಯ ಎ.ಆರ್. ಬಾಲರಾಜು, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಧುಸೂದನ್, ಎನ್ ಎಸ್ ಯುಐ ಪ್ರಧಾನ ಕಾರ್ಯದರ್ಶಿ ಉಮಾನುಶ್ರೀ, , ಕಾರ್ಯದರ್ಶಿ ಜಿ.ಎನ್.ಲೋಕೇಶ್, ಸ್ವಾಮಿ, ಉಪಾಧ್ಯಕ್ಷ ರಫೀಕ್ ಅಲಿ, ಸಾಮಾಜಿಕ ಜಾಲತಾಣ ಅಧ್ಯಕ್ಷ ಸೈಯದ್ ಮುಸಾಯಿಬ್,ಜಿಲ್ಲಾಉಪಾಧ್ಯಕ್ಷ ಆರ್.ಎಸ್.ಅಕ್ಷಯ್ ಕುಮಾರ್, ಮುತ್ತುರಾಮ್, ಸ್ಟ್ಯಾನಿ ಬಾಲರಾಜ್, ತಾಲೂಕು ಅಧ್ಯಕ್ಷ ಶಶಾಂಕ್, ನಂಜನಗೂಡು ನಕ್ಷತ್ರ ಸೇವಾ ಟ್ರಸ್ಟ್‌ ಎನ್.ಮಂಜುನಾಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this article