ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುತ್ತಿರುವ ಜನಗಣತಿ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಕಡಿಮೆ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಅತ್ಯುತ್ತಮ ಸಾಧನೆ ಮಾಡಿದ ಜಮಖಂಡಿ ತಾಲೂಕಿನ ಶಿಕ್ಷಕಿಯರಾದ ನಂದಿನಿ ಆರ್.ಎಸ್, ರುಕ್ಮವ್ವ ವಾಲಿಕಾರ್ ಅವರನ್ನು ಜಮಖಂಡಿ ನಗರದ ಬಿಎಲ್ಡಿಇಎ ಸಂಸ್ಥೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಶುಕ್ರವಾರ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ನಡೆಯುತ್ತಿರುವ ಜನಗಣತಿ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಕಡಿಮೆ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಅತ್ಯುತ್ತಮ ಸಾಧನೆ ಮಾಡಿದ ಜಮಖಂಡಿ ತಾಲೂಕಿನ ಶಿಕ್ಷಕಿಯರಾದ ನಂದಿನಿ ಆರ್.ಎಸ್, ರುಕ್ಮವ್ವ ವಾಲಿಕಾರ್ ಅವರನ್ನು ಜಮಖಂಡಿ ನಗರದ ಬಿಎಲ್ಡಿಇಎ ಸಂಸ್ಥೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಶುಕ್ರವಾರ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮನೆಮನೆ ಜನಗಣತಿ ಸಮೀಕ್ಷೆ ವೀಕ್ಷಿಸಿದ ಡಿಸಿ, ಸಿಇಓ
ಜಿಲ್ಲೆಯಲ್ಲಿ ನಡೆಯುತ್ತಿರುವ ಮನೆಮನೆ ಜನಗಣತಿ ಸಮೀಕ್ಷೆಯ ಭಾಗವಾಗಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಪಂ ಸಿಇಓ ಶಶಿಧರ ಕುರೇರ ಅವರು ಸ್ವತಃ ಕ್ಷೇತ್ರಕ್ಕೆ ಭೇಟಿ ನೀಡಿ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡು, ಸಮೀಕ್ಷಾ ತಂಡದೊಂದಿಗೆ ಮನೆ ಮನೆಗೆ ತೆರಳಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಪರಿಶೀಲಿಸಿದರು.
ಶುಕ್ರವಾರ ಜಮಖಂಡಿಯ ಪ್ರಭಾತ ನಗರ ಹಾಗೂ ಕಡಪಟ್ಟಿಯ ಗ್ರಾಮೀಣ ಭಾಗ, ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದಲ್ಲಿರುವ ಕೆಲವು ಮನೆಗಳಿಗೆ ಭೇಟಿ ನೀಡಿ ಮನೆಮನೆ ಜನಗಣತಿ ಸಮೀಕ್ಷೆ ಕಾರ್ಯವನ್ನು ಪ್ರತ್ಯಕ್ಷವಾಗಿ ವೀಕ್ಷಣೆ ಮಾಡಿದರು. ಸಮೀಕ್ಷೆ ನಡೆಸುತ್ತಿರುವ ತಂಡದ ಸದಸ್ಯರೊಂರಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಾಹಿತಿಯನ್ನು ನಿಖರವಾಗಿ ಮತ್ತು ಸಂಪೂರ್ಣವಾಗಿ ದಾಖಲಿಸುವಂತೆ ಸೂಚನೆ ನೀಡಿದರು. ಯಾವುದೇ ಮನೆ ಬಿಟ್ಟು ಹೋಗದಂತೆ ನೋಡಿಕೊಂಡು ಮಾಹಿತಿ ಸರಿಯಾಗಿ ದಾಖಲಿಸಬೇಕೆಂದು ತಿಳಿಸಿದರು.
ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಮೆನೆಮನೆಗೆ ಗಣತಿದಾರರು ಬಂದಾಗ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಜನಗಣತಿ ಅಂಕಿ-ಅಂಶಗಳು ಸರ್ಕಾರದ ಯೋಜನೆ ರೂಪಿಸಲು ಆಧಾರವಾಗಿರುವುದರಿಂದ ಎಲ್ಲರೂ ಜವಾಬ್ದಾರಿಯಿಂದ ಭಾಗವಹಿಸಬೇಕು ಎಂದು ಹೇಳಿದರು. ಪರಿಶೀಲನೆ ವೇಳೆ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಮಖಂಡಿ ನಗರಸಭೆ ಪೌರಾಯುಕ್ತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.