ಕನ್ನಡಪ್ರಭ ವಾರ್ತೆ ಗದಗ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಅಕ್ರಮ ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕ ಅಧಿನಿಯಮ-2025 ಈಗ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಯಲ್ಲಿದೆ. ಈ ಹೊಸ ಕಾನೂನು ಕನ್ನಡಿಗರ ಆಸ್ತಿಯನ್ನು ಕನ್ನಡಿಗರಿಗೆ ಮರಳಿ ತರುವ ಕೆಲಸ ಮಾಡಲಿದೆ ಎಂದು ಹೇಳಿದರು.
ಹೊಸ ಕಾನೂನು ಜಾರಿಯ ಹಾದಿ:ಈ ಮಹತ್ವದ ಕಾನೂನು ರಚನೆಯ ಹಿಂದಿನ ಪ್ರಕ್ರಿಯೆಯನ್ನು ವಿವರಿಸಿದ ಸಚಿವರು, ಜು.2ರಂದು ನಂದಿಬೆಟ್ಟದಲ್ಲಿ ನಡೆದ ಸಭೆಯಲ್ಲಿ ಗಣಿ ಹಗರಣದ ಬಗ್ಗೆ ಚರ್ಚೆ ನಡೆಸಿದ ನಂತರ, ಉಪ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ಮಾಡಲಾಯಿತು. ಜು.5ರಂದು ಈ ಕುರಿತು ಕ್ಯಾಬಿನೆಟ್ ಉಪಸಮಿತಿಯನ್ನು ನೇಮಕ ಮಾಡಲಾಯಿತು. ಒಂದು ತಿಂಗಳ ನಂತರ ಉಪಸಮಿತಿ ತನ್ನ ಕೆಲಸ ಪೂರ್ಣಗೊಳಿಸಿ ವರದಿ ಸಲ್ಲಿಸಿತು. ಈ ವರದಿಯ ಆಧಾರದಲ್ಲಿ ವಸೂಲಾತಿ ಆಯುಕ್ತರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ.18ರಂದು ಕ್ಯಾಬಿನೆಟ್ ಒಪ್ಪಿದ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ವಿಧಾನ ಪರಿಷತ್‌ನಲ್ಲಿಯೂ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಸೆ.9ರಂದು ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕಿದ್ದಾರೆ ಎಂದರು.
ಸಚಿವ ಸಂಪುಟ ಉಪಸಮಿತಿ ರೂಪಿಸಿದ ಯೋಜನೆ ಪ್ರಕಾರವೇ ಈ ಕಾನೂನನ್ನು ಜಾರಿ ಮಾಡಲಾಗಿದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ರಾಜ್ಯದ ಸಂಪತ್ತನ್ನು ಮರಳಿ ತರುವ ವಿಶ್ವಾಸವಿದೆ ಎಂದು ಅವರು ಹೇಳಿದರು.---
ಅಕ್ರಮ ಗಣಿಗಾರಿಕೆ ವಿಷಯವಾಗಿ ಈ ಹಿಂದೆಯೇ ಲೋಕಾಯುಕ್ತ ನ್ಯಾಯಮೂರ್ತಿಗಳು ಸಲ್ಲಿಸಿದ ವರದಿಯಲ್ಲಿ ₹78 ಸಾವಿರ ಕೋಟಿ ಎಂದು ಉಲ್ಲೇಖಿಸಿದ್ದರು. ಇದು ಅಂದಿನ ದರದಲ್ಲಿ ಈಗ ಇನ್ನೂ ಹೆಚ್ಚಾಗಲಿದೆ.