ಧಾರವಾಡ:
ಪ್ರತ್ಯೇಕ ಪಾಲಿಕೆ ಪ್ರಸ್ತಾವನೆ ಇತ್ಯರ್ಥಗೊಳಿಸಲು ಸರ್ಕಾರವು ಕೆಲ ನಿಬಂಧನೆ ಪಾಲಿಸಬೇಕು ಎಂದು ರಾಜ್ಯಪಾಲರು ಸರ್ಕಾರಕ್ಕೆ ಕಳುಹಿಸಿರುವ ಅನುಮೋದನೆಯಲ್ಲಿ ಷರತ್ತುಗಳನ್ನು ಹಾಕಿದ್ದಾರೆ. ಅಸ್ತಿತ್ವದಲ್ಲಿರುವ ಹು-ಧಾ ಮಹಾನಗರ ಪಾಲಿಕೆಯ ಚುನಾಯಿತ ಸಂಸ್ಥೆಯ ಅವಧಿ ಪೂರ್ಣಗೊಂಡ ನಂತರ ವಿಭಜನೆಯ ಅಧಿಸೂಚನೆಯು ಜಾರಿಗೊಳ್ಳಬೇಕು. ಸದ್ಯ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೂ ಈಗ ಹುಬ್ಬಳ್ಳಿ-ಧಾರವಾಡದಲ್ಲಿ ಅಸ್ತಿತ್ವದಲ್ಲಿ ಇರುವ ಗಡಿಗಳನ್ನು ಬದಲಾಯಿಸದಂತೆ ಷರತ್ತು ವಿಧಿಸಲಾಗಿದೆ. ಇದರೊಂದಿಗೆ ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಗಳಿಗೆ ಆರ್ಥಿಕ ನೆರವು ಹಾಗೂ ಆದಾಯ ವಿತರಣೆ ಲಭ್ಯವಾಗುವಂತೆ ಅಗತ್ಯ ಕ್ರಮಕೈಗೊಳ್ಳಲು ರಾಜ್ಯಪಾಲರು ಸಲಹೆ ನೀಡಿ ಕಡತವನ್ನು ಸರ್ಕಾರಕ್ಕೆ ಹಿಂದುರಿಗಿಸಿದ್ದಾರೆ.
2025ರ ಏಪ್ರಿಲ್‌ನಲ್ಲಿ ಕಳುಹಿಸಿದ್ದ ಪ್ರಸ್ತಾವನೆ:ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವಂತೆ ರಾಜ್ಯ ಸರ್ಕಾರ ತೀರ್ಮಾನ ಪ್ರಕಟಿಸಿ 2025ರ ಏಪ್ರಿಲ್ 28ರಂದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ಈ ವರೆಗೂ ಅನುಮೋದನೆ ಸಿಕ್ಕಿರಲಿಲ್ಲ. ಈ ಮಧ್ಯೆ ಬಿಜೆಪಿ ಅಧಿಕಾರದ ಪಾಲಿಕೆಯಲ್ಲಿ ಬೃಹತ್ ಮಹಾನಗರ ಪಾಲಿಕೆಯ ಠರಾವು ಮಾಡಲಾಗಿತ್ತು. ಜೊತೆಗೆ ಶಾಸಕ ಅರವಿಂದ ಬೆಲ್ಲದ ಅವರು ಪ್ರತ್ಯೇಕ ಪಾಲಿಕೆ ಬೇಡ ಎಂಬ ಪತ್ರವನ್ನು ಸಹ ರಾಜ್ಯಪಾಲರಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರತ್ಯೇಕ ಪಾಲಿಕೆಯ ಧ್ವನಿ ಜೋರುಗೊಂಡಿತ್ತು. ಈ ಒತ್ತಡಕ್ಕೆ ಮಣಿದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ರಾಜ್ಯಪಾಲರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿತ್ತು. ಇದೀಗ ರಾಜ್ಯಪಾಲರು ಕಡತಕ್ಕೆ ಅನುಮೋದನೆ ನೀಡಿರುವ ಪ್ರತಿಯನ್ನು ಮಾಜಿ ಮೇಯರ್ ಶಿವು ಹಿರೇಮಠ ಮಂಗಳವಾರ ಪ್ರತ್ಯೇಕ ಪಾಲಿಕೆ ಹೋರಾಟಗಾರರಿಗೆ ತಲುಪಿಸಿದರು.
ಒಟ್ಟಾರೆ, ಕಳೆದ 12 ದಿನಗಳ ನಿರಂತರ ಹೋರಾಟದ ಫಲವಾಗಿ ಪ್ರತ್ಯೇಕ ಪಾಲಿಕೆ ಬಗ್ಗೆ ಇರುವ ಗೊಂದಲಗಳಿಗೆ ತೆರೆ ಬಿದ್ದಿದೆ. ಆದರೆ, ಇಷ್ಟು ದಿನ ರಾಜ್ಯಪಾಲರ ಬಳಿ ಇದ್ದ ಪಾಲಿಕೆಯ ವಿಭಜನೆ ಚೆಂಡು ಈಗ ರಾಜ್ಯ ಸರ್ಕಾರದ ಅಂಗಳಕ್ಕೆ ಹೋಗಿದೆ.ಅಂತಿಮ ಮುದ್ರೆ ವರೆಗೂ ಹೋರಾಟ..
ಬಿ.ಡಿ. ಹಿರೇಮಠ ಹೋರಾಟಗಾರರು