ಗೋವಿನಕೋವಿ ಮುಳ್ಳುಗದ್ದುಗೆ ಉತ್ಸವ ಸಂಪನ್ನ

KannadaprabhaNewsNetwork |  
Published : Mar 01, 2025, 01:03 AM IST
ಗೋವಿನಕೋವಿ ಗ್ರಾಮದ ಹಾಲಸ್ವಾಮೀಜಿ ಬೃಹನ್ಮಠದ ಸದ್ಗುರು ಶ್ರೀ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿಯವರ ಮುಳ್ಳುಗದ್ದುಗೆ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ನೂತನವಾಗಿ ಪಟ್ಟಾಧಿಕಾರ ಹೊಂದಿರುವ ಸದ್ಗುರು ವಿಶ್ವಾರಾಧ್ಯ ಹಾಲಸ್ವಾಮೀಜಿ ಮುಳ್ಳುಗದ್ದುಗೆ ಉತ್ಸವ ಸಾವಿರಾರು ಭಕ್ತರ ಸಮ್ಮುಖ ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

- ಜಾಲಿಮುಳ್ಳಿನ ಗದ್ದುಗೆ ಮೇಲೆ ಹಾರಿಹಾರಿ ಕುಣಿದ ಶ್ರೀಗಳು- - - ನ್ಯಾಮತಿ: ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ನೂತನವಾಗಿ ಪಟ್ಟಾಧಿಕಾರ ಹೊಂದಿರುವ ಸದ್ಗುರು ವಿಶ್ವಾರಾಧ್ಯ ಹಾಲಸ್ವಾಮೀಜಿ ಮುಳ್ಳುಗದ್ದುಗೆ ಉತ್ಸವ ಸಾವಿರಾರು ಭಕ್ತರ ಸಮ್ಮುಖ ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಗೋವಿನಕೋವಿ ಬೃಹನ್ಮಠದಲ್ಲಿ ಫೆ.27, 28ರಂದು ಮಹಾಶಿವರಾತ್ರಿ ನಿಮಿತ್ತ ಜಾತ್ರಾ ಮಹೋತ್ಸವ ಮತ್ತು ನೂತನ ಶ್ರೀಗಳ ಪಟ್ಟಾಧಿಕಾರ ಪ್ರಥಮ ವರ್ಧಂತ್ಯುತ್ಸವ ಹಾಗೂ ಮುಳ್ಳುಗದ್ದುಗೆ ಕಾರ್ಯಕ್ರಮಗಳು ಗುರುವಾರ ರಾತ್ರಿ ಸಂಪನ್ನಗೊಂಡವು.

ಶ್ರೀಸ್ವಾಮಿಯ ಸೇವಾರ್ಥಿಗಳು ಹಾಗೂ ಬಾಬುದಾರರು ಗುರುವಾರ ಬೆಳಗ್ಗೆ ಮೆರವಣಿಗೆ ಮೂಲಕ ಮುಳ್ಳನ್ನು ತಂದು ಗದ್ದುಗೆಯಲ್ಲಿ ಹಾಸಿ ಅಲಂಕರಿಸಿದ್ದರು. ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಉಪವಾಸ ವ್ರತದ ಬಳಿಕ ಮಠದ ಪರಂಪರೆಯಂತೆ ಧಾರ್ಮಿಕ ವಿಧಿವಿಧಾನಗಳ ಪೂಜಾ ಕೈಂಕರ್ಯಗಳನ್ನು ಪೂರೈಸಿ ಅಗ್ನಿಕುಂಡ ಪ್ರವೇಶಿಸಿ, ಮುಳ್ಳುಗದ್ದುಗೆಯನ್ನು ಅಲಂಕರಿಸಿದರು.

ಉತ್ಸವಕ್ಕೂ ಮುನ್ನ ಶ್ರೀಮಠದ ಪರಂಪರೆಯಂತೆ ಮುಳ್ಲುಗದ್ದುಗೆ ತೇಜಿ ಉತ್ಸವ (ಮಠದ ಕುದುರೆ) ಗ್ರಾಮದ ಪ್ರತಿಯೊಂದು ಮನೆಗಳಿಗೆ ಹೋಗಿ ಪೂಜೆ ಸಲ್ಲಿಸಿಕೊಂಡು ಬಂದಿತು. ಅನಂತರ ಮಠದ ಆವರಣದಲ್ಲಿ ಮುಳ್ಳಿನ ಗದ್ದುಗೆಗೆ ಪೂಜೆ ನೆರವೇರಿಸಿ, ಹಾಲಸ್ವಾಮೀಜಿ ಮುಳ್ಳುಗದ್ದುಗೆಯ ಮೇಲೆ ಬಾಳೆಎಲೆಯಿಂದ ಮಾಡಿದ ಕೌಪೀನ ಧರಿಸಿದರು. ಜಾಲಿಮುಳ್ಳಿನ ಗದ್ದುಗೆಯ ಮೇಲೆ ಹಾರಿ ಹಾರಿ ಕುಣಿದರು. ಮುಳ್ಳುಗದ್ದುಗೆ ಆಚರಣೆ ದೃಶ್ಯ ಭಕ್ತರ ಮೈನವಿರೇಳಿಸಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಳ್ಳುಗದ್ದುಗೆ ಉತ್ಸವದಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀಮಠದ ಮೂಲ ಹಾಲಸ್ವಾಮೀಜಿ ಪಾದುಕೆ, ಗ್ರಾಮ ದೇವತೆಗಳಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಶ್ರೀ ಶಕ್ತಿ ಕಾಲೀಕಾಂಬದೇವಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ವೀರಗಾಸೆ, ಡೊಳ್ಳು, ತಮಟೆವಾಧ್ಯ ಸೇರಿದಂತೆ ಹಲವು ಮೇಳಗಳು ಮೆರವಣಿಗೆಗೆ ಮೆರುಗು ತಂದವು. ರಾತ್ರಿ 10-30ಕ್ಕೆ ಪ್ರಾರಂಭವಾದ ಮೆರವಣಿಗೆ ಶುಕ್ರವಾರ ಬೆಳಗಿನ ಜಾವ ಶ್ರೀಮಠ ತಲುಪಿತು.

ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಮಹಿಳೆಯರು ಶ್ರೀಮಠದ ಇತಿಹಾಸ, ಪವಾಡಗಳನ್ನು ಜನಪದ ಶೈಲಿಯ ಹಾಡುಗಳ ಪೂಲಕ ವರ್ಣಿಸಿದ್ದು ವಿಶೇಷವಾಗಿತ್ತು.

- - - (-ಫೋಟೋ):

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ