ಬಡವರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Sep 18, 2026, 02:30 AM IST
16ಎಚ್‌ವಿಆರ್‌7 | Kannada Prabha

ಸಾರಾಂಶ

ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ರೋಗಗಳಿಗೆ ತಕ್ಕಂತೆ ಆರೋಗ್ಯ ಕೇಂದ್ರಗಳ ನಿರ್ಮಾಣ ಹಾಗೂ ಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಹಾನಗಲ್ಲ: ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ರೋಗಗಳಿಗೆ ತಕ್ಕಂತೆ ಆರೋಗ್ಯ ಕೇಂದ್ರಗಳ ನಿರ್ಮಾಣ ಹಾಗೂ ಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಹಾನಗಲ್ಲ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ನೂತನ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಿಡ್ನಿ ವೈಫಲ್ಯದಿಂದ ಬಳಲುವ ಬಡವರಿಗೆ ಡಯಾಲಿಸಿಸ್ ಮಾಡಿಸಲು ನೆರವಾಗುವಂತೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಯಾಲಿಸಿಸ್ ಯಂತ್ರಗಳ ಸಂಖ್ಯೆಯನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಪ್ರತಿನಿತ್ಯ ಅನೇಕ ರೋಗಿಗಳಿಗೆ ಅನುಕೂಲವಾಗುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಿರುವ ಕೀಮೋಥೆರಪಿ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ 20 ಸಾವಿರದಿಂದ 40 ಸಾವಿರ ಜನರಿಗೆ ಲಭ್ಯವಾಗುವಂತೆ ಹೆಚ್ಚಿಸಲಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ರಿಂದ 10 ಲಕ್ಷ ರುಪಾಯಿವರೆಗೆ ಹೆಚ್ಚುವರಿ ಆರೋಗ್ಯ ವಿಮಾ ಸೌಲಭ್ಯವನ್ನು ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಜಾರಿಗೆ ತಂದಿದ್ದು, ಪ್ರಸ್ತುತ ವರ್ಷ ರಾಜ್ಯ ಸರ್ಕಾರವೂ ಇದನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

​ಆರೋಗ್ಯ ಕೇಂದ್ರಗಳ ಮೇಲ್ವಿಚಾರಣೆ: ಗ್ರಾಮೀಣರಿಗೆ ಆರೋಗ್ಯ ಸೇವೆಗಳನ್ನು ಹತ್ತಿರವಾಗಿಸಲು ಮತ್ತು ಗಂಭೀರ ಕಾಯಿಲೆಗಳಿಗೆ ಆರ್ಥಿಕ ಹೊರೆಯಾಗದಂತೆ ತಡೆಯಲು ಸರ್ಕಾರ ನಿರಂತರವಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನೂತನ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯೂ (7 ದಿನಗಳು) ಸೌಲಭ್ಯ ಸಿಗುವ ದೃಷ್ಟಿಯಿಂದ ವೈದ್ಯಕೀಯ ಸಿಬ್ಬಂದಿ ಲಭ್ಯವಿರಲಿದ್ದು, ಕೇಂದ್ರದ ಒಳಗಡೆ ಒಂದು ಸಣ್ಣ ಪ್ರಯೋಗಾಲಯದ (ಲ್ಯಾಬ್) ವ್ಯವಸ್ಥೆಯೂ ಇದೆ ಎಂದರು.

​ಆಯುಷ್ಮಾನ್ ಯೋಜನೆ: ಪ್ರಧಾನಿ ನರೇಂದ್ರ ಮೋದಿಯವರಿಂದ ಆರಂಭವಾದ ಆಯುಷ್ಮಾನ್ ಯೋಜನೆಯು ದೇಶದ ಬಡವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶ ಹೊಂದಿದೆ. ಕರ್ನಾಟಕದಲ್ಲಿ ಸುಮಾರು ಎರಡು ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಣೆಯಾಗಿದ್ದು, ಈಗಾಗಲೇ 90 ಲಕ್ಷಕ್ಕೂ ಅಧಿಕ ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಗ್ರಾಮೀಣರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ಸುಸ್ಥಿರ ಸಮಾಜವನ್ನು ನಿರ್ಮಿಸುವುದು ಈ ಕೇಂದ್ರಗಳ ಮುಖ್ಯ ಉದ್ದೇಶವಾಗಿದೆ ಎಂದರು.

​​ಆರೋಗ್ಯ ಕೇಂದ್ರಗಳ ಅಂತರದ ನಿಯಮ: ಸರ್ಕಾರದ ನಿಯಮದ ಪ್ರಕಾರ ಎರಡು ಆರೋಗ್ಯ ಕೇಂದ್ರಗಳ ನಡುವೆ 25 ಕಿ.ಮೀ ಅಂತರವಿರಬೇಕು, ಆದರೆ ಹಾನಗಲ್ ತಾಲೂಕಿನಲ್ಲಿ ಇದು 21 ಕಿ.ಮೀ ಆಗುತ್ತದೆ. ತಿಳವಳ್ಳಿ ಕೇಂದ್ರ ಸ್ಥಳದಿಂದ 16 ಕಿ.ಮೀ ಅಂತರದಲ್ಲಿ ಆನವಟ್ಟಿ ಸಿಎಚ್‍ಸಿ ಇದೆ, 22 ಕಿ.ಮೀ ಅಂತರದಲ್ಲಿ ಅಕ್ಕಿಆಲೂರು ಇದೆ ಹಾಗೂ 25 ಕಿ.ಮೀ ಅಂತರದಲ್ಲಿ ಹಾನಗಲ್ ಇದೆ. 30 ಕಿ.ಮೀ ಗೆ ಒಂದರಂತೆ ಆರೋಗ್ಯ ಕೇಂದ್ರವಿರಬೇಕು ಎಂಬ ನಿಯಮವಿದೆ ಎಂದರು.

​​​​ವೈದ್ಯರ ಕೊರತೆ: ರಾಜ್ಯದಲ್ಲಿ ಪ್ರತಿ 25,000 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದರೆ, ಬೆಂಗಳೂರು ಹಾಗೂ ಸುತ್ತಮುತ್ತ ಪ್ರತಿ 5 ರಿಂದ 6 ಸಾವಿರ ಜನರಿಗೆ ಒಬ್ಬ ವೈದ್ಯರಿದ್ದಾರೆ. ಹಾನಗಲ್ ತಾಲೂಕಿನಲ್ಲಿ ಇದುವರೆಗೆ ಆಗದಿರುವ ಅಭಿವೃದ್ಧಿ ಕೆಲಸಗಳನ್ನು ಶೀಘ್ರವಾಗಿ ಮಾಡಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಾಧಿಕಾರಿಗಳು, ಲ್ಯಾಬ್ ತಂತ್ರಜ್ಞರು ಹಾಗೂ ನರ್ಸ್‌ಗಳ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದರು.

​ಆಯುಷ್ಮಾನ್ ಯೋಜನೆ: ಆಯುಷ್ಮಾನ್ ಯೋಜನೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಹೆಚ್ಚಿನ ಅನುದಾನ ಒದಗಿಸಲು ಅಗತ್ಯ ಶಿಫಾರಸುಗಳನ್ನು ಮಾಡಲಾಗಿದೆ.

​ಶಾಸಕರಾದ ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಮಹೇಶ ಕಮಡೊಳ್ಳಿ, ಜಿ ಪಂ ಮಾಜಿ ಸದಸ್ಯ ಬಸವರಾಜ ಹಾದಿಮನಿ, ಟಾಕನಗೌಡ ಪಾಟೀಲ, ರಾಘವೇಂದ್ರ ತಹಶೀಲ್ದಾರ, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವೀರಪ್ಪ ಬೈಲವಾಳ, ಮುಖಂಡರುಗಳಾದ ಸುನೀಲಗೌಡ ಪಾಟೀಲ್, ಶಿವಲಿಂಗಪ್ಪ ತಲ್ಲೂರ, ಬಸವರಾಜ ಚವ್ಹಾಣ, ಮಹೇಶ ಬಣಕಾರ, ಪುಟ್ಟಪ್ಪ ನರೇಗಲ್ಲ, ಕೊಟ್ರುಗೌಡ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಪೋಷಣೆಯೇ ಬಾಲ್ಯದ ಅಡಿಪಾಯ: ಸುಮಂಗಲ
ಸಂಸ್ಕಾರಯುತ ಸಮಾಜ ಕಟ್ಟಲು ಗಣೇಶೋತ್ಸವ ಪ್ರೇರಣೆ: ಕಾಮತ್