ಕನ್ನಡಪ್ರಭ ವಾರ್ತೆ ಮಂಗಳೂರು
ಮರಳು ಸಮಸ್ಯೆಗೆ ಪರಿಹಾರ ಕಲ್ಪಿಸದೆ ನಿರ್ಮಾಣ ಕಾಮಗಾರಿ ವಲಯವನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ವಿರೋಧಿಸಿ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಶುಕ್ರವಾರ ನಗರದ ಪುರಭವನದ ಎದುರು ಪ್ರತಿಭಟನೆ ನಡೆಯಿತು.ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್, ಕೆನರಾ ಬಿಲ್ಡರ್ಸ್ ಅಸೋಸಿಯೇಶನ್, ಕ್ರೆಡೈ ಮಂಗಳೂರು, ಕರಾವಳಿ ಸಿಮೆಂಟ್ ಡೀಲರ್ಸ್ ಅಸೋಸಿಯೇಶನ್, ಸ್ಟೀಲ್ ಡೀಲರ್ಸ್ ಅಸೋಸಿಯೇಶನ್, ಪೈಂಟ್ ಹಾರ್ಡ್‌ವೇರ್ ಡೀಲರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ವರ್ಗದ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಗಣಿ ಇಲಾಖೆಗೆ ಧಿಕ್ಕಾರ ಕೂಗಿದರು.
ದ.ಕ. ಜಿಲ್ಲೆಯಲ್ಲಿ ಸಿಆರ್‌ಝಡ್ ಹಾಗೂ ನಾನ್ ಸಿಆರ್‌ಝೆಡ್ ವಲಯಗಳಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆ ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇಂದಿನ ಪ್ರತಿಭಟನೆಗೂ ಸ್ಪಂದನ ಸಿಗದಿದ್ದರೆ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು ಅಲ್ಲದೆ ಕಾಮಗಾರಿ ಸ್ಥಗಿತಗೊಳಿಲಾಗುವುದು ಎಂದು ದ.ಕ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಎಚ್ಚರಿಕೆ ನೀಡಿದರು.ಮರಳು ಸಮಸ್ಯೆ ಸುಮಾರು ೧೨ ವರ್ಷದಿಂದ ಜಿಲ್ಲೆಯಲ್ಲಿ ಇದೆ. ಸಕಾಲಕ್ಕೆ ಮರಳು ಸಿಗದ ಕಾರಣ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕಟ್ಟಡ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ಜಿಲ್ಲೆ ಮಾತ್ರವಲ್ಲ ಹೊರ ಜಿಲ್ಲೆ, ಹೊರ ರಾಜ್ಯದ ಕಾರ್ಮಿಕರು ಕಂಗಾಲಾಗಿದ್ದಾರೆ. ಅದಲ್ಲದೆ ನಿರ್ಮಾಣ ಕಾಮಗಾರಿಯನ್ನು ಅವಲಂಬಿಸಿರುವ ಇತರ ಹಲವು ವಲಯವೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಮಹಾಬಲ ಕೊಟ್ಟಾರಿ ಹೇಳಿದರು.
ಸಂಘದ ಉಪಾಧ್ಯಕ್ಷ ಸತೀಶ್ ಕುಮಾರ್ ಜೋಗಿ, ದಿನಕರ ಸುವರ್ಣ, ಕಾರ್ಯದರ್ಶಿ ದೇವಾನಂದ, ಕೋಶಾಧಿಕಾರಿ ಸುರೇಶ್ ಜೆ., ಸದಸ್ಯರಾದ ಚಂದನ್ದಾಸ್, ಮಧುಸೂದನ್, ಮೋಹನ್ ಬರ್ಕೆ ಕೆನರಾ ಬಿಲ್ಡರ್ ಅಸೋಸಿಯೇಶನ್‌ನ ಬಾಲಸುಬ್ರಹ್ಮಣ್ಯ, ಸಿವಿಲ್ ಎಜಿನಿಯರ್ಸ್ ಅಸೋಸಿಯೇಶನ್‌ನ ವಿಜಯವಿಷ್ಣು ಮಯ್ಯ, ಏಕನಾಥ ದಂಡಕೇರಿ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಸಿಮೆಂಟ್ ಅಸೋಸಿಯೇಶನ್‌ನ ಪುರುಷೋತ್ತಮ ಶೆಣೈ, ಜಿತೇಂದ್ರ ಕೊಟ್ಟಾರಿ ಮತ್ತಿತರಿದ್ದರು.