ಸರ್ಕಾರಿ ನೌಕರಿ ಆಮಿಷ: ಆರು ಜನರ ಬಂಧನ

KannadaprabhaNewsNetwork | Published : Oct 16, 2024 12:35 AM

ಸಾರಾಂಶ

ಜಿಲ್ಲೆಯ ಮುಂಡರಗಿ ಪಟ್ಟಣದ ಸುಮಾರು 39 ವಿದ್ಯಾವಂತ ಯುವಕರಿಗೆ ಕೋರ್ಟ್ ಹಾಗೂ ಸರ್ಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿರುವ ಈ ಖತರ್ನಾಕ್ ಗ್ಯಾಂಗ್ ಕೋಟಿ ಕೋಟಿಗಟ್ಟಲೇ ಮೋಸ ಮಾಡಿದೆ.

ಗದಗ: ಜಿಲ್ಲೆಯ ಮುಂಡರಗಿ ಮತ್ತು ಸುತ್ತಲಿನ ಭಾಗದಲ್ಲಿನ 39ಕ್ಕೂ ಹೆಚ್ಚಿನ ಯುವಕರಿಗೆ ನ್ಯಾಯಾಲಯಗಳಲ್ಲಿನ ಅಟೆಂಡರ್ ಸೇರಿದಂತೆ ವಿವಿಧ ಕೆಳ ಹಂತದ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ, ₹3.30 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರಲ್ಲಿ ರಾಜಕೀಯ ಪಕ್ಷದ ಮುಖಂಡನಿರುವುದು ಗಮನಾರ್ಹ. ಜಿಲ್ಲೆಯ ಮುಂಡರಗಿ ಪಟ್ಟಣದ ಸುಮಾರು 39 ವಿದ್ಯಾವಂತ ಯುವಕರಿಗೆ ಕೋರ್ಟ್ ಹಾಗೂ ಸರ್ಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿರುವ ಈ ಖತರ್ನಾಕ್ ಗ್ಯಾಂಗ್ ಕೋಟಿ ಕೋಟಿಗಟ್ಟಲೇ ಮೋಸ ಮಾಡಿದೆ. ಕೇವಲ ಗದಗ ಜಿಲ್ಲೆ ಮಾತ್ರವಲ್ಲ ರಾಜ್ಯದ ನಾನಾ ಕೋರ್ಟ್‌ಗಳಲ್ಲಿ, ಸಿಪಾಯಿ ಹಾಗೂ ಪ್ರೋಸೆಸ್ ಸರ್ವರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

ಸರ್ಕಾರಿ ನೌಕರಿ ಆಸೆಗಾಗಿ ಜಮೀನು, ಮನೆ ಮಾರಿ ಲಕ್ಷ ಲಕ್ಷ ಹಣ ನೀಡಿದವರೂ ಇದ್ದಾರೆ. ಮೊದ ಮೊದಲು ನೌಕರಿ ಆದೇಶ ಪ್ರತಿ ತೋರಿಸಿ ನಂಬಿಸಿದ್ದಾರೆ. ಬೇರೆ ಬೇರೆ ಊರುಗಳಿಗೆ ಕರೆಸಿಕೊಂಡು ಸುಳ್ಳು ಆದೇಶದ ಪ್ರತಿಗಳನ್ನು ನೀಡಿ ಮೋಸ ಮಾಡಿದ್ದಾರೆ. ಸುಳ್ಳು ಆದೇಶಗಳನ್ನು ತಯಾರು ಮಾಡಿ ಹಣ ನೀಡಿದ ಉದ್ಯೋಗಾಕಾಂಕ್ಷಿಗಳಿಗೆ ನೀಡಿದ್ದಾರೆ ಎನ್ನುವುದು ನಂತರ ಗೊತ್ತಾಗಿದೆ. ಉದ್ಯೋಗವೂ ಸಿಗದೆ ಹಣವೂ ಮರಳಿ ಸಿಗದಾಗ ಯುವಕರು, ಅವರ ಪಾಲಕರು ಎಚ್ಚೆತ್ತುಕೊಂಡು ಹಣ ಕೇಳುತ್ತಿದ್ದಂತೆ ಅವರಲ್ಲಿ ಕೆಲವರಿಗೆ ಚೆಕ್ ನೀಡಿ ಮೋಸ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಜನ ಹಣ ಸಂಗ್ರಹಿಸಿದ ಮುಂಡರಗಿ ಪಟ್ಟಣದ ಮಧ್ಯವರ್ತಿ ನಾಗಭೂಷಣ ಹಿರೇಮಠ ಅವರನ್ನು ಹಿಡಿದು ಕೇಳಿದಾಗ ಅವನು ತಾನು ಸಂಗ್ರಹಿಸಿದ ಹಣ ನೀಡಿದ ವ್ಯಕ್ತಿಗಳ ಹೆಸರು ಸಮೇತ ಗದಗ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾನೆ.

ದೂರಿನ ಆಧಾರದಲ್ಲಿ ನಾಗಭೂಷಣ ಅವರ ಸಂಬಂಧಿಗಳಾದ ಅನ್ನದಾನೇಶ್ವರ ಹಿರೇಮಠ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಕಿಂಗ್‌ಪಿನ್ ಹೊಸದುರ್ಗದ ನಿವಾಸಿ ತಿಪ್ಪೇಸ್ವಾಮಿ ಎಂದು ತಿಳಿದು ಬಂದಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ತಿಪ್ಪೇಸ್ವಾಮಿ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು ಎನ್ನುವುದು ಗಮನಾರ್ಹ. ಚೀಟಿಂಗ್ ಕೇಸ್

ಮುಂಡರಗಿ ಪಟ್ಟಣದ ಕೆಲ ನಿವಾಸಿಗಳು ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಪ್ರಮುಖ ಕಿಂಗ್‌ಪಿನ್ ತಿಪ್ಪೇಸ್ವಾಮಿ ಎನ್ನುವುದು ತನಿಖೆಯಿಂದ ಗೊತ್ತಾಗುತ್ತಿದೆ. ತಿಪ್ಪೇಸ್ವಾಮಿ ಹಾಗೂ ಡಾ. ಜಿ.ಎನ್. ವೆಂಕಟರೆಡ್ಡಿ ಅವರನ್ನು ಸದ್ಯ ಅರೆಸ್ಟ್ ಮಾಡಿ ಅವರಿಂದ ಎರಡು ಐಶಾರಾಮಿ ಕಾರು ವಶಕ್ಕೆ ಪಡೆಯಲಾಗಿದೆ. ಇದೊಂದು‌ ಚೀಟಿಂಗ್ ಕೇಸ್ ಆಗಿದ್ದು, ನಮ್ಮ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿ.ಎಸ್. ನೇಮಗೌಡ ಗದಗ ಎಸ್ಪಿ

Share this article